ಉರ್ದು ಶಾಲೆಗಳಲ್ಲಿ ಆಂಗ್ಲ ಮಾಧ್ಯಮ ಆರಂಭಿಸಿ: ಡಿಸಿ ಮೊಹಮ್ಮದ್ ರೋಷನ್‌

KannadaprabhaNewsNetwork |  
Published : Sep 01, 2024, 01:56 AM IST
ಜಿಲ್ಲಾಧಿಕಾರಿ ಮೊಹಮ್ಮದ ರೋಷನ್‌ ಅಧ್ಯಕ್ಷತೆಯಲ್ಲಿ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಪ್ರಧಾನ ಮಂತ್ರಿಗಳ 15 ಅಂಶ ಕಾರ್ಯಕ್ರಮಗಳ ಪ್ರಗತಿ ಪರಿಶೀಲನಾ ಸಭೆ ನಡೆಯಿತು. | Kannada Prabha

ಸಾರಾಂಶ

ಬೆಳಗಾವಿ ಜಿಲ್ಲೆಯಲ್ಲಿ ಉರ್ದು ಮಾಧ್ಯಮ ಶಾಲೆಯಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆ ಇದ್ದಲ್ಲಿ ಶಾಲೆಗಳಲ್ಲಿ ಆಂಗ್ಲ ಮಾಧ್ಯಮ ಪ್ರಾರಂಭಿಸಲು ಇಲ್ಲವೆ ಮೌಲಾನಾ ಆಜಾದ್‌ ಶಾಲೆಗಳಾಗಿ ಪರಿವರ್ತಿಸಲು ಅಗತ್ಯ ಕ್ರಮ ವಹಿಸುವಂತೆ ಜಿಲ್ಲಾಧಿಕಾರಿ ಮೊಹಮ್ಮದ ರೋಷನ್‌ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಕನ್ನಡಪ್ರಭ ವಾರ್ತೆ ಬೆಳಗಾವಿ

ಜಿಲ್ಲೆಯಲ್ಲಿ ಉರ್ದು ಮಾಧ್ಯಮ ಶಾಲೆಯಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆ ಇದ್ದಲ್ಲಿ ಶಾಲೆಗಳಲ್ಲಿ ಆಂಗ್ಲ ಮಾಧ್ಯಮ ಪ್ರಾರಂಭಿಸಲು ಇಲ್ಲವೆ ಮೌಲಾನಾ ಆಜಾದ್‌ ಶಾಲೆಗಳಾಗಿ ಪರಿವರ್ತಿಸಲು ಅಗತ್ಯ ಕ್ರಮ ವಹಿಸುವಂತೆ ಜಿಲ್ಲಾಧಿಕಾರಿ ಮೊಹಮ್ಮದ ರೋಷನ್‌ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶನಿವಾರ ನಡೆದ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಪ್ರಧಾನಮಂತ್ರಿಗಳ 15 ಅಂಶ ಕಾರ್ಯಕ್ರಮಗಳ ಪ್ರಗತಿ ಪರಿಶೀಲನೆ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಸದಲಗಾದಲ್ಲಿನ ಮೌಲಾನಾ ಆಜಾದ್ ಶಾಲೆಯಲ್ಲಿ ಶೌಚಾಲಯ ಇಲ್ಲದಿರುವ ಕುರಿತು ದೂರುಗಳು ಬಂದಿವೆ. ಶಿಕ್ಷಣ ಇಲಾಖೆ ಹಾಗೂ ಅಲ್ಪಸಂಖ್ಯಾತರ ಇಲಾಖೆಗಳು‌ ಸಮನ್ವಯದೊಂದಿಗೆ ಶಾಲೆಯಲ್ಲಿ ಶೌಚಾಲಯ ನಿರ್ಮಾಣಕ್ಕೆ ಕೂಡಲೇ ಕ್ರಮ‌ವಹಿಸಬೇಕು ಎಂದು ಸೂಚಿಸಿದರು.

ವಿದ್ಯಾರ್ಥಿನಿಯರ ಸುರಕ್ಷತೆಗೆ ಆದ್ಯತೆ ನೀಡಿ:

ಶಾಲೆಗಳಲ್ಲಿ‌ ವಿದ್ಯಾರ್ಥಿನಿಯರ ಸುರಕ್ಷತೆ ಬಹುಮುಖ್ಯವಾಗಿದ್ದು, ಈ‌ ನಿಟ್ಟಿನಲ್ಲಿ ಶೀ ಬಾಕ್ಸ್ ಎಂಬ ಪೋರ್ಟಲ್ ಪ್ರಾರಂಭವಾಗಿದೆ. ಇದರ ಕುರಿತು ಹೆಚ್ಚಿನ ಜಾಗೃತಿ ಮೂಡಿಸಬೇಕು. ಈ ಪೋರ್ಟಲ್ ಎಲ್ಲ ಇಲಾಖೆಯ ವಸತಿ ಶಾಲೆಗಳಿಗೂ ಅನ್ವಯವಾಗಲಿದ್ದು, ಈ ಕುರಿತು ಜಾಗೃತಿ ಮೂಡಿಸಬೇಕು. ಎಲ್ಲ ಶಾಲೆಗಳಲ್ಲಿ ಸಮಿತಿಗಳನ್ನು ರಚಿಸಿ ಮಾಹಿತಿ ನೀಡಬೇಕು. ಶೀಬಾಕ್ಸ್ ಪೋರ್ಟಲ್ ನಲ್ಲಿ ದಾಖಲಾಗುವ ದೂರುಗಳ ಕುರಿತು ನಿಯಮಿತವಾಗಿ ಟ್ರ್ಯಾಕ್ ಮಾಡಲು ತಿಳಿಸಿದರು.

ಪ್ರಧಾನ‌ಮಂತ್ರಿಗಳ ಹೊಸ 15 ಅಂಶಗಳ‌ ಕಾರ್ಯಕ್ರಮದಡಿ ಫಲಾನುಭವಿಗಳಿಗೆ ನೀಡಲಾಗುವ ಸಾಲ‌ ಯೋಜನೆಗಳ ಕುರಿತು ಸಲ್ಲಿಸಲಾಗುವ ಅರ್ಜಿಗಳನ್ನು ಪರಿಗಣಿಸಿ ಸಾಲ ಮಂಜೂರಾತಿಗೆ ಲೀಡ್ ಬ್ಯಾಂಕ್ ಅಧಿಕಾರಿಗಳು ಕ್ರಮ‌ ವಹಿಸಬೇಕು. ಒಂದು ವೇಳೆ ಬ್ಯಾಂಕ್ ಅಧಿಕಾರಿಗಳು ಅರ್ಜಿ ತಿರಸ್ಕರಿಸಿದಲ್ಲಿ, ಸೂಕ್ತ ಕಾರಣ ನೀಡಬೇಕು ತಿಳಿಸಿದರು.

ಖಾನಾಪುರ ಶಾಸಕ ವಿಠ್ಠಲ ಹಲಗೇಕರ ಮಾತನಾಡಿ, ಖಾನಾಪುರದಲ್ಲಿನ ಮೌಲಾನ ಆಜಾದ್ ಶಾಲೆಯ ಒಂದೇ ಆವರಣದಲ್ಲಿ ಇತರೆ ಶಾಲೆಗಳು ಕಾರ್ಯನಿರ್ವಹಿಸುತ್ತಿವೆ.‌ ಆಜಾದ್ ಶಾಲೆಗೆ ಮೈದಾನ ಸಮೇತ ಪ್ರತ್ಯೇಕವಾಗಿ ಕನಿಷ್ಠ ಒಂದು ಎಕರೆ ಜಾಗ ನೀಡುವಂತೆ ಆಗ್ರಹಿಸಿದರು. ಶಾಸಕರು‌ ಸೂಕ್ತ ಜಾಗ ಗುರುತಿಸಿದಲ್ಲಿ ಅಗತ್ಯ ಕ್ರಮ ವಹಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದರು.

ಅಲ್ಪಸಂಖ್ಯಾತರ ಇಲಾಖೆಯ ಕಲ್ಯಾಣಾಧಿಕಾರಿ ಅಬ್ದುಲ್ ರಶೀದ್ ಮಿರಜನ್ನವರ ನಿರೂಪಿಸಿದರು. ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶ್ರುತಿ, ಕೃಷಿ ಇಲಾಖೆ ಜಂಟಿ ನಿರ್ದೇಶಕ ಶಿವನಗೌಡ ಪಾಟೀಲ, ಮಹಾನಗರ ಪಾಲಿಕೆ ಉಪ ಆಯುಕ್ತ ಉದಯಕುಮಾರ ತಳವಾರ, ಜಿಲ್ಲಾ ಪಂಚಾಯತಿ ಮುಖ್ಯ ಯೋಜನಾ ನಿರ್ದೇಶಕ ಗಂಗಾಧರ ದಿವಟರ, ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಮಹಾಂತೇಶ ಮುರಗೋಡ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಕಲ್ಯಾಣಾಧಿಕಾರಿ ಶಿವಪ್ರಿಯಾ ಕಡೆಚೂರು, ಪಶು ಸಂಗೋಪನಾ ಇಲಾಖೆ ಉಪನಿರ್ದೇಶಕ ಡಾ. ರಾಜೀವ್ ಕೂಲೇರ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕ ಆರ್. ನಾಗರಾಜ ಸೇರಿ ವಿವಿಧ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.ಶಾಲೆಗಳಲ್ಲಿ ಶೌಚಾಲಯದ ವ್ಯವಸ್ಥೆ ಇಲ್ಲದಿದ್ದಲ್ಲಿ ಶಾಲಾ ಮಕ್ಕಳಿಗೆ ತೊಂದರೆಯಾಗುತ್ತದೆ. ಈ ಕುರಿತು ಅಧಿಕಾರಿಗಳು ಗಮನ ಹರಿಸಿ ಶಾಲೆಯಲ್ಲಿ ಕಡ್ಡಾಯವಾಗಿ ಶೌಚಾಲಯ ನಿರ್ಮಿಸಲು ಕ್ರಮ‌ ಕೈಗೊಳ್ಳಬೇಕು. ಸಾಲ ಸೌಲಭ್ಯದ ಅರ್ಜಿಗಳನ್ನು ವಿನಾಕಾರಣ ತಿರಸ್ಕಾರ ಅಥವಾ ವಿಳಂಬ ಮಾಡಿದಲ್ಲಿ ಸಂಬಂಧಿಸಿದ ಬ್ಯಾಂಕುಗಳ‌ ಮೇಲೆ ಕ್ರಮ ಕೈಗೊಳ್ಳಲಾಗುವುದು.

- ರಾಜು(ಆಸೀಫ್‌)ಸೇಠ್‌ ಶಾಸಕ ಬೆಳಗಾವಿ ಉತ್ತರ ಕ್ಷೇತ್ರ

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗೌಡ ಸಾರಸ್ವತ ಬ್ರಾಹ್ಮಣ ಸೇವಾ ಸಂಘದ ವಾಗ್ದೇವಿ ಟವರ್ಸ್‌ಗೆ ಭೂಮಿ ಪೂಜೆ
ಆತ್ಮನಿರ್ಭರ ಭಾರತಕ್ಕೆ ಸ್ವದೇಶಿ ವಸ್ತು ಬಳಕೆ ಅಗತ್ಯ: ನಾರಾಯಣಸಾ ಭಾಂಡಗೆ