ಭ್ರೂಣ ಚಿಕಿತ್ಸೆ ನೀಡುವ ವಿಶೇಷ ಕಾರ‍್ಯಾಗಾರಕ್ಕೆ ಚಾಲನೆ

KannadaprabhaNewsNetwork | Published : Apr 21, 2025 12:59 AM

ಸಾರಾಂಶ

ಮಗು ಭ್ರೂಣದಲ್ಲಿರುವಾಗಲೇ ಚಿಕಿತ್ಸೆ ನೀಡಿ ಗುಣಪಡಿಸುವ ಕುರಿತು ತರಬೇತಿ ನೀಡುವ ಎರಡು ದಿನದ ಶಿಫ್ಟ್‌(ಸೆನ್ಸಿಟೈಸೇಷನ್‌ ವರ್ಕ್ ಶಾಪ್‌ ಇನ್‌ ಫೀಟಲ್‌ ಥೆರಪಿ) ಕಾರ‍್ಯಾಗಾರಕ್ಕೆ ನಗರದ ಸಿದ್ಧಗಂಗಾ ವೈದ್ಯಕೀಯ ಮಹಾವಿದ್ಯಾಲಯ ಹಾಗೂ ಸಂಶೋಧನಾ ಸಂಸ್ಥೆಯಲ್ಲಿ ಚಾಲನೆ ನೀಡಲಾಯಿತು.

ಕನ್ನಡಪ್ರಭ ವಾರ್ತೆ, ತುಮಕೂರು

ಮಗು ಭ್ರೂಣದಲ್ಲಿರುವಾಗಲೇ ಚಿಕಿತ್ಸೆ ನೀಡಿ ಗುಣಪಡಿಸುವ ಕುರಿತು ತರಬೇತಿ ನೀಡುವ ಎರಡು ದಿನದ ಶಿಫ್ಟ್‌(ಸೆನ್ಸಿಟೈಸೇಷನ್‌ ವರ್ಕ್ ಶಾಪ್‌ ಇನ್‌ ಫೀಟಲ್‌ ಥೆರಪಿ) ಕಾರ‍್ಯಾಗಾರಕ್ಕೆ ನಗರದ ಸಿದ್ಧಗಂಗಾ ವೈದ್ಯಕೀಯ ಮಹಾವಿದ್ಯಾಲಯ ಹಾಗೂ ಸಂಶೋಧನಾ ಸಂಸ್ಥೆಯಲ್ಲಿ ಚಾಲನೆ ನೀಡಲಾಯಿತು.

ವಿಶ್ವಗುರು ಸ್ಕ್ಯಾನಿಂಗ್‌ ಸೆಂಟರ್‌ ನ ಐದನೇ ವರ್ಷದ ವಾರ್ಷಿಕೋತ್ಸವದ ಹಿನ್ನೆಲೆಯಲ್ಲಿ ನಡೆದ ಕಾರ‍್ಯಾಗಾರ ಉದ್ಘಾಟಿಸಿ ಮಾತನಾಡಿದ ಕಾಲೇಜಿನ ಪ್ರಾಚಾರ್ಯೆ ಡಾ.ಶಾಲಿನಿ ಎಂ, ಶಿಶು ಭ್ರೂಣದಲ್ಲಿರುವಾಗಲೇ ಅನೇಕ ಆನಾರೋಗ್ಯದ ಕಾರಣದಿಂದ ಸಾವನ್ನಪ್ಪುವ ಸಾಧ್ಯತೆಗಳಿರುತ್ತವೆ. ಇದನ್ನು ತಪ್ಪಿಸುವ ಸಲುವಾಗಿ ಭ್ರೂಣದಲ್ಲಿರುವಾಗಲೇ ಮಗುವಿಗೆ ಚಿಕಿತ್ಸೆ ನೀಡುವ ದೇಶದ ಪ್ರಮುಖ ಸಂಸ್ಥೆಗಳಲ್ಲಿ ನಮ್ಮ ಸಿದ್ಧಗಂಗಾ ವೈದ್ಯಕೀಯ ಕಾಲೇಜು ಕೂಡ ಒಂದು. ಇದನ್ನು ವಿಸ್ತರಿಸುವ ಹಾಗೂ ವೃತ್ತಿಪರರಿಗೆ ಅನುಭವ ನೀಡುವ ಕಾರ‍್ಯಾಗಾರ ಇದಾಗಿದ್ದು, ಜೊತೆಗೆ ಕರ್ನಾಟಕದಲ್ಲಿ ಪ್ರಥಮ ಬಾರಿಗೆ ಫೀಟಲ್‌ ಮ್ಯೂಸಿಯಂ ಕೂಡ ಚಾಲನೆಗೊಳ್ಳುತ್ತಿದ್ದು ಹೆಚ್ಚಿನ ಅಧ್ಯಯನಕ್ಕೆ ಸಹಕಾರಿಯಾಗಲಿದೆ ಎಂದರು.

ಫೀಟಲ್‌ ಮೆಡಿಸಿನ್‌ ಸ್ಪೆಷಲಿಸ್ಟ್‌ ಹಾಗೂ ರೇಡಿಯೋ ಡಯಾಗ್ನೋಸಿಸ್‌ ವಿಭಾಗದ ಮುಖ್ಯಸ್ಥ ಡಾ.ಧೃವ ರಾಜ್‌ಗೋಪಾಲ್‌ ಮಾತನಾಡಿ ಕಾರ‍್ಯಾಗಾರ ನಡೆಯುವ ಎರಡು ದಿನಗಳಲ್ಲಿ ವೈದ್ಯರು ಭ್ರೂಣಕ್ಕೆ ರಕ್ತ ಪೂರೈಸುವ, ಲೇಸರ್‌ ಚಿಕಿತ್ಸೆ, ಶ್ವಾಸಕೋಶದ ಸುತ್ತಾ ಸ್ಟಂಟ್‌ ಹಾಕುವ, ಮೈಕ್ರೋವೇವ್‌ ಚಿಕಿತ್ಸೆ ಮುಂತಾದ ಹತ್ತು ಹಲವು ವೈದ್ಯಕೀಯ ವಿಧಾನಗಳನ್ನು ನುರಿತ ತಜ್ಞರಿಂದ ತರಬೇತಿ ಪಡೆಯಲಿದ್ದಾರೆ ಎಂದರು.

ಕೊಚ್ಚಿಯ ಅಮೃತ ವೈದ್ಯಕೀಯ ವಿಶ್ವವಿದ್ಯಾಲಯದ ಹೆಸರಾಂತ ಭ್ರೂಣ ಚಿಕಿತ್ಸಾ ಸ್ಪೆಷಲಿಸ್ಟ್‌ ಡಾ.ವೀವೇಕ್‌ ಕೃಷ್ಣನ್‌ ಹಾಗೂ ಡಾ.ಧೃವ ರಾಜಗೋಪಾಲ್‌ ವಿವಿಧ ಅವಧಿಗಳಲ್ಲಿ ತರಬೇತಿ ನೀಡಲಿದ್ದಾರೆ. ವೈದ್ಯಕೀಯ ಅಧೀಕ್ಷಕ ಡಾ.ನಿರಂಜನಮೂರ್ತಿ, ಫೆಥಾಲಜಿ ವಿಭಾಗದ ಮುಖ್ಯಸ್ಥೆ ಡಾ.ರಶ್ಮಿ ಎಂ.ವಿ, ಅನಾಟಮಿ ವಿಭಾಗದ ಮುಖ್ಯಸ್ಥೆ ಡಾ.ಆಶಾ.ಆರ್‌ ಸೇರಿದಂತೆ ದೇಶದ ಹಲವು ಭಾಗಗಳಿಂದ ಆಗಮಿಸಿದ ವೈದ್ಯರು ಉಪಸ್ಥಿತರಿದ್ದರು.

Share this article