ಬೆಂಗಳೂರು,:
ಕಲ್ಯಾಣ ಕರ್ನಾಟಕ ಭಾಗಕ್ಕೆ ವಿಶೇಷ ಸ್ಥಾನಮಾನ ಕಲ್ಪಿಸುವ ಸಂವಿಧಾನದ 371 (ಜೆ) ತಿದ್ದುಪಡಿಯಾಗಿ 10 ವರ್ಷ ಪೂರ್ಣವಾಗಿರುವ ಹಿನ್ನೆಲೆ 371(ಜೆ) ದಶಮಾನೋತ್ಸವ ಮತ್ತು ಇದರ ರೂವಾರಿ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಸನ್ಮಾನ ಸಮಾರಂಭವನ್ನು ಆಯೋಜಿಸಲಾಗಿದೆ ಎಂದು ಬೀದರ್ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಬಿ ಖಂಡ್ರೆ ತಿಳಿಸಿದ್ದಾರೆ.ಇಂದು ಬೆಂಗಳೂರಿನಲ್ಲಿ ಪೌರಾಡಳಿತ ಸಚಿವ ರಹೀಮ್ ಖಾನ್ ಮತ್ತು ವಿಧಾನಪರಿಷತ್ ಸದಸ್ಯ ಅರವಿಂದ ಅರಳಿ ಮತ್ತಿತರರೊಂದಿಗೆ ಸಭೆ ನಡೆಸಿದ ಸಚಿವ ಈಶ್ವರ ಖಂಡ್ರೆ, 371(ಜೆ) ಅನುಷ್ಠಾನದಿಂದಾಗಿ ಹಿಂದುಳಿದ ಕಲ್ಯಾಣ ಕರ್ನಾಟಕ ಭಾಗದ ಸಾವಿರಾರು ಯುವಜನರಿಗೆ ಉದ್ಯೋಗದಲ್ಲಿ ಮತ್ತು ತಾಂತ್ರಿಕ, ವೈದ್ಯಕೀಯ, ಉನ್ನತ ಶಿಕ್ಷಣದಲ್ಲಿ ಮೀಸಲಾತಿ ಲಭ್ಯವಾಗಿದೆ ಎಂದು ತಿಳಿಸಿದರು.
ಹೈದ್ರಾಬಾದ್ ಕರ್ನಾಟಕಕ್ಕೆ ಸಂವಿಧಾನದ 371(ಜೆ) ತಿದ್ದುಪಡಿಯೊಂದಿಗೆ ವಿಶೇಷ ಸ್ಥಾನಮಾನ ದೊರೆತ ಪರಿಣಾಮವಾಗಿ ಈ ಭಾಗದ ಸರ್ವಾಂಗೀಣ ಅಭಿವೃದ್ಧಿಗಾಗಿ ಹೈದ್ರಾಬಾದ್ ಕರ್ನಾಟಕ ಅಭಿವೃದ್ಧಿ ಮಂಡಳಿಯನ್ನು ರಚಿಸಲಾಯಿತು. ಈಗ ಇದು ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿ (ಕೆ.ಕೆ.ಆರ್.ಡಿ.ಬಿ.) ಆಗಿದ್ದು, ವಾರ್ಷಿಕ 3000 ಕೋಟಿ ರು. ಹೆಚ್ಚುವರಿ ಅನುದಾನ ನಮ್ಮ ಭಾಗಕ್ಕೆ ಲಭ್ಯವಾಗುತ್ತಿದೆ ಎಂದರು.ಯುಪಿಎ ಸರ್ಕಾರದ ಅವಧಿಯಲ್ಲಿ ಅಂದಿನ ಪ್ರಧಾನಿ ಡಾ. ಮನಮೋಹನ ಸಿಂಗ್ ಮತ್ತು ಯುಪಿಎ ಅಧ್ಯಕ್ಷರಾಗಿದ್ದ ಸೋನಿಯಾ ಗಾಂಧೀ ಅವರ ಬಳಿಗೆ ಹಲವು ಬಾರಿ ನಿಯೋಗ ತೆಗೆದುಕೊಂಡು ಹೋಗಿ, ಕಲ್ಯಾಣ ಕರ್ನಾಟಕದ ಅಭಿವೃದ್ಧಿಗಾಗಿ 371 (ಜೆ) ತಿದ್ದುಪಡಿಗೆ ಅವಿರತ ಶ್ರಮಿಸಿದ ರೂವಾರಿ, ಬೀದರ್ ಸುಪುತ್ರರು ಹಾಗೂ ರಾಷ್ಟ್ರೀಯ ಕಾಂಗ್ರೆಸ್ ಅಧ್ಯಕ್ಷರಾಗಿರುವ ಮಲ್ಲಿಕಾರ್ಜುನ ಖರ್ಗೆ ಅವರನ್ನು ಈ ದಶಮಾನೋತ್ಸವದ ಸಂದರ್ಭದಲ್ಲಿ ಸನ್ಮಾನಿಸಲು ತಿರ್ಮಾನಿಸಲಾಗಿದೆ ಎಂದು ತಿಳಿಸಿದರು.
ಫೆ.20ರ ಮಂಗಳವಾರ ಬೀದರ್ ನಗರದ ನೆಹರೂ ಕ್ರೀಡಾಂಗಣದಲ್ಲಿ ನಡೆಯಲಿರುವ ಕಾರ್ಯಕ್ರಮಕ್ಕೆ ಸಂಪೂರ್ಣ ಸಹಕಾರ ಮತ್ತು ಬೆಂಬಲ ನೀಡುವಂತೆ ಮತ್ತು ಸಹಸ್ರ ಸಂಖ್ಯೆಯಲ್ಲಿ ಬಂದು ಪಾಲ್ಗೊಳ್ಳುವಂತೆ ವಿವಿಧ ಸಂಘ ಸಂಸ್ಥೆಗಳು, ಕನ್ನಡ ಪರ ಸಂಘಟನೆಗಳು, ದಲಿತ ಸಂಘಟನೆಗಳಿಗೆ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಕಾರ್ಯಾಧ್ಯಕ್ಷರಾದ ಸಚಿವ ಈಶ್ವರ ಖಂಡ್ರೆ ಮನವಿ ಮಾಡಿದರು.