ಮರಿಯಮ್ಮನಹಳ್ಳಿ: ವೈಕುಂಠ ಏಕಾದಶಿ ಅಂಗವಾಗಿ ಮಂಗಳವಾರ ಪಟ್ಟಣ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಲ್ಲಿ ವೈಕುಂಠ ಏಕಾದಶಿಯನ್ನು ಭಕ್ತರು ಶ್ರದ್ಧಾ ಭಕ್ತಿಯಿಂದ ಆಚರಿಸಿದರು.ಶ್ರೀವೆಂಕಟೇಶ್ವರಸ್ವಾಮಿ ದೇವಸ್ಥಾನಗಳಲ್ಲಿ ಬೆಳಗಿನ ಜಾವದಿಂದಲೇ ಸ್ವಾಮಿಯ ವಿಗ್ರಹಕ್ಕೆ ಅಭಿಷೇಕ ಮಾಡಿ ವಿವಿಧ ಹೂವುಗಳಿಂದ ಅಲಂಕರಿಸಿ ಭಕ್ತರ ದರ್ಶನಕ್ಕೆ ವ್ಯವಸ್ತೆ ಕಲ್ಪಿಸಲಾಗಿತ್ತು. ವೈಕುಂಠ ಏಕಾದಶಿಯ ದಿನ ಶ್ರೀ ವೆಂಕಟೇಶ್ವರಸ್ವಾಮಿಯ ದರ್ಶನ ಪಡೆದರೆ ವೈಕುಂಠ ಪ್ರಾಪ್ತಿಯಾಗುತ್ತದೆ ಎಂಬ ನಂಬಿಕೆಯಿಂದ ಭಕ್ತರು ಬೆಳಗಿನ ಜಾವದಿಂದಲೇ ವೆಂಕಟೇಶ್ವರಸ್ವಾಮಿಯ ದರ್ಶನಕ್ಕೆ ಸಾಲಾಗಿ ನಿಂತು ದೇವರ ದರ್ಶನ ಪಡೆದುಕೊಂಡು, ವಿಶೇಷ ಪೂಜೆ ಸಲ್ಲಿಸಿದರು.
ಪಟ್ಟಣದ ನಗರೇಶ್ವರ ದೇವಸ್ಥಾನದ ಶ್ರೀ ವೆಂಕಟೇಶ್ವರಸ್ವಾಮಿ ದೇವಸ್ಥಾನದಲ್ಲಿ ವೆಂಕಟೇಶ್ವರಸ್ವಾಮಿಗೆ ಬೆಳಗ್ಗೆ ಕ್ಷೀರಾಭಿಷೇಕ, ಅಷ್ಟೋತ್ತರ ಅರ್ಚನೆ, ನೈವೇದ್ಯ, ಮಹಾಮಂಗಳಾರತಿ, ನಂತರ 108 ಕೃತಕ ರಜತಾಪುಷ್ಪಾರ್ಚನೆ, ವಿವಿಧ ಬಗೆಯ 1 ಲಕ್ಷ ತುಳಸಿ, ಪುಷ್ಪಾಗಳಿಂದ ಅರ್ಚನೆ, ವಿಷ್ಣು ಸಹಸ್ರನಾಮ ಪಾರಾಯಣ ನಂತರ ಮಹಾಮಂಗಳಾರತಿ ಸೇರಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದವು.
ಬೆಳಗ್ಗೆಯಿಂದಲೇ ಭಕ್ತರು ಶ್ರೀ ವೆಂಕಟೇಶ್ವರಸ್ವಾಮಿಯ ದರ್ಶನ ಪಡೆಯಲು ಸಾಲಿನಲ್ಲಿ ನಿಂತು ದೇವರ ದೇರ್ಶನ ಪಡೆದುಕೊಂಡು ಪುನೀತರಾದರು. ವೈಕುಂಠ ಏಕಾದಶಿಯ ಅಂಗವಾಗಿ ದೇವಸ್ಥಾನವನ್ನು ತಳಿರು ತೋರಣ-ಹೂಗಳಿಂದ ಅಲಂಕರಿಸಲಾಗಿತ್ತು.ಶ್ರೀ ವೆಂಕಟೇಶ್ವರಸ್ವಾಮಿಯ ದರ್ಶನ ಪಡೆದ ಭಕ್ತರಿಗೆ ಲಡ್ಡು ಪ್ರಸಾದ ವಿತರಿಸಲಾಯಿತು. ಈ ಸಂಧರ್ಭದಲ್ಲಿ ಆರ್ಯವೈಶ್ಯ ಸಮಾಜ, ವಾಸವಿ ಯುವಜನ ಸಂಘ, ವಾಸವಿ ಮಹಿಳಾ ಸಮಾಜ, ವಾಸವಿ ವನಿತೆಯರ ಸಂಘ, ವಾಸವಿ ಕ್ಲಬ್ ನ ಪದಾಧಿಕಾರಿಗಳು ಉಪಸ್ಥಿತರಿದ್ದರು. ಏಕಾದಶಿ ನಿಮಿತ್ಯ ರುಕ್ಮಿಣಿ ಪಾಂಡುರಂಗ ಪೂಜಾಲಂಕಾರ
ಕೊಟ್ಟೂರು: ವೈಕುಂಠ ಏಕಾದಶಿಯ ದಿನವಾದ ಮಂಗಳವಾರ ಇಲ್ಲಿನ ರುಕ್ಮಿಣಿ ಪಾಂಡುರಂಗ ದೇವಸ್ಥಾನದಲ್ಲಿ ಪೂಜಕರ್ತರು ಬೆಳಗ್ಗೆಯಿಂದ ವಿಶೇಷ ಪೂಜಾ ಸೇವೆ ನೆರವೇರಿಸಿ ನಾನಾ ಹೂವಿನ ಹಾರಗಳೊಂದಿಗೆ ರುಕ್ಮಿಣಿ ವಿಠಲ ಮೂರ್ತಿಯನ್ನು ಅಲಂಕರಿಸಿದರು. ಏಕಾದಶಿಯ ನಿಮಿತ್ತ ನೂರಾರು ಸಂಖ್ಯೆಯ ಭಕ್ತರು ಪಾಂಡುರಂಗ ದೇವಸ್ಥಾನಕ್ಕೆ ಆಗಮಿಸಿ ದರ್ಶನ ಪಡೆದು ನಮಿಸಿದರು. ಭಕ್ತರಿಗೆ ಪ್ರಸಾದವನ್ನು ವಿತರಿಸಲಾಯಿತು, ಭಾವಸಾರ ಕ್ಷತ್ರಿಯ ಸಮಾಜದ ಅಧ್ಯಕ್ಷ ಪೀಸೆ ಪ್ರಭುದೇವ್, ಉಪಾಧ್ಯಕ್ಷ ಡೋಂಗರಿ ವಿಜಯ ಕುಮಾರ್, ಎಲ್. ವಾಸುದೇವ ರಾವ್, ರಮೇಶ್ ರಾವ್ ಎಚ್. ಕೊಟ್ರೇಶ್, ಸುರೇಶ್ ರಾವ್ ರಾಂಪುರ, ಮಾರುತಿ ರಾವ್, ಮತ್ತಿತರರು ಇದ್ದರು.ಶ್ರೀಲಕ್ಷ್ಮಿ ವೆಂಕಟರಮಣಸ್ವಾಮಿಗೆ ವಿಶೇಷ ಪೂಜೆ
ಕಂಪ್ಲಿ: ವೈಕುಂಠ ಏಕಾದಶಿ ಪರ್ವದ ಪ್ರಯುಕ್ತ ಪಟ್ಟಣದ ಎಸ್.ಎನ್.ಪೇಟೆಯ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ಮಂಗಳವಾರ ಶ್ರೀಲಕ್ಷ್ಮಿ ವೆಂಕಟರಮಣಸ್ವಾಮಿಗೆ ವಿಶೇಷ ಪೂಜೆ, ಅಲಂಕಾರ ಹಾಗೂ ಧಾರ್ಮಿಕ ವಿಧಿವಿಧಾನಗಳು ಶ್ರದ್ಧಾಭಕ್ತಿಯಿಂದ ಜರುಗಿದವು. ಈ ಮಹೋತ್ಸವದ ಅಂಗವಾಗಿ ದೇವಸ್ಥಾನದಲ್ಲಿ ಉತ್ತರದ್ವಾರವನ್ನು ತೆರೆಯಲಾಗಿದ್ದು, ಭಕ್ತರು ಸಾಲಾಗಿ ನಿಂತು ಉತ್ತರದ್ವಾರ ಮೂಲಕ ಶ್ರೀಹರಿಯ ದರ್ಶನ ಪಡೆದು ಪುನೀತರಾದರು.ಕಾರ್ಯಕ್ರಮದಲ್ಲಿ ಶ್ರೀಮನ್ನಾರಾಯಣಾಶ್ರಮದ ಪರಮಹಂಸ ನಾರಾಯಣ ವಿದ್ಯಾಭಾರತಿ ಶ್ರೀಗಳು ಸಾನ್ನಿಧ್ಯ ವಹಿಸಿ ಮಾತನಾಡಿ, ಸನಾತನ ಶಾಸ್ತ್ರಗಳು ಹಾಗೂ ಪುರಾಣಗಳ ಪ್ರಕಾರ ವೈಕುಂಠ ಏಕಾದಶಿಯಂದು ವೈಕುಂಠ ಲೋಕದಲ್ಲಿ ಶ್ರೀಮನ್ನಾರಾಯಣನ ಸನ್ನಿಧಿ ಲಭ್ಯವಿರುತ್ತದೆ ಎಂಬ ನಂಬಿಕೆ ಇದೆ. ಈ ದಿನ ದೇವತೆಗಳೇ ಬ್ರಾಹ್ಮೀ ಮುಹೂರ್ತದಲ್ಲಿ ಶ್ರೀಹರಿಯ ದರ್ಶನ ಪಡೆಯುತ್ತಾರೆ ಎಂಬ ಐತಿಹ್ಯವಿದೆ ಎಂದು ವಿವರಿಸಿದರು.ವೈಕುಂಠ ಏಕಾದಶಿ ಪ್ರಯುಕ್ತ ದೇವಸ್ಥಾನದಲ್ಲಿ ಶ್ರೀಲಕ್ಷ್ಮಿ ವೆಂಕಟರಮಣಸ್ವಾಮಿಗೆ ಪಂಚಾಮೃತಾಭಿಷೇಕ, ಮಹಾಭಿಷೇಕ, ಅಷ್ಟೋತ್ತರ ಶತನಾಮ ಮಹಾಪೂಜೆ ಸೇರಿದಂತೆ ವಿವಿಧ ವಿಶೇಷ ಸೇವೆಗಳು ಜರುಗಿದವು. ದೇವಾಲಯವನ್ನು ವಿದ್ಯುತ್ ದೀಪಗಳು, ಹೂವಿನ ಅಲಂಕಾರಗಳಿಂದ ಭಕ್ತಿಭಾವ ಮೂಡುವಂತೆ ಅಲಂಕರಿಸಲಾಗಿತ್ತು.ಸೇವಾ ಧರ್ಮದರ್ಶಿಗಳಾದ ವೈಷ್ಣವಿ ಕೃಷ್ಣಮೂರ್ತಿ, ಲಲಿತಾರಾಣಿ ಗಿರೀಶ್, ರೂಪಾ ಗುರುಪ್ರಸಾದ್, ಸವಿತಾ ಶಶಿಧರ್, ಭಗವತಿ, ಭವ್ಯ ವಿಷ್ಣುರಾಜ್, ಹರಿಪ್ರಿಯ, ಆಶ್ವತ್ಥನಾರಾಯಣ, ಜಯಂತ್ ಶ್ರೀವತ್ಸವ ಸೇರಿದಂತೆ ಅನೇಕರು ಸೇವೆಯಲ್ಲಿ ತೊಡಗಿಸಿಕೊಂಡಿದ್ದರು.ಸದ್ಭಕ್ತರಾದ ಮೇಸ್ತಿ ವೆಂಕಟೇಶ, ಕೆ.ಕೃಷ್ಣ ಸೇರಿದಂತೆ ಸರ್ವ ಸಮುದಾಯಗಳ ಭಕ್ತರು ಭಾಗವಹಿಸಿದ್ದರು. ಇದೇ ವೇಳೆ ಪಟ್ಟಣದ ಡಾ.ರಾಜಕುಮಾರ್ ರಸ್ತೆಯ ಗುಡ್ಡದ ತಿಮ್ಮಪ್ಪ ದೇವಸ್ಥಾನದಲ್ಲಿಯೂ ವೈಕುಂಠ ಏಕಾದಶಿ ಪ್ರಯುಕ್ತ ವಿಶೇಷ ಪೂಜಾದಿಗಳು ನೆರವೇರಿದವು. ಗುರುರಾಜ ಸೇವಾ ಮಂಡಳಿಯ ವತಿಯಿಂದ ಅಮೃತಶಿಲಾರಾಮಚಂದ್ರ ದೇವರ ಉತ್ಸವವನ್ನು ಭಕ್ತಿಭಾವದಿಂದ ನಡೆಸಲಾಯಿತು.