ಕೊರಟಗೆರೆ: ತಾಲೂಕಿನ ಬಯಲುಸೀಮೆ ಆಂಜನೇಯಸ್ವಾಮಿ ಮತ್ತು ಶನೈಶ್ಚರ ಸ್ವಾಮಿ ದೇವಾಲಯದಲ್ಲಿ ಶನಿವಾರ ಶ್ರಾವಣ ಮಾಸದ ಅಂಗವಾಗಿ ಅಭಿಷೇಕ, ವಿಶೇಷ ಪೂಜೆ, ದೇವರಿಗೆ ವಿಶೇಷ ಅಲಂಕಾರ, ದಾಸೋಹ ವ್ಯವಸ್ಥೆ ಏರ್ಪಡಿಸಲಾಗಿತ್ತು.
ಕಾರ್ಯದರ್ಶಿ ಸಿದ್ದಪ್ಪಾಜಿ ಮಾತನಾಡಿ, ಶ್ರೀ ಶನೈಶ್ಚರ ಸ್ವಾಮಿ ದೇವಾಲಯಕ್ಕೆ ನೂರು ವರ್ಷದ ಇತಿಹಾಸವಿದೆ. ಮೂರು ತಲೆಮಾರಿನಿಂದ ಅರ್ಚಕರೇ ದೇವಾಲಯವನ್ನು ನಡೆಸಿಕೊಂಡು ಬಂದಿದ್ದಾರೆ. ಭಕ್ತರ ಸಹಕಾರದಿಂದ ದೇವಾಲಯವನ್ನು ನಿರ್ಮಿಸಲು ಸಾಧ್ಯವಾಗಿದೆ ಎಂದು ಹೇಳಿದರು.
ದೇವಾಲಯ ನಿರ್ಮಾಣವಾಗಿ ಸುಮಾರು ೧೨ ವರ್ಷಗಳು ಕಳೆದಿದೆ. ಅಂದಿನಿಂದಲೂ ಭಕ್ತರ ಸಹಕಾರದಿಂದ ದೇವಾಲಯದ ಪ್ರತಿಯೊಂದು ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಿಕೊಂಡು ಬಂದಿದ್ದೇವೆ. ಶ್ರಾವಣ ಮಾಸದ ಅಂಗವಾಗಿ ರಾಜ್ಯದ ಮೂಲೆ ಮೂಲೆಯಿಂದ ಜನರು ಆಗಮಿಸಿ ಸ್ವಾಮಿ ದರ್ಶನ ಪಡೆಯುತ್ತಿದ್ದಾರೆ. ಭಕ್ತರಿಗಾಗಿ ದಾಸೋಹ ವ್ಯವಸ್ಥೆ ಸಹ ಕಲ್ಪಿಸಲಾಗಿದೆ. ಕಾರ್ತಿಕದಲ್ಲಿ ದೀಪೋತ್ಸವ, ಬಾದಾಮಿ ಅಮಾವಾಸ್ಯೆಯಲ್ಲಿ ಸ್ವಾಮಿ ಜಯಂತಿ ಕಾರ್ಯಕ್ರಮ ನಡೆಸಿಕೊಂಡು ಬಂದಿದ್ದೇವೆ. ಬಡ ಕುಟುಂಬಗಳ ಕಲ್ಯಾಣಕ್ಕೆ ಕಲ್ಯಾಣ ಮಂಟಪ ನಿರ್ಮಿಸುವ ಕನಸು ಹೊಂದಿದ್ದೇವೆ ಎಂದು ಹೇಳಿದರು.ಗ್ರಾಪಂ ಅಧ್ಯಕ್ಷ ಭೀಮರಾಜು, ಉಪಾಧ್ಯಕ್ಷ ಸಾಸಲು ಸಿದ್ದಣ್ಣ, ಸದಸ್ಯರಾದ ರಾಜೇಂದ್ರ, ಶಿವರಾಜು, ಶಿವರಾಮಯ್ಯ, ನರಸಿಂಹಮೂರ್ತಿ, ಉಮೇಶ್, ಲಕ್ಷ್ಮಣ್, ಶ್ರೀನಿವಾಸ್, ಮಂಜುನಾಥ್, ಲಿಂಗಪ್ಪ, ಲೋಕೇಶ್, ಆನಂದ್, ಪ್ರಸನ್ನಕುಮಾರ್ ಇತರರು ಇದ್ದರು.