ಕನ್ನಡಪ್ರಭ ವಾರ್ತೆ ಕನಕಪುರ
ಮಹಾಶಿವರಾತ್ರಿ ಹಬ್ಬದ ಹಿನ್ನೆಲೆಯಲ್ಲಿ ತಾಲೂಕಿನ ಶಿವ ದೇವಾಲಯಗಳಲ್ಲಿ ಮುಂಜಾನೆಯಿಂದಲೇ ಧಾರ್ಮಿಕ ಪೂಜಾ ಕಾರ್ಯಗಳನ್ನು ನೆರವೇರಿಸಲಾಯಿತು.ಶಿವರಾತ್ರಿಯ ದಿನ ರಾತ್ರಿ ಪೂಜೆಯೇ ವಿಶೇಷವಾಗಿದ್ದು, ಸಾಮಾನ್ಯವಾಗಿ ಎಲ್ಲ ಹಬ್ಬಗಳಲ್ಲಿಯೂ ದೇವರಿಗೆ ಹಗಲು ಪೂಜೆ ನಡೆಯುತ್ತದೆ. ಆದರೆ ಶಿವರಾತ್ರಿಯಂದು ಮಾತ್ರ ರಾತ್ರಿಯ ಹೊತ್ತು ಪೂಜೆ, ಭಜನೆ ನಡೆಸುವ ಮೂಲಕ ವಿಶೇಷ ಆಚರಣೆಯಿದ್ದು, ರಾತ್ರಿ ಎಂದರೆ ಕತ್ತಲು, ಕತ್ತಲು ಎಂದರೆ ಅಜ್ಞಾನ. ಅಜ್ಞಾನವನ್ನು ಕಳೆದು ಸುಜ್ಞಾನ ಬೆಳಗಿಸು ಎಂದು ಆ ಶಿವನನ್ನು ಬೇಡುವ ಶುಭ ದಿನವೇ ಶಿವರಾತ್ರಿ ದಿನವಾಗಿದ್ದು, ಅಜ್ಞಾನ ತುಂಬಿರುವಲ್ಲಿ ಶಿವ ಸಂಚರಿಸಿ ಜ್ಞಾನ ದೀವಿಗೆಯನ್ನು ಬೆಳಗುತ್ತಾನೆ ಎಂಬ ನಂಬಿಕೆ ಭಕ್ತರಲ್ಲಿ ಇದೆ. ಮೋಡಗಳೇ ಇಲ್ಲದ ಶುಭ್ರ ಆಕಾಶದಲ್ಲಿ ಬಂದಿರುವ ಚಂದ್ರನ ಬೆಳಕಿನಲ್ಲಿ ಶಿವನಿಗೆ ಅಭಿಷೇಕ ಮಾಡಿ ಆರಾಧಿಸಿದರೆ ಅತ್ಯಂತ್ರ ಶ್ರೇಷ್ಠ ಎಂಬ ನಂಬಿಕೆಯಿದ್ದು, ಶಿವರಾತ್ರಿಯ ದಿನದಂದು ಭಕ್ತರು ದಿನವಿಡೀ ಉಪವಾಸ ಹಾಗೂ ಜಾಗರಣೆ ಮಾಡಿ ಶಿವನನ್ನು ಆರಾಧಿಸಿದರೆ ಸಕಲ ಪಾಪಗಳೂ ಕಳೆಯುತ್ತವೆ ಎಂದು ನಂಬಲಾಗಿದೆ.
ಮಳಗಾಳಿನ ಮಹದೇಶ್ವರ ದೇವಾಲಯ, ಶಿವನಹಳ್ಳಿಯ ಶ್ರೀ ವೀರಭದ್ರಸ್ವಾಮಿ ದೇವಾಲಯ, ಬಟ್ಟಲ ಗುಂಡಪ್ಪ ಸಂಗಮ ಬಳಿಯ ಮಡಿವಾಳದ ಶಿವನಾಂಕರೇಶ್ವರ ಹಾಗೂ ಶಿವಲ್ದಾಪ್ಪ ದೇವಾಲಯ ಹಾಗೂ ನಗರದ ಕೆ.ಎನ್ ಎಸ್ ವೃತ್ತದ ಬಳಿಯ ನಂಜುಂಡೇಶ್ವರ ದೇವಾಲಯ, ರೈಸ್ ಮಿಲ್ ಬಳಿಯ ಶಿವಪಾರ್ವತಿ ದೇವಾಲಯ ಸೇರಿದಂತೆ ತಾಲೂಕಿನ ವಿವಿಧ ದೇವಾಲಯಗಳಲ್ಲಿ ಬುಧವಾರ ಬೆಳಗ್ಗೆಯಿಂದಲೇ ಈಶ್ವರನ ಲಿಂಗಕ್ಕೆ ವಿಶೇಷ ಪೂಜೆ, ಅಭಿಷೇಕ, ಅರ್ಚನೆಗಳನ್ನು ಮಾಡಿ ವಿವಿಧ ಹೂವುಗಳಿಂದ ಅಲಂಕರಿಸಿ ಪೂಜಿಸಲಾಯಿತು.ಮುಂಜಾನೆಯಿಂದಲೇ ನೂರಾರು ಸಂಖ್ಯೆಯಲ್ಲಿ ಭಕ್ತರು ಶಿವನ ದೇವಾಲಯಗಳಿಗೆ ಆಗಮಿಸಿ ಶಿವನ ದರ್ಶನ ಪಡೆದು ವಿಶೇಷ ಪೂಜೆ, ಪ್ರಾರ್ಥನೆ ಸಲ್ಲಿಸಿ ಶಿವನಿಗೆ ಪ್ರಿಯವಾದ ಬಿಲ್ವಪತ್ರೆಯನ್ನು ಅರ್ಪಣೆ ಮಾಡಿದರು. ಬೆಳಗಿನ ಜಾವದಿಂದಲೂ ಭಕ್ತರು ಸರತಿ ಸಾಲಿನಲ್ಲಿ ನಿಂತು ದೇವರ ದರ್ಶನ ಪಡೆಯುತ್ತಿದ್ದರು. ಕೆಲವು ದೇವಾಲಯಗಳಲ್ಲಿ ದೇವರ ದರ್ಶನಕ್ಕೆ ಪುರುಷರು ಮತ್ತು ಮಹಿಳೆಯರಿಗೆ ಪ್ರತ್ಯೇಕ ಸರತಿ ಸಾಲು ನಿರ್ಮಿಸಿ ವಿಶೇಷ ವ್ಯವಸ್ಥೆ ಕಲ್ಪಿಸಲಾಗಿತ್ತು, ಜಾಗರಣೆ ಮಾಡುವ ಭಕ್ತ ಮಹಾಶಯರಿಗಾಗಿ ರಾತ್ರಿಯಿಡೀ ನಾಟಕ, ನೃತ್ಯ, ಹರಿಕಥೆ, ಭಜನೆ, ಭಕ್ತಿಗೀತೆಗಳ ಕಾರ್ಯಕ್ರಮಗಳನ್ನು ಶಿವದೇವಾಲಯಗಳಲ್ಲಿ ಏರ್ಪಡಿಸಲಾಗಿತ್ತು.