ಅಯ್ಯಪ್ಪ ಮಾಲಾಧಾರಿಗಳ ಚಿಕಿತ್ಸೆಗೆ ಬೆಂಗಳೂರಿನ ತಜ್ಞ ವೈದ್ಯೆ

KannadaprabhaNewsNetwork | Published : Dec 25, 2024 12:48 AM

ಸಾರಾಂಶ

ಚಿಕಿತ್ಸೆ ಪಡೆಯುತ್ತಿರುವ 9 ಜನರಲ್ಲಿ 8 ಜನರ ಆರೋಗ್ಯಸ್ಥಿತಿ ಗಂಭೀರವಾಗಿದೆ. ಆದರೆ, ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ. ರೋಗಿಗಳಿಗೆ ಬೇಕಾದ ಅಗತ್ಯ ಚಿಕಿತ್ಸೆ ನೀಡಲಾಗುತ್ತಿದೆ.

ಹುಬ್ಬಳ್ಳಿ:

ಸಿಲಿಂಡರ್‌ ಸೋರಿಕೆಯಿಂದ ಸಂಭವಿಸಿದ ಅಗ್ನಿ ಅವಘಡದಲ್ಲಿ ಗಾಯಗೊಂಡಿರುವ 9 ಜನ ಅಯ್ಯಪ್ಪಸ್ವಾಮಿ ಮಾಲಾಧಾರಿಗಳ ಚಿಕಿತ್ಸೆಗೆ ಇದೀಗ ಬೆಂಗಳೂರಿನಿಂದ ತಜ್ಞೆ ವೈದ್ಯೆಯನ್ನು ಕರೆಯಿಸಲಾಗಿದೆ. ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯ ಬರ್ನ್‌ ಆ್ಯಂಡ್‌ ಪ್ಲಾಸ್ಟಿಕ್‌ ಸರ್ಜರಿ ಸ್ಪೆಷಲಿಸ್ಟ್‌ ಡಾ. ಸ್ಮಿತಾ ಸೇಗು ಮಂಗಳವಾರ ರಾತ್ರಿ ಹುಬ್ಬಳ್ಳಿಗೆ ಆಗಮಿಸಿದ್ದಾರೆ. ಕೆಎಂಸಿಆರ್‌ಐನಲ್ಲಿರುವ ರೋಗಿಗಳನ್ನು ಭೇಟಿ ಮಾಡಿ ಆರೋಗ್ಯ ಸ್ಥಿತಿಗತಿಯ ಕುರಿತು ಮಾಹಿತಿ ಪಡೆದರು.

ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಡಾ. ಸ್ಮಿತಾ, ಚಿಕಿತ್ಸೆ ಪಡೆಯುತ್ತಿರುವ 9 ಜನರಲ್ಲಿ 8 ಜನರ ಆರೋಗ್ಯಸ್ಥಿತಿ ಗಂಭೀರವಾಗಿದೆ. ಆದರೆ, ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ. ರೋಗಿಗಳಿಗೆ ಬೇಕಾದ ಅಗತ್ಯ ಚಿಕಿತ್ಸೆ ನೀಡಲಾಗುತ್ತಿದೆ. ಗಾಯಾಳುಗಳ ಕುಟುಂಬದವರೊಂದಿಗೆ ಚರ್ಚಿಸಿ ಮಾಹಿತಿ ಪಡೆದಿದ್ದೇನೆ. 2-3 ದಿನಗಳ ಕಾಲ ಸ್ಥಿತಿಗತಿ ಅವಲೋಕಿಸಿ ಮುಂದಿನ ಕ್ರಮಕೈಗೊಳ್ಳುವುದಾಗಿ ತಿಳಿಸಿದರು.

ಕೆಎಂಸಿಆರ್‌ಐ ನಿರ್ದೇಶಕ ಡಾ. ಎಸ್‌.ಎಫ್‌. ಕಮ್ಮಾರ ಮಾತನಾಡಿ, ಘಟನೆ ನಡೆದ ನಂತರ ಗಾಯಾಳುಗಳನ್ನು ಆಸ್ಪತ್ರೆಗೆ ಕರೆದುಕೊಂಡು ಬಂದ ನಂತರ ಡಾ. ರವೀಂದ್ರ ಯಲಿಗಾರ ನೇತೃತ್ವದಲ್ಲಿ ಬೇಕಾದ ಅಗತ್ಯ ಚಿಕಿತ್ಸೆ ಮುಂದುವರಿಸಲಾಗಿದೆ. ಸದ್ಯದ ಸ್ಥಿತಿ ಅವಲೋಕಿಸಿದರೆ 8 ರೋಗಿಗಳ ಸ್ಥಿತಿ ಚಿಂತಾಜನಕವಾಗಿದ್ದು, ಓರ್ವ ಗಾಯಾಳುವನ್ನು ಬೇರೊಂದು ವಾರ್ಡ್‌ಗೆ ಸ್ಥಳಾಂತರಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದರು.

ಪ್ರತ್ಯೇಕ ತಂಡ ರಚನೆ:

ಸೋಮವಾರ ರಾತ್ರಿ ಗಾಯಾಳುಗಳಿಗೆ ಔಷಧಿ ಪೂರೈಕೆಯಲ್ಲಿ ಲೋಪವಾಗಿರುವ ಕುರಿತು ಗಮನಕ್ಕೆ ಬಂದಿದೆ. ಈಗಾಗಲೇ ಡಾ. ರಾಜಶೇಖರ ದ್ಯಾಬೇರಿ ನೇತೃತ್ವದ ತಂಡವೊಂದನ್ನು ರಚಿಸಿದ್ದು, ಬುಧವಾರವು ಈ ತಂಡ ಆಗಿರುವ ಘಟನೆಯ ಕುರಿತು ಸಂಪೂರ್ಣ ಮಾಹಿತಿ ಕಲೆಹಾಕಿ ವರದಿ ನೀಡಲಿದೆ. ಹಾಗೊಂದು ವೇಳೆ ಕರ್ತವ್ಯದಲ್ಲಿ ಲೋಪ ಕಂಡುಬಂದಲ್ಲಿ ಅಂತಹವರ ಮೇಲೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು ಎಂದರು.

ಈ ವೇಳೆ ರವೀಂದ್ರ ಯಲಿಗಾರ, ಡಾ. ಈಶ್ವರ ಹಸಬಿ, ಡಾ. ಮುಲ್ಕಿಪಾಟೀಲ ಸೇರಿದಂತೆ ಹಲವರಿದ್ದರು.

Share this article