ಕನ್ನಡಪ್ರಭ ವಾರ್ತೆ ರಾಮನಗರ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಮುಖ್ಯಮಂತ್ರಿ ಆಗಲೆಂದು ಪ್ರಾರ್ಥಿಸಿ ಕಾಂಗ್ರೆಸ್ ಯುವ ಮುಖಂಡರಾದ ಎಟಿಎಂ ಸುನಿಲ್ ಮತ್ತು ಸಂತೋಷ್ ಅವರು ಬಿಳಗುಂಬ ಗ್ರಾಮದ ಬಳಿಯಿರುವ ಶ್ರೀ ಜಲಸಿದ್ದೇಶ್ವರಸ್ವಾಮಿ ದೇವಾಲಯದಲ್ಲಿ ಸೋಮವಾರ ವಿಶೇಷ ಪೂಜೆ ನೆರವೇರಿಸಿದರು.ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡರೊಡಗೂಡಿ ದೇವರಿಗೆ ಪೂಜೆ ಸಲ್ಲಿಸಿದ ನಂತರ ಎಟಿಎಂ ಸುನೀಲ್ ಮತ್ತು ಸಂತೋಷ್ ಮಾತನಾಡಿ, ಯತಿಮುನಿಗಳು ತಪಸ್ಸು ಮಾಡಿದ ಪುಣ್ಯಸ್ಥಳದಲ್ಲಿ ನೆಲೆಸಿರುವ ಶ್ರೀ ಜಲಸಿದ್ದೇಶ್ವರಸ್ವಾಮಿಯ ಸನ್ನಿಧಿಯಲ್ಲಿ ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿ ಆಗಲೆಂದು ಸಂಕಲ್ಪ ಮಾಡಿ ಪೂಜೆ ಸಲ್ಲಿಸಿದ್ದೇವೆ. ಕಳೆದ 40 ವರ್ಷಗಳಿಂದ ಕಾಂಗ್ರೆಸ್ ಪಕ್ಷದ ಶಿಸ್ತಿನ ಸಿಪಾಯಿ ಆಗಿ, ಸಂಘಟನೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಯುವಕರಿಗೆ ಸ್ಪೂರ್ತಿಯಾಗಿದ್ದು, ಅವರಿಗೆ ಸಿಎಂ ಸ್ಥಾನ ನೀಡಿದರೆ ಕಾಂಗ್ರೆಸ್ ಪಕ್ಷಕ್ಕೆ ಮತ್ತಷ್ಟು ಶಕ್ತಿ ಬರುವ ಜೊತೆಗೆ ಸಂಘಟನೆ ಹೆಚ್ಚಲಿದೆ ಎಂದು ಹೇಳಿದರು.ರಾಮನಗರ ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಎ.ಬಿ.ಚೇತನ್ ಕುಮಾರ್ ಮಾತನಾಡಿ, ಡಿ.ಕೆ.ಶಿವಕುಮಾರ್ ಅವರು ಕೆಪಿಸಿಸಿ ಅಧ್ಯಕ್ಷರಾಗಿ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರಲು ಸಾಕಷ್ಟು ಶ್ರಮ ವಹಿಸಿದ್ದಾರೆ. ಪಕ್ಷಕ್ಕಾಗಿ ತನು, ಮನ, ಧನವನ್ನು ತ್ಯಾಗ ಮಾಡಿರುವುದನ್ನು ವರಿಷ್ಠರು ಮರೆಯಬಾರದು ಎಂದು ಹೇಳಿದರು.ಕಾಂಗ್ರೆಸ್ ಮತ್ತು ಪಕ್ಷದ ನಾಯಕರು ಸಂಕಷ್ಟಕ್ಕೆ ಸಿಲುಕಿದಾಗ ಹಾಗೂ ಪಕ್ಷ ಸಂಘಟನೆ ಪ್ರಶ್ನೆ ಎದುರಾದಾಗ ಡಿ.ಕೆ.ಶಿವಕುಮಾರ್ ಬೇಕಾಗುತ್ತದೆ. ಆದರೆ, ಅಧಿಕಾರ ಅನುಭವಿಸುವಾಗ ಮತ್ತೊಬ್ಬರಿಗೆ ಅವಕಾಶ ನೀಡುವುದು ಸರಿಯಲ್ಲ. ಮುಖ್ಯಮಂತ್ರಿ ಹುದ್ದೆ ವಿಚಾರವಾಗಿ ಎದ್ದಿರುವ ಎಲ್ಲ ಗೊಂದಲಗಳಿಗೆ ವರಿಷ್ಠರು ತೆರೆ ಎಳೆಯಬೇಕು. ಡಿ.ಕೆ.ಶಿವಕುಮಾರ್ ಅವರನ್ನು ಮುಖ್ಯಮಂತ್ರಿಯನ್ನಾಗಿ ಮಾಡುವ ಮೂಲಕ ಅವರ ಶ್ರಮಕ್ಕೆ ಕೂಲಿ ಕೊಡಬೇಕೆಂದು ಮನವಿ ಮಾಡಿದರು.ಜಿಲ್ಲಾ ಯುವ ಕಾಂಗ್ರೆಸ್ ಮಾಜಿ ಅಧ್ಯಕ್ಷ ಗುರುಪ್ರಸಾದ್, ನಗರಸಭೆ ಉಪಾಧ್ಯಕ್ಷೆ ಆಯಿಷಾಬಾನು, ತಾಪಂ ಮಾಜಿ ಅಧ್ಯಕ್ಷ ಸಿದ್ದಲಿಂಗೇಗೌಡ, ಹಿರಿಯ ಮುಖಂಡ ರಾಜೇಂದ್ರ, ನಗರಸಭೆ ಸದಸ್ಯೆ ಗಿರಿಜಮ್ಮ ಮಾತನಾಡಿ, ಕಾಂಗ್ರೆಸ್ ಪಕ್ಷದ ಸಿದ್ದಾಂತವನ್ನು ಮೈಗೂಡಿಸಿಕೊಂಡಿರುವ ಪಕ್ಷದ ಶಿಸ್ತಿನ ಸಿಪಾಯಿಯಾಗಿದ್ದಾರೆ. ಅವರಿಗೆ ಅನ್ಯಾಯವಾಗುವುದನ್ನು ನಾವು ಸಹಿಸುವುದಿಲ್ಲ, ಅವರ ಜೊತೆ ನಾವೆಲ್ಲರೂ ಇದ್ದೇವೆ. ಹೈಕಮಾಂಡ್ ಕೊಟ್ಟ ಮಾತಿನಂತೆ ಡಿ.ಕೆ.ಶಿವಕುಮಾರ್ ಅವರನ್ನು ಮುಖ್ಯಮಂತ್ರಿಯನ್ನಾಗಿ ಮಾಡುತ್ತಾರೆ ಎಂಬ ವಿಶ್ವಾಸವಿದೆ. ಉಳಿದಿರುವ ಎರಡೂವರೆ ವರ್ಷಗಳಿಗೆ ಡಿಕೆಶಿ ಅವರನ್ನು ಮುಖ್ಯಮಂತ್ರಿ ಮಾಡಲೇಬೇಕೆಂದು ಕಾಂಗ್ರೆಸ್ ಹೈಕಮಾಂಡನ್ನು ಒತ್ತಾಯಿಸಿದರು.ನಗರಸಭೆ ಮಾಜಿ ಉಪಾಧ್ಯಕ್ಷ ಮುತ್ತುರಾಜು, ಹಿಂದುಳಿದ ಸಮುದಾಯಗಳ ಜಿಲ್ಲಾಧ್ಯಕ್ಷ ರೈಡ್‌ನಾಗರಾಜು, ಬಿಳಗುಂಬ ಗ್ರಾಪಂ ಅಧ್ಯಕ್ಷ ನವೀನ್, ಮಾಜಿ ಅಧ್ಯಕ್ಷ ಪುಟ್ಟಸಿದ್ದೇಗೌಡ, ಬಿಡದಿ ಬ್ಲಾಕ್ ಅಧ್ಯಕ್ಷ ಗಂಗಾಧರ್‌ಗೌಡ, ಅಥ್ಲೆಟಿಕ್ ಸಂಸ್ಥೆಯ ಜಿಲ್ಲಾ ಕಾರ್ಯದರ್ಶಿ ಉಮೇಶ್‌ಬಾಬು, ಮುಖಂಡರಾದ ಉಮಾಶಂಕರ್, ರಾಜೇಂದ್ರ, ಕೆಂಚೇಗೌಡ, ರೇವಣ್ಣ, ಬಿ.ಟಿ.ರಾಜೇಂದ್ರ, ಶಫಿ, ಮೋಹನ, ದೇವರಾಜು, ರಘು, ಸುನಿಲ್, ಗುರುವೇಗೌಡ, ಕೃಷ್ಣ, ವಡೇರಹಳ್ಳಿಚಂದ್ರು, ತಿಬ್ಬಣ್ಣ ಮತ್ತಿತರರು ಹಾಜರಿದ್ದರು....ಕೋಟ್ ....
ಕರ್ನಾಟಕ ವಿಧಾನಸಭೆಗೆ 7 ಬಾರಿ ಪ್ರವೇಶಿಸಿರುವ ಡಿ.ಕೆ.ಶಿವಕುಮಾರ್ ಹಿರಿಯ ನಾಯಕರು . ಅವರಿಗೆ ಮುಖ್ಯಮಂತ್ರಿ ಸ್ಥಾನ ನೀಡುವ ಮೂಲಕ ಬೆಂಗಳೂರು ದಕ್ಷಿಣ ಜಿಲ್ಲೆಯಲ್ಲಿ ಮತ್ತೊಂದು ಇತಿಹಾಸವನ್ನು ಸೃಷ್ಟಿಸಬೇಕು. ಕಾಂಗ್ರೆಸ್ ಪಕ್ಷಕ್ಕಾಗಿ ಹೋರಾಟ ಮಾಡಿರುವ ಅವರ ಕೊಡುಗೆ ಅನನ್ಯವಾದದ್ದು. ಅವರಲ್ಲಿರುವ ಪಕ್ಷ ನಿಷ್ಟೆಯನ್ನು ಗುರುತಿಸಿ ಹೈಕಮಾಂಡ್ ಸೂಕ್ತ ನಿರ್ಧಾರ ಮಾಡಬೇಕು. ಒಂದು ವೇಳೆ ತಪ್ಪು ನಿರ್ಧಾರ ಕೈಗೊಂಡರೆ ಕಾಂಗ್ರೆಸ್ ಪಕ್ಷಕ್ಕೆ ದೊಡ್ಡ ನಷ್ಟ ಉಂಟಾಗುತ್ತದೆ.- ಎಟಿಎಂ ಸುನೀಲ್, ಯುವ ಕಾಂಗ್ರೆಸ್ ಮುಖಂಡರು.24ಕೆಆರ್ ಎಂಎನ್ 2.ಜೆಪಿಜಿರಾಮನಗರ ತಾಲೂಕಿನ ಬಿಳಗುಂಬ ಗ್ರಾಮದ ಬಳಿಯಿರುವ ಶ್ರೀ ಜಲಸಿದ್ದೇಶ್ವರಸ್ವಾಮಿ ದೇವಾಲಯದಲ್ಲಿ ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡರ ಜೊತೆಗೂಡಿ ಯುವ ಮುಖಂಡರು ಸೋಮವಾರ ವಿಶೇಷ ಪೂಜೆ ನೆರವೇರಿಸಿದರು.-----------------------------