ಕನ್ನಡಪ್ರಭ ವಾರ್ತೆ ಸೋಮವಾರಪೇಟೆ
ತಾಲೂಕಿನ ಪುಷ್ಪಗಿರಿ ಬೆಟ್ಟ ತಪ್ಪಲಲ್ಲಿ ಇರುವ ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮಿ ದೇವಾಲಯದಲ್ಲಿ ವಿರಾಜಪೇಟೆ ಆರಮೇರಿ ಕಳಂಚೇರಿ ಮಠದ ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ನೇತೃತ್ವದಲ್ಲಿ ದೇವರಿಗೆ ರುದ್ರಾಭಿಷೇಕ, ಅಷ್ಟೋತ್ತರ, ಅರ್ಚನೆಯೊಂದಿಗೆ ವಿಶೇಷ ಪ್ರಾರ್ಥನೆ ಸಲ್ಲಿಸಿದರು. ಅರ್ಚಕರಾದ ನಂದೀಶ್ ಶಾಸ್ತ್ರಿ, ಮೋಹನಮೂರ್ತಿ ಶಾಸ್ತ್ರಿ ಹಾಗೂ ಸೋಮಶೇಖರ ಶಾಸ್ತ್ರಿಗಳಿಂದ ಪೂಜಾ ವಿಧಿವಿಧಾನಗಳು ನೆರವೇರಿದವು.
ನಂತರ ಮಾತನಾಡಿದ ಅರಮೇರಿ ಶ್ರೀಗಳು, ನೀರಿಲ್ಲದೆ ಭೂಮಿ ಬಿರಿಯುತ್ತಿದೆ. ನೀರಿಗಾಗಿ ಪಶು ಪಕ್ಷಿಗಳು ಚಡಪಡಿಸುತ್ತಿವೆ. ರೈತಾಪಿವರ್ಗ ತತ್ತರಿಸಿ ಹೋಗಿದ್ದಾರೆ. ಕಾವೇರಿ ಉಗಮ ಸ್ಥಾನ ಕೊಡಗಿನಲ್ಲಿಯೂ ಈ ಭಾರಿ ನದಿ, ಕೆರೆ ಕೆರೆಗಳೆಲ್ಲಾ ಬತ್ತಿ ಹೋಗಿದ್ದು, ನೀರಿಗಾಗಿ ಹಾಹಾಕಾರ ಶುರುವಾಗಿದೆ. ಈ ಭಾಗದ ಜನತೆಯ ಮನಸಿನಲ್ಲಿ ನೆಲೆನಿಂತಿರುವ, ಶಕ್ತಿವಂತ ದೇವಾಲಯ ಪುಷ್ಪಗಿರಿ ಶಾಂತಮಲ್ಲಿಕಾರ್ಜುನ ದೇವಾಲಯವಾಗಿದೆ. ಇಲ್ಲಿನ ಅಕ್ಕಪಕ್ಕದ ಜನರು, ರೈತಾಪಿ ವರ್ಗದವರು ಪ್ರತಿವರ್ಷ ಇಲ್ಲಿಗೆ ಆಗಮಿಸಿ ಬೆಟ್ಟಕ್ಕೆ ಹತ್ತಿ ಪೂಜೆ ಸಲ್ಲಿಸುವುದು ವಾಡಿಕೆ ಎಂದರು.ಈ ಹಿನ್ನೆಲೆಯಲ್ಲಿ ಕೊಡಗು ಹಾಸನ ಮಠಾಧೀಶರ ಪರಿಷತ್ತು ವತಿಯಿಂದ ಸ್ವಾಮೀಜಿಗಳು ದೇವಾಲಯಕ್ಕೆ ಆಗಮಿಸಿ ಶಾಂತಮಲ್ಲಿಕಾರ್ಜುನ ಸ್ವಾಮಿಗೆ ಪೂಜೆ ಸಲ್ಲಿಸಿ, ಲೋಕಕಲ್ಯಾಣಕ್ಕಾಗಿ ಪ್ರಾರ್ಥಿಸಿದ್ದೇವೆ ಎಂದರು.