ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಹೇಳಿಕೆ । ರಾಷ್ಟ್ರೀಯ ಆರೋಗ್ಯ ಕಾರ್ಯಕ್ರಮಗಳ ವಸ್ತು ಪ್ರದರ್ಶನ ಮಳಿಗೆ ಉದ್ಘಾಟನೆಕನ್ನಡಪ್ರಭ ವಾರ್ತೆ ಚಿತ್ರದುರ್ಗ
ಅಕ್ರಮವಾಗಿ ಭ್ರೂಣಲಿಂಗ ಪತ್ತೆ ಹಚ್ಚುವ ಅಥವಾ ಭ್ರೂಣಹತ್ಯೆ ಮಾಡುವ ವೈದ್ಯರು, ಸ್ಕ್ಯಾನಿಂಗ್ ಸೆಂಟರ್‌ಗಳು ಹಾಗೂ ಗರ್ಭಿಣಿಯರಿಗೆ ಒತ್ತಾಯಿಸುವ ಸಂಬಂಧಿಕರು ಮತ್ತು ದಲ್ಲಾಳಿಗಳ ವಿರುದ್ಧ ಮಾಹಿತಿ ನೀಡುವ ಸಾರ್ವಜನಿಕರಿಗೆ 1 ಲಕ್ಷ ರು. ಬಹುಮಾನ ನೀಡಲಾಗುವುದು ಎಂದು ಜಿಲ್ಲಾಧಿಕಾರಿ ಟಿ.ವೆಂಕಟೇಶ್ ತಿಳಿಸಿದರು.ನಗರದ ತೋಟಗಾರಿಕೆ ಇಲಾಖೆಯಲ್ಲಿ ಮೂರು ದಿನಗಳ ಕಾಲ ಆಯೋಜಿಸಲಾಗಿದ್ದ ಫಲಪುಷ್ಪ ಪ್ರದರ್ಶನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಆರೋಗ್ಯ ಇಲಾಖೆ ವತಿಯಿಂದ ಹಮ್ಮಿಕೊಂಡಿದ್ದ ರಾಷ್ಟ್ರೀಯ ಆರೋಗ್ಯ ಕಾರ್ಯಕ್ರಮಗಳ ವಸ್ತು ಪ್ರದರ್ಶನ ಮಳಿಗೆಯನ್ನು ಉದ್ಘಾಟಿಸಿ ಮಾತನಾಡಿ, ಇಂತಹ ಅಕ್ರಮಗಳ ವಿರುದ್ಧ ಗುಪ್ತ ಕಾರ್ಯಾಚರಣೆ ನಡೆಸಿ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಲು ಸಹಾಯ ಮಾಡುವ ಮಾಹಿತಿದಾರರಿಗೆ ಈ ಪುರಸ್ಕಾರ ನೀಡಲಾಗುವುದು ಎಂದರು.ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ಮಾತನಾಡಿ, ಬಾಲ್ಯ ವಿವಾಹಕ್ಕೆ ಕಡಿವಾಣ ಹಾಕಿ ಬಾಲ ಗರ್ಭಿಣಿಯರಾಗದಂತೆ ನಿಗಾ ವಹಿಸಬೇಕು. ಆ ಮೂಲಕ ತಾಯಿ ಮರಣ ಮತ್ತು ಶಿಶು ಮರಣದಂತಹ ಘಟನೆಗಳನ್ನು ತಪ್ಪಿಸಬೇಕು ಎಂದರು.
ಜಿಲ್ಲಾ ಆರ್‌ಸಿಎಚ್ ಅಧಿಕಾರಿ ಡಾ.ಡಿ.ಎಂ.ಅಭಿನವ ಮಾತನಾಡಿ, ಹೆಣ್ಣು ಸಂತಾನ ಕಡಿಮೆಯಾದಂತೆ ಮುಂದೊಂದು ದಿನ ಮನುಕುಲದಲ್ಲಿ ಭಾರಿ ಅಘಾತ ಸಂಭವಿಸಲಿದೆ. ಹೆಣ್ಣು ಮಕ್ಕಳ ಮೇಲೆ ಅತ್ಯಾಚಾರ, ಬಲತ್ಕಾರ ಹಾಗೂ ದೌರ್ಜನ್ಯಗಳಾಗದಂತೆ ತಡೆಯಲು ಹೆಣ್ಣು ಸಂತಾನವನ್ನು ಹೆಚ್ಚಿಸಿ ಲಿಂಗಾನುಪಾತದಲ್ಲಿ ಸಮಾನತೆಯನ್ನು ಕಾಯ್ದುಕೊಳ್ಳುವುದು ಒಳಿತು ಎಂದರು.ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಜಿ.ಪಿ. ರೇಣುಪ್ರಸಾದ್ ಮಾತನಾಡಿದರು. ವಸ್ತು ಪ್ರದರ್ಶನ ಮಳಿಗೆಯಲ್ಲಿ ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿ ಬಿ.ಮೂಗಪ್ಪ ಮತ್ತು ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಬಿ.ಜಾನಕಿ ಅವರು ತಾಯಿ ಮಕ್ಕಳ ಆರೋಗ್ಯ, ಕುಟುಂಬ ಕಲ್ಯಾಣ ತಾತ್ಕಾಲಿಕ ವಿಧಾನಗಳು ಹಾಗೂ ವಿಶೇಷವಾಗಿ ಪುರುಷ ಸಂತಾನ ನಿರೋಧ ಶಸ್ತ್ರಚಿಕಿತ್ಸೆ ಕುರಿತು ಮಾಹಿತಿ ನೀಡಿದರು. ಕೀಟಜನ್ಯ ರೋಗಗಳ ಹತೋಟಿಗೆ ಸೊಳ್ಳೆಯ ಮರಿಗಳು ಹಾಗೂ ಗಪ್ಪಿ ಮೀನುಗಳ ಪ್ರದರ್ಶನದೊಂದಿಗೆ ಸಾರ್ವಜನಿಕರಿಗೆ ಆರೋಗ್ಯ ಶಿಕ್ಷಣ ನೀಡಲಾಯಿತು.
ಈ ವೇಳೆ ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಆರ್.ಶಿವಣ್ಣ, ತಾಲೂಕು ಆರೋಗ್ಯಾಧಿಕಾರಿ ಡಾ.ಬಿ.ವಿ.ಗಿರೀಶ್, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಕೃಷ್ಣ ನಾಯಕ್, ನಮ್ಮ ಕ್ಲಿನಿಕ್ ವೈದ್ಯಾಧಿಕಾರಿ ಡಾ.ಅಕ್ಷತಾ, ಆರೋಗ್ಯ ನಿರೀಕ್ಷಣಾಧಿಕಾರಿಗಳಾದ ನಾಗರಾಜ, ರವಿಶಂಕರ್ ಹಾಗೂ ಆಶಾ ಕಾರ್ಯಕರ್ತೆಯರು ಉಪಸ್ಥಿತರಿದ್ದರು.