ಮಾಗಡಿ: ತಾಲೂಕಿನಲ್ಲಿ ಮಳೆ ಕೊರತೆಯಿಂದಾಗಿ ರೈತರು ಸಂಕಷ್ಟ ಎದುರಿಸುತ್ತಿದ್ದು, ಮಳೆಗಾಗಿ ಪ್ರಾರ್ಥಿಸಿ ತಾಲೂಕಿನ ವೀರೇಗೌಡನದೊಡ್ಡಿ ಗ್ರಾಮಸ್ಥರು ಶ್ರೀ ಸಿದ್ಧೇಶ್ವರ (ಸಿದ್ಧಪಾಜಿ) ಬೆಟ್ಟದಲ್ಲಿ ವಿಶೇಷ ಪೂಜೆ ಸಲ್ಲಿಸಿದರು.
ಮುಂಗಾರು ಆರಂಭದ ವೇಳೆಯಲ್ಲಿ ಮಳೆ ಬರದಿದ್ದಾಗ ಗ್ರಾಮಸ್ಥರು ಒಟ್ಟಾಗಿ ಬೆಟ್ಟದ ಮೇಲೆ ಒಬ್ಬಟ್ಟು ತಯಾರಿಸಿ ದೇವರಿಗೆ ನೈವೇದ್ಯ ಮಾಡುವುದು ಇಲ್ಲಿನ ಹಳೆಯ ಪ್ರತೀತಿಯಾಗಿದೆ. ಬೆಟ್ಟದ ಮೇಲೆಯೇ ಶುದ್ಧವಾಗಿ ಒಬ್ಬಟ್ಟು ಹಾಗೂ ಊಟ ತಯಾರಿಸಿ ದೇವರಿಗೆ ವಿಶೇಷ ಪೂಜೆ ಸಲ್ಲಿಸಿ ಪ್ರಸಾದ ಹಂಚಲಾಗುತ್ತದೆ. ಹೀಗೆ ಪೂಜೆ ಸಲ್ಲಿಸಿದ ಒಂದೆರಡು ದಿನಗಳಲ್ಲಿ ಮಳೆಯಾಗಿರುವ ಹಲವು ಉದಾಹರಣೆಗಳು ಮತ್ತು ನಂಬಿಕೆಗಳು ಈ ಭಾಗದಲ್ಲಿದೆ.
ಸಿದ್ಧದೇವರ ಬೆಟ್ಟಕ್ಕೆ ಆಗಮಿಸಿದ ಪ್ರತಿಯೊಬ್ಬರಿಗೂ ಪ್ರಸಾದ ರೂಪದಲ್ಲಿ ಅನ್ನ ಸಂತರ್ಪಣೆ ಏರ್ಪಡಿಸಲಾಗಿತ್ತು. ಪೂಜಾ ಕಾರ್ಯಕ್ರಮದಲ್ಲಿ ವೀರೇಗೌಡನದೊಡ್ಡಿ ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು ಭಾಗವಹಿಸಿದ್ದರು.