ಚಿರತೆಗಳ ಸೆರೆಗೆ ವಿಶೇಷ ಕಾರ್ಯಪಡೆ

KannadaprabhaNewsNetwork |  
Published : Dec 29, 2025, 01:15 AM IST
್ಿ್ಿ್ಿ | Kannada Prabha

ಸಾರಾಂಶ

ಸಾರ್ವಜನಿಕರ ರಕ್ಷಣೆಗಾಗಿ ಚಿರತೆಗಳ ಸೆರೆಗಾಗಿ ಜಿಲ್ಲಾಡಳಿತ ವಿಶೇಷ ಕಾರ್ಯಪಡೆ ರಚಿಸಲಾಗಿದೆ ಎಂದು ಜಿಲ್ಲಾಧಿಕಾರಿ ಶುಭ ಕಲ್ಯಾಣ್ ತಿಳಿಸಿದ್ದಾರೆ.

ಕನ್ನಡಪ್ರಭ ವಾರ್ತೆ, ತುಮಕೂರುಜಿಲ್ಲೆಯ ತುರುವೇಕೆರೆಯಲ್ಲಿ ಇತ್ತೀಚೆಗೆ ನಡೆದ ಚಿರತೆ ದಾಳಿ ಪ್ರಕರಣದ ಬೆನ್ನಲ್ಲೇ ಚಿಕ್ಕನಾಯಕನಹಳ್ಳಿ ಹಾಗೂ ತಿಪಟೂರು ತಾಲೂಕುಗಳಲ್ಲೂ ಚಿರತೆಗಳ ಹಾವಳಿ ಬಗ್ಗೆ ಸಾರ್ವಜನಿಕರು ಆತಂಕ ವ್ಯಕ್ತಪಡಿಸಿ ದೂರು ಬಂದ ಹಿನ್ನೆಲೆಯಲ್ಲಿ ಸಾರ್ವಜನಿಕರ ರಕ್ಷಣೆಗಾಗಿ ಚಿರತೆಗಳ ಸೆರೆಗಾಗಿ ಜಿಲ್ಲಾಡಳಿತ ವಿಶೇಷ ಕಾರ್ಯಪಡೆ ರಚಿಸಲಾಗಿದೆ ಎಂದು ಜಿಲ್ಲಾಧಿಕಾರಿ ಶುಭ ಕಲ್ಯಾಣ್ ತಿಳಿಸಿದ್ದಾರೆ.ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದವಾರ ತುರುವೇಕೆರೆಯಲ್ಲಿ ನಡೆದ ಚಿರತೆದಾಳಿಯ ಭೀಕರ ಘಟನೆಯ ಬೆನ್ನಲ್ಲೇ ಎಚ್ಚೆತ್ತುಕೊಂಡಿರುವ ಜಿಲ್ಲಾಡಳಿತ, ಚಿರತೆಗಳನ್ನು ಸೆರೆಹಿಡಿಯಲು ಮತ್ತು ಜನರಲ್ಲಿ ಜಾಗೃತಿ ಮೂಡಿಸಲು ಸಮರೋಪಾದಿಯಲ್ಲಿ ಕೆಲಸ ಮಾಡುತ್ತಿದೆ. ವಿಶೇಷ ಕಾರ್ಯಪಡೆಯು ಅರಣ್ಯ ಇಲಾಖೆ, ಕಂದಾಯ ಇಲಾಖೆ ಹಾಗೂ ಗ್ರಾಮ ಪಂಚಾಯತಿ ಸಿಬ್ಬಂದಿಗಳನ್ನು ಒಳಗೊಂಡಿದ್ದು, ಪ್ರತಿ ಗ್ರಾಮಗಳಲ್ಲಿ ಸಾರ್ವಜನಿಕರಿಗೆ ಎಚ್ಚರಿಕೆ ನೀಡಲು ಪ್ರತಿ ಹಳ್ಳಿಯಲ್ಲೂ ಸುರಕ್ಷೆತೆಯ ಭಾಗವಾಗಿ ಸಾರ್ವಜನಿಕರು ಒಂಟಿಯಾಗಿ ಸಂಚರಿಸದಂತೆ ಮತ್ತು ಸಂಜೆ ವೇಳೆ ಎಚ್ಚರಿಕೆಯಿಂದ ಇರುವಂತೆ ಜನರಲ್ಲಿ ಜಾಗೃತಿ ಮೂಡಿಲಾಗುತ್ತಿದೆ ಎಂದು ಹೇಳಿದರು.ಡಿಸೆಂಬರ್ 21 ರಂದು ತುರುವೇಕೆರೆ ತಾಲೂಕಿನ ದಬ್ಬೇಘಟ್ಟ ಹೋಬಳಿಯ ಅರೆಮಲ್ಲೇನಹಳ್ಳಿಯಲ್ಲಿ ಸುಜಾತಾ (35) ಎಂಬ ಮಹಿಳೆ ಕುರಿ ಮೇಯಿಸಲು ಹೋದಾಗ ಚಿರತೆ ದಾಳಿ ನಡೆಸಿ ಮೃತಪಟ್ಟಿದ್ದರು. ಈ ಘಟನೆಯಿಂದ ಸಾರ್ವಜನಿಕರು ಆ ಭಾಗದಲ್ಲಿ ೨೦ಕ್ಕೂ ಹೆಚ್ಚು ಚಿರತೆಗಳಿರುವ ಬಗ್ಗೆ ಆತಂಕ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಬೇರೆ ಜಿಲ್ಲೆಗಳಿಂದ ವಿಶೇಷ ರಾತ್ರಿ ವೀಕ್ಷಣೆಯ ಕ್ಯಾಮೆರಾಗಳನ್ನು ತರಿಸಲಾಗಿದ್ದು, ಚಿರತೆ ಸಂಚಾರವಿರುವ ೩೦ಕ್ಕೂ ಹೆಚ್ಚು ಕಡೆ ಅಳವಡಿಸಿ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.ಚಿರತೆಗಳ ಓಡಾಟ ಹೆಚ್ಚಿರುವ ಜಾಗಗಳಲ್ಲಿ ಹೆಚ್ಚಿನ ಸಂಖ್ಯೆಯ ಬೋನುಗಳನ್ನು ಇರಿಸಲಾಗಿದೆ ಎಂದು ಹೇಳಿದ ಅವರು ಈಗಾಗಲೇ ೮ ವರ್ಷದ ಗಂಡು ಚಿರತೆ ಹಾಗೂ ಹೆಣ್ಣು ಚಿರತೆಯನ್ನು ಸೆರೆಹಿಡಿಯಲಾಗಿದೆ. ಗಂಡು ಚಿರತೆಯನ್ನು ಸುರಕ್ಷಿತವಾಗಿ ಬನ್ನೇರುಘಟ್ಟ ಅರಣ್ಯಕ್ಕೆ ಬಿಡಲಾಗಿದೆ ಎಂದು ಹೇಳಿದರು.ಮೃತ ಸುಜಾತಾ ಅವರ ಕುಟುಂಬಕ್ಕೆ ಸರ್ಕಾರದಿಂದ 5 ಲಕ್ಷ ರು.ಗಳು ಹಾಗೂ ಭದ್ರ ಟೈಗರ್ ರೀಸರ್ವ್ ವತಿಯಿಂದ 15 ಲಕ್ಷ ರು. ಪರಿಹಾರ ನೀಡಲಾಗಿದೆ. ಮೃತ ಮಹಿಳೆಯ ಮಗನ ವಿದ್ಯಾಭ್ಯಾಸಕ್ಕಾಗಿ ಮುಂದಿನ 5 ವರ್ಷಗಳವರೆಗೆ ಪ್ರತಿ ತಿಂಗಳು 4 ಸಾವಿರ ರು. ಆರ್ಥಿಕ ನೆರವು ನೀಡುವುದಾಗಿ ಹೇಳಿದರು.ಬೋನಿಗೆ ಬೀಳದ ಚಿರತೆಗಳನ್ನು ಸೆರೆಹಿಡಿಯಲು ಸರ್ಕಾರ ವಿಶೇಷ ಅನುಮತಿ ನೀಡಿದೆ. ಇದಕ್ಕಾಗಿ ಇಬ್ಬರು ಪಶು ವೈದ್ಯರು ತುರುವೇಕೆರೆಯಲ್ಲಿ ಬೀಡುಬಿಟ್ಟಿದ್ದು, ಚಿರತೆ ಕಂಡ ತಕ್ಷಣ ಚುಚ್ಚುಮದ್ದು ನೀಡಿ ಸೆರೆಹಿಡಿಯಲು ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ ಎಂದರು. ಸಾರ್ವಜನಿಕರ ಸುರಕ್ಷತೆಯೇ ನಮ್ಮ ಮೊದಲ ಆದ್ಯತೆ. ಚಿರತೆ ಹಾವಳಿ ತಡೆಗಟ್ಟಲು ಎಲ್ಲಾ ರೀತಿಯ ಕ್ರಮ ಕೈಗೊಳ್ಳಲಾಗಿದೆ. ಸಾರ್ವಜನಿಕರು ಭಯಪಡದೆ ಇಲಾಖೆಯೊಂದಿಗೆ ಸಹಕರಿಸಬೇಕು ಎಂದು ಸಲಹೆ ನೀಡಿದರು.ಜಿಲ್ಲೆಯ ಅರಣ್ಯ ವ್ಯಾಪ್ತಿಯಲ್ಲಿ ವನ್ಯಮೃಗಗಳ ಸಂಖ್ಯೆ ಹಾಗೂ ಅವುಗಳ ಸಂಚಾರದ ಪಥವನ್ನು ನಿಖರವಾಗಿ ಪತ್ತೆಹಚ್ಚಲು ಬರುವ ಜನವರಿ ತಿಂಗಳಿನಿಂದ ಅಧಿಕೃತ ಸಮೀಕ್ಷೆ ಆರಂಭವಾಗಲಿದೆ. ಕಾಡುಪ್ರಾಣಿಗಳು ಆಹಾರ ಮತ್ತು ನೀರಿಗಾಗಿ ಹೆಚ್ಚಾಗಿ ಯಾವ ಭಾಗಗಳಲ್ಲಿ ಸಂಚರಿಸುತ್ತಿವೆ, ಜಿಲ್ಲೆಯಲ್ಲಿ ಯಾವ ಯಾವ ತಳಿಯ ಪ್ರಾಣಿಗಳು ಎಷ್ಟು ಸಂಖ್ಯೆಯಲ್ಲಿವೆ, ಎಂಬುದನ್ನು ವೈಜ್ಞಾನಿಕವಾಗಿ ದಾಖಲಿಸುವುದು ಈ ಸಮೀಕ್ಷೆಯ ಮುಖ್ಯ ಉದ್ದೇಶವಾಗಿದೆ ಎಂದ ಹೇಳಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪ್ರಧಾನಿ ನರೇಂದ್ರ ಮೋದಿಯವರ ಮನ್ ಕಿ ಬಾತ್ ವೀಕ್ಷಿಸಿದ ಸಂಸದ ಡಾ.ಕೆ.ಸುಧಾಕರ್
ಅರಣ್ಯ ಭೂಮಿ ಕಬಳಿಸುವವರ ವಿರುದ್ಧ ಕ್ರಮಕ್ಕೆ ಸಚಿವರ ಸೂಚನೆ