ಬಸವನಗುಡಿ ಶ್ರೀಸಾಯಿ ಪಾರ್ಟಿ ಹಾಲ್‌ನಲ್ಲಿ ಸೋಮವಾರ ವಿಧಾನ ಪರಿಷತ್ ಸದಸ್ಯ ಟಿ.ಎ.ಶರವಣ ಅವರು 1 ಲಕ್ಷ ಲಡ್ಡು ಪ್ರಸಾದ ಹಂಚಿಕೆ ಮಾಡುತ್ತಿರುವುದು. ನಟಿ ಅನುಷಾ ರೈ ಇದ್ದರು.

ಕನ್ನಡಪ್ರಭ ವಾರ್ತೆ ಬೆಂಗಳೂರು

ಶರವಣ ಚಾರಿಟಬಲ್‌ ಟ್ರಸ್ಟ್‌ ವತಿಯಿಂದ ವೈಕುಂಠ ಏಕಾದಶಿ ಪ್ರಯುಕ್ತ ಮಂಗಳವಾರ ಭಕ್ತಾದಿಗಳಿಗೆ ಲಡ್ಡು ಪ್ರಸಾದ ವಿತರಣೆಗಾಗಿ ನಗರದ ಎಲ್ಲ ವೆಂಕಟೇಶ್ವರ ದೇವಾಲಯಗಳಿಗೆ ಒಂದು ಲಕ್ಷ ಲಡ್ಡುಗಳನ್ನು ಹಂಚಿಕೆ ಮಾಡಲಾಯಿತು.

ಶ್ರೀಸಾಯಿ ಗೋಲ್ಡ್‌ ಪ್ಯಾಲೇಸ್‌ ಮಾಲೀಕ ಹಾಗೂ ವಿಧಾನ ಪರಿಷತ್‌ ಸದಸ್ಯ ಟಿ.ಎ.ಶರವಣ ಅವರು ಸೋಮವಾರ ಬಸವನಗುಡಿಯ ಶ್ರೀಸಾಯಿ ಪಾರ್ಟಿ ಹಾಲ್‌ನಲ್ಲಿ ಪೂಜಾ ಕಾರ್ಯ ನೆರವೇರಿಸಿ, ಲಡ್ಡು ಪ್ರಸಾದ ಹಂಚಿಕೆ ಪ್ರಾರಂಭಿಸಿದರು.

ಈ ವೇಳೆ ಮಾತನಾಡಿದ ಶರವಣ, ಎಲ್ಲರೂ ತಿರುಪತಿಗೆ ತೆರಳಿ ವೆಂಕಟೇಶ್ವರಸ್ವಾಮಿ ದರ್ಶನ ಮಾಡಲು ಸಾಧ್ಯವಾಗುವುದಿಲ್ಲ.‌ ಹೀಗಾಗಿ ಇಲ್ಲಿಯೇ ತಿರುಪತಿ ಮಾದರಿ ಪ್ರಸಾದ ಸಿಗಬೇಕು ಎಂದು ಈ ವ್ಯವಸ್ಥೆ ಮಾಡಿದ್ದೇನೆ. ವಾರದ ಹಿಂದೆಯೇ 50 ನುರಿತ ಅಡುಗೆ ಭಟ್ಟರ ತಂಡದಿಂದ ಲಡ್ಡು ತಯಾರಿಕೆಯ ಕಾರ್ಯವನ್ನು ಪ್ರಾರಂಭಿಸಲಾಯಿತು. ನಂದಿನಿ‌ ತುಪ್ಪ ಬಳಸಿ, ತಿರುಪತಿ ಲಡ್ಡುವಿನ ರುಚಿಯನ್ನೇ ಹೊಂದಿರುವ ಪರಿಶುದ್ಧ ಹಾಗೂ ಗುಣಮಟ್ಟದ ಲಡ್ಡು ತಯಾರಿಸಲಾಗಿದೆ ಎಂದರು. ಈ ವೇಳೆ ನಟಿ ಅನುಷಾ ರೈ ಉಪಸ್ಥಿತರಿದ್ದರು.