ಕನ್ನಡಪ್ರಭ ವಾರ್ತೆ ಬೇಲೂರು
ಹಬ್ಬದ ಪ್ರಯುಕ್ತ ಮುಂಜಾನೆಯಿಂದಲೇ ಅಮ್ಮನವರಿಗೆ ವಿವಿಧ ಅಭಿಷೇಕ, ಕಳಸ ಪ್ರತಿಷ್ಠಾಪನೆ ಹಾಗೂ ವಿಶೇಷ ಪೂಜೆ ಕೈಗೊಳ್ಳಲಾಯಿತು. ವರಮಹಾಲಕ್ಷ್ಮಿ ಅಲಂಕಾರದಲ್ಲಿದ್ದ ದೇವಿಯನ್ನು ನಾನಾ ಬಗೆ ಸುಗಂಧಿತ ಪುಷ್ಪಗಳು ಮತ್ತು ದಿವ್ಯ ಆಭರಣಗಳಿಂದ ಶೃಂಗರಿಸಲಾಗಿತ್ತು. ವಿವಿಧ ಹೂವುಗಳಿಂದ ವರ್ಣರಂಜಿತವಾಗಿ ಅಲಂಕೃತಗೊಂಡಿದ್ದ ದೇವಾಲಯದ ಆವರಣದಲ್ಲಿ ಸಾವಿರಾರು ಭಕ್ತಾದಿಗಳು ಸರದಿ ಸಾಲಿನಲ್ಲಿ ನಿಂತು ಶ್ರೀದೇವಿ ದರ್ಶನ ಪಡೆದರು. ಆಗಮಿಸಿದ್ದ ಸಮಸ್ತ ಭಕ್ತರಿಗೆ ಮಹಾಮಂಗಳಾರತಿ, ಪ್ರಸಾದ ಹಾಗೂ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು.ದೇವಾಂಗ ಸಂಘದ ಅಧ್ಯಕ್ಷ ವಸಂತ್ ಶೇಖರ್ ಮಾತನಾಡಿ ದೇವಾಂಗ ಸಂಘದ ವತಿಯಿಂದ ಕಳೆದ 33 ವರ್ಷಗಳಿಂದ ನಿರಂತರವಾಗಿ ವರಮಹಾಲಕ್ಷ್ಮಿ ಪೂಜೆಯನ್ನು ಅತ್ಯಂತ ಶ್ರದ್ಧೆಯಿಂದ ನೆರವೇರಿಸಿಕೊಂಡು ಬರಲಾಗುತ್ತಿದೆ. ಇದರ ಭಾಗವಾಗಿ ಇತ್ತೀಚೆಗೆ ನಡೆದ ಎಸ್ಎಸ್ಎಲ್‌ಸಿ ಹಾಗೂ ಪಿಯುಸಿ ಪರೀಕ್ಷೆಗಳಲ್ಲಿ ಅತ್ಯುನ್ನತ ಅಂಕ ಗಳಿಸಿದ ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಉತ್ತೇಜಿಸಲು ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಗುತ್ತಿದೆ ಎಂದರು.
ಮಾಜಿ ಅಧ್ಯಕ್ಷ ಗಿರಿಯಪ್ಪ ಶೆಟ್ಟಿ ಮಾತನಾಡಿ, ಒಂದು ಕಾಲದಲ್ಲಿ ಸಾಮಾನ್ಯ ಹಂಚಿನ ಮನೆಯಲ್ಲಿದ್ದ ಈ ದೇವಾಲಯವು ಇಂದು ಭಕ್ತರ ಸಹಕಾರದಿಂದ ಬೃಹತ್ ಶ್ರದ್ಧಾಕೇಂದ್ರವಾಗಿ ಬೆಳೆದು ನಿಂತಿದೆ. ಪ್ರಸ್ತುತ ಭರದಿಂದ ಸಾಗುತ್ತಿರುವ ಚೌಡೇಶ್ವರಿ ದೇವಭವನ ನಿರ್ಮಾಣ ಕಾರ್ಯವು ಅಂತಿಮ ಹಂತದಲ್ಲಿದ್ದು, ಬರುವ ಶುಭ ಕಾರ್ತಿಕ ಮಾಸದಲ್ಲಿ ನೂತನ ಭವನ ಲೋಕಾರ್ಪಣೆಗೊಳ್ಳಲಿದೆ ಎಂದು ಹೇಳಿದರು.ಸಮಾರಂಭದಲ್ಲಿ ಸಾಧಕ ವಿದ್ಯಾರ್ಥಿಗಳಿಗೆ ಸನ್ಮಾನಿಸಿ ಪ್ರತಿಭಾ ಪುರಸ್ಕಾರ ನೀಡಲಾಯಿತು. ದೇವಾಂಗ ಸಂಘದ ಪದಾಧಿಕಾರಿಗಳು, ಪ್ರಮುಖರು, ಸಮಾಜದ ಬಂಧುಗಳು ಹಾಗೂ ಭಕ್ತಾದಿಗಳು ಭಾಗವಹಿಸಿ ಶ್ರೀದೇವಿ ಕೃಪೆಗೆ ಪಾತ್ರರಾದರು.