ಭಾರತೀಯ ಸೇನೆ ಹೆಸರನಲ್ಲಿ ಉಡುಪಿ ಚರ್ಚುಗಳಲ್ಲಿ ವಿಶೇಷ ಪ್ರಾರ್ಥನೆ

KannadaprabhaNewsNetwork |  
Published : May 11, 2025, 11:51 PM IST
11ಚರ್ಚು | Kannada Prabha

ಸಾರಾಂಶ

ಉಡುಪಿ ಧರ್ಮಪ್ರಾಂತ್ಯದ ಎಲ್ಲಾ ಚರ್ಚುಗಳಲ್ಲಿ ಭಾನುವಾರದ ಬಲಿಪೂಜೆಯ ವೇಳೆ ಗಡಿಯಲ್ಲಿ ದೇಶವನ್ನು ಕಾಯುವ ಸೈನಿಕರಿಗೆ ಒಳಿತಾಗುವಂತೆ ಕೋರಿ ವಿಶೇಷ ಪರಮ ಪ್ರಸಾದದ ಆರಾಧನೆಯ ಮೂಲಕ ಧರ್ಮಗುರುಗಳು ಪ್ರಾರ್ಥನೆ ಸಲ್ಲಿಸಿದರು.

ಕನ್ನಡಪ್ರಭ ವಾರ್ತೆ ಉಡುಪಿ

ಭಾರತೀಯ ಕಥೊಲಿಕ್ ಧರ್ಮಾಧ್ಯಕ್ಷರ ಮಂಡಳಿಯ ಸೂಚನೆಯ ಮೇರೆಗೆ ಉಡುಪಿ ಧರ್ಮಪ್ರಾಂತ್ಯದ ಎಲ್ಲಾ ಚರ್ಚುಗಳಲ್ಲಿ ಭಾನುವಾರದ ಬಲಿಪೂಜೆಯ ವೇಳೆ ಗಡಿಯಲ್ಲಿ ದೇಶವನ್ನು ಕಾಯುವ ಸೈನಿಕರಿಗೆ ಒಳಿತಾಗುವಂತೆ ಕೋರಿ ವಿಶೇಷ ಪರಮ ಪ್ರಸಾದದ ಆರಾಧನೆಯ ಮೂಲಕ ಧರ್ಮಗುರುಗಳು ಪ್ರಾರ್ಥನೆ ಸಲ್ಲಿಸಿದರು.

ತಮ್ಮ ಅಧಿಕೃತ ವಾರ್ಷಿಕ ಭೇಟಿಯಲ್ಲಿರುವ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ಡಾ. ಜೆರಾಲ್ಡ್ ಐಸಾಕ್ ಲೋಬೊ ಅವರು ಕಾರ್ಕಳ ತಾಲೂಕಿನ ಬೆಳ್ಮಣ್ ಸಂತ ಜೋಸೆಫರ ಚರ್ಚಿನಲ್ಲಿ ವಿಶೇಷ ಪ್ರಾರ್ಥನಾ ವಿಧಿಯನ್ನು ನೆರವೇರಿಸಿ ದೇಶ ಕಾಯುವ ಸೈನಿಕರಿಗಾಗಿ ಪ್ರಾರ್ಥನೆಯನ್ನು ಸಲ್ಲಿಸಿದರು. ಕ್ರೈಸ್ತ ಧರ್ಮಸಭೆಗೆ ನೂತನ ಜಗದ್ಗುರುವಾಗಿ ಆಯ್ಕೆಯಾಗಿರುವ ಪೋಪ್ 14 ನೇ ಲಿಯೋ ಅವರಿಗೆ ಶುಭಕೋರಿ ವಿಶೇಷ ಆರಾಧನೆಯನ್ನು ಸಲ್ಲಿಸಿದರು.

ಈ ವೇಳೆ ಮಾತನಾಡಿದ ಧರ್ಮಾಧ್ಯಕ್ಷರು ಇಂದು ದೇಶದ ಗಡಿಯಲ್ಲಿ ಭಾರತ ಮತ್ತು ಪಾಕಿಸ್ತಾನದ ನಡುವೆ ಯುದ್ಧ ಭೀತಿ ಆವರಿಸಿದ್ದು ನಮ್ಮ ಸೈನಿಕರು ತಮ್ಮ ಜೀವದ ಹಂಗು ತೊರೆದು ತಮ್ಮ ದೇಶದ ಪ್ರಜೆಗಳ ರಕ್ಷಣೆಗೆ ಕಟಿಬದ್ಧರಾಗಿ ನಿಂತಿದ್ದಾರೆ. ಅವರಿಗಾಗಿ ನಮ್ಮ ಪ್ರಾರ್ಥನೆ ಅನುದಿನವೂ ಇರಬೇಕಾಗಿದೆ ಎಂದರು.

ನೂತನ ಪೋಪ್ ಅವರು ಜಗತ್ತಿನಲ್ಲಿ ಶಾಂತಿ ಸ್ಥಾಪನೆಗೆ, ಸಂವಾದ ಮಾತುಕತೆಗಳ ಮೂಲಕ ಪರಸ್ಪರ ಸಹೋದರರಂತೆ ಬಾಳಲು ಕರೆ ನೀಡಿರುತ್ತಾರೆ. ಅದರಂತೆ ಯುದ್ದದ ಕಾರ್ಮೋಡ ತಿಳಿಗೊಂಡು ಶಾಂತಿ ನೆಲೆಸಲಿ. ಈ ನಿಟ್ಟಿನಲ್ಲಿ ಹಿಂಸೆಯ ಮಾರ್ಗವನ್ನು ಕೈಬಿಟ್ಟು ಶಾಂತಿ ಸ್ಥಾಪನೆಯತ್ತ ಎರಡೂ ದೇಶಗಳೂ ಮುಂದೆ ಬರಲಿ ಎಂದರು.

ಈ ವೇಳೆ ಚರ್ಚಿನ ಧರ್ಮಗುರು ವಂ. ಫ್ರೆಡ್ ಮಸ್ಕರೇನ್ಹಸ್, ಸಹಾಯಕ ಧರ್ಮಗುರು ವಂ. ಅರ್ನಾಲ್ಡ್ ಮತಾಯಸ್, ಕಾರ್ಕಳ ಕ್ರೈಸ್ಟ್ ಕಿಂಗ್ ಚರ್ಚಿನ ಧರ್ಮಗುರು ವಂ.ಕ್ಲೇಮಂಟ್ ಮಸ್ಕರೇನ್ಹಸ್ ಉಪಸ್ಥಿತರಿದ್ದರು.

PREV

Recommended Stories

ಮಹರ್ಷಿ ವಾಲ್ಮೀಕಿ ಕವಿಕುಲದ ಸಾರ್ವಭೌಮ: ಸಾಲವಾಡಗಿ
ಅಪಘಾತದಲ್ಲಿ ಪತ್ರಕರ್ತ ಕಾನಗೊಂಡ ಸಾವು