ಅಪರಾಧ ಪ್ರಕರಣಗಳ ಕಡಿವಾಣಕ್ಕೆ ವಿಶೇಷ ಕಾರ್ಯಾಚರಣೆ

KannadaprabhaNewsNetwork |  
Published : Jul 03, 2024, 12:17 AM IST
ಕಾರ್ಯಾಚರಣೆ | Kannada Prabha

ಸಾರಾಂಶ

ಬರೋಬ್ಬರಿ 248 ಪೊಲೀಸ್‌ ಅಧಿಕಾರಿಗಳು ಹಾಗೂ ಸಿಬ್ಬಂದಿ ಏಕಕಾಲಕ್ಕೆ ಮಹಾನಗರದ ವಿವಿಧೆಡೆ ಕಾರ್ಯಾಚರಣೆ ನಡೆಸಿದ್ದಾರೆ. ಹುಬ್ಬಳ್ಳಿ-ಧಾರವಾಡ ನಗರದಲ್ಲಿ 72 ರೌಡಿಶೀಟರ್‌ಗಳ ಮನೆ ಮೇಲೆ ದಾಳಿ ನಡೆಸಿ ತಪಾಸಣೆ ನಡೆಸಲಾಗಿದೆ.

ಹುಬ್ಬಳ್ಳಿ:

ಹುಬ್ಬಳ್ಳಿ-ಧಾರವಾಡ ಮಹಾನಗರದಲ್ಲಿ ಕಳೆದ ಕೆಲ ದಿನಗಳಿಂದ ನಿರಂತರವಾಗಿ ಅಪರಾಧಿಕ ಪ್ರಕರಣಗಳು ಹೆಚ್ಚಾಗಿರುವುದರಿಂದ ಕಂಗೆಟ್ಟಿರುವ ಪೊಲೀಸರು, ಇದೀಗ ಅಪರಾಧ ಪ್ರಕರಣಗಳಿಗೆ ಕಡಿವಾಣ ಹಾಕಲು ಕಾರ್ಯಾಚರಣೆಗೆ ಇಳಿದಿದ್ದಾರೆ. ಇದರ ಭಾಗವಾಗಿ ಸೋಮವಾರ ರಾತ್ರಿ 10ರಿಂದ ಮಂಗಳವಾರ ಬೆಳಗಿನ ಜಾವ 5ರ ವರೆಗೆ ವಿಶೇಷ ಕಾರ್ಯಾಚರಣೆ ನಡೆಸಿದ್ದಾರೆ.

ಬರೋಬ್ಬರಿ 248 ಪೊಲೀಸ್‌ ಅಧಿಕಾರಿಗಳು ಹಾಗೂ ಸಿಬ್ಬಂದಿ ಏಕಕಾಲಕ್ಕೆ ಮಹಾನಗರದ ವಿವಿಧೆಡೆ ಕಾರ್ಯಾಚರಣೆ ನಡೆಸಿದ್ದಾರೆ. ಹುಬ್ಬಳ್ಳಿ-ಧಾರವಾಡ ನಗರದಲ್ಲಿ 72 ರೌಡಿಶೀಟರ್‌ಗಳ ಮನೆ ಮೇಲೆ ದಾಳಿ ನಡೆಸಿ ತಪಾಸಣೆ ನಡೆಸಲಾಗಿದೆ. ರೌಡಿಶೀಟರ್‌ಗಳಿಗೆ ಕಾನೂನು ಬಾಹೀರ ಹಾಗೂ ಅಕ್ರಮ ಚಟುವಟಿಕೆಗಳಲ್ಲಿ ಭಾಗಿಯಾಗದಂತೆ ತಾಕೀತು ಮಾಡಿರುವ ಪೊಲೀಸರು, ಬಾಲಬಿಚ್ಚಿದರೆ ಪರಿಣಾಮ ನೆಟ್ಟಗಿರಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ.ಸರಿಯಾದ ಸಮಯಕ್ಕೆ ಬಾರ್ ಆ್ಯಂಡ್‌ ರೆಸ್ಟೊರೆಂಟ್‌ ಬಂದ್‌ ಮಾಡಬೇಕು. ಇಲ್ಲದಿದ್ದರೆ ಕಾನೂನು ಕ್ರಮದ ಎಚ್ಚರಿಕೆ ನೀಡಿದ್ದಾರೆ. ತಡರಾತ್ರಿ ನಗರದಲ್ಲಿ ಸಂಚರಿಸುತ್ತಿದ್ದ 150ಕ್ಕೂ ಹೆಚ್ಚು ವಾಹನ ತಡೆದು ತಪಾಸಣೆ ಮಾಡಿದ್ದು, ಚೆಕ್‌ಪೋಸ್ಟ್‌ಗಳಲ್ಲಿ ಕೂಡ 200ಕ್ಕೂ ಹೆಚ್ಚು ವಾಹನ ತಪಾಸಣೆ ಮಾಡಲಾಗಿದೆ. ಅನವಶ್ಯಕವಾಗಿ ತಿರುಗಾಡುವರಿಗೆ ಎಚ್ಚರಿಕೆ ನೀಡಿ ಕಳುಹಿಸಲಾಗಿದೆ. ಸಂಶಯಾಸ್ಪದವಾಗಿ ತಿರುಗಾಡುತ್ತಿದ್ದ 90ಕ್ಕೂ ಹೆಚ್ಚು ಜನರ ಬೆರಳು ಮುದ್ರೆಗಳನ್ನು ಸ್ಕ್ಯಾನ್‌ ಮಾಡಿದ್ದು, ಅಪರಾಧ ಪ್ರಕರಣಗಳಲ್ಲಿ ಭಾಗಿಯಾದವರೇ ಎಂಬುದನ್ನು ಪರಿಶೀಲಿಸಲಾಗಿದೆ.ಇದೇ ವೇಳೆ ರಾತ್ರಿ ಗಸ್ತು ತಿರುಗುತ್ತಿದ್ದ ಸಿಬ್ಬಂದಿಗಳನ್ನೂ ತಪಾಸಣೆಗೊಳಪಡಿಸಿದ್ದು ವಿಶೇಷ.

ನಗರದ ಹೊರವಲಯಗಳಲ್ಲಿ ನಿರಂತರವಾಗಿ ಪೆಟ್ರೊಲಿಂಗ್ ಮಾಡಿ ನಿಗಾ ವಹಿಸಲಾಗಿದೆ. 112 ಸಹಾಯವಾಣಿ ವಾಹನಗಳು ಸಹ ಗಸ್ತು ತಿರುಗಲಿದ್ದು, ಸಾರ್ವಜನಿಕರು ಸಹಾಯಕ್ಕೆ ಕರೆಮಾಡಿದ 5 ನಿಮಿಷದೊಳಗೆ ಘಟನಾ ಸ್ಥಳಕ್ಕೆ ಹಾಜರಿರಲಿವೆ. ಇದರೊಂದಿಗೆ ಚೆನ್ನಮ್ಮ ಪಡೆಗಳ ಮೂಲಕ ಜನರಲ್ಲಿ ಜಾಗೃತಿ ಮೂಡಿಸುವ ಕಾರ್ಯವನ್ನು ನಿರಂತರವಾಗಿ ಮಾಡಲಾಗುತ್ತಿದೆ. ಹೊರವಲಯ, ಒಂಟಿ ಮನೆಗಳ ಹತ್ತಿರ ಹೆಚ್ಚಿನ ನಿಗಾ ಇಡಲಾಗುತ್ತಿದೆ. ಮಹಾನಗರದಲ್ಲಿ ಸಾರ್ವಜನಿಕರ ಸುರಕ್ಷತೆಯ ಕಾಪಾಡುವ ಹಾಗೂ ಅಪರಾಧಿಕ ಚಟುವಟಿಕೆ ತಡೆಗಟ್ಟುವ ನಿಟ್ಟಿನಲ್ಲಿ ಈ ರೀತಿಯ ವಿಶೇಷ ಕಾರ್ಯಚರಣೆ ನಿರಂತರವಾಗಿ ನಡೆಸಲಾಗುತ್ತಿದೆ. ರಾತ್ರಿಗಸ್ತು ಸಿಬ್ಬಂದಿ ಬೀಟ್‌ಗಳಿಗೆ ತೆರಳುವ ಮುನ್ನ ಠಾಣೆಯಲ್ಲಿ ರೋಲಕಾಲ್ (ಹಾಜರಿ) ಮೂಲಕ ಕಟ್ಟುನಿಟ್ಟಿನ ಸೂಚನೆ ನೀಡಿ ಕಾರ್ಯಕ್ಷಮತೆ ಹೆಚ್ಚಿಸುವ ಕ್ರಮಕೈಗೊಳ್ಳಲಾಗುತ್ತಿದೆ.

ಕಳೆದ ಎರಡ್ಮೂರು ತಿಂಗಳಲ್ಲಿ ಕೊಲೆ, ಸುಲಿಗೆ, ಕೊಲೆಯತ್ನದಂತಹ ಘಟನೆಗಳು ಹೆಚ್ಚಾಗುತ್ತಿವೆ. ಪೊಲೀಸರು ಹೆಚ್ಚಿನ ನಿಗಾ ವಹಿಸಬೇಕೆಂದು ಸಾರ್ವಜನಿಕರ ಒತ್ತಡ ಇತ್ತು. ಈ ಹಿನ್ನೆಲೆಯಲ್ಲಿ ಪೊಲೀಸರು, ರಾತ್ರಿ ಗಸ್ತು ಹೆಚ್ಚಿಸಿದ್ದಾರೆ. ಜತೆ ಜತೆಗೆ ವಿಶೇಷ ಕಾರ್ಯಾಚರಣೆ ನಡೆಸಿದ್ದಾರೆ. ಇದು ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆಗೆ ಪಾತ್ರವಾಗಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸರ್ಕಾರಿ ಭೂಮಿ ಒತ್ತುವರಿಗೆ ಅವಕಾಶ ನೀಡಲ್ಲ: ಡಿಸಿಎಂ
ಏಕಾದಶಿ ಪ್ರಯುಕ್ತ ಶರವಣ ಟ್ರಸ್ಟ್‌ನಿಂದ ಲಕ್ಷ ಲಡ್ಡು ಹಂಚಿಕೆ