
ಕನ್ನಡಪ್ರಭ ವಾರ್ತೆ ಮಡಿಕೇರಿ
ನಗರದ ಪತ್ರಿಕಾ ಭವನದಲ್ಲಿ ಭಾನುವಾರ ನಡೆದ ಕೊಡಗು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವಾರ್ಷಿಕ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದರು.
ಪತ್ರಕರ್ತರು ಪ್ರಜಾಪ್ರಭುತ್ವ ವ್ಯವಸ್ಥೆಗೆ ದೊಡ್ಡ ಕೊಡುಗೆ ನೀಡುತ್ತಿದ್ದಾರೆ. ಆದರೆ, ವಾಸ್ತವದಿಂದ ದೂರದ ವರದಿಗಳು ಭಿತ್ತರವಾಗುತ್ತಿರುವುದು ಕಳವಳಕಾರಿ ಸಂಗತಿಯಾಗಿದೆ. ರಾಜಕಾರಣಿ ಅಥವಾ ವ್ಯವಸ್ಥೆಯನ್ನು ವಿಮರ್ಶಿಸುವ ಸ್ವತಂತ್ರ್ಯವಿದೆ. ಸುಳ್ಳುಸುದ್ದಿ ಸೃಷ್ಟಿಸುವುದು ಸಮಾಜಕ್ಕೆ ಅಪಾಯಕಾರಿ. ಪತ್ರಕರ್ತರು ಜವಾಬ್ದಾರಿಯಿಂದ ಕೆಲಸ ಮಾಡಬೇಕು. ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಎತ್ತಿ ಹಿಡಿದು ಪ್ರಜಾಪ್ರಭುತ್ವವನ್ನು ಕಾಪಾಡುವ ಮಹತ್ತರ ಜವಾಬ್ದಾರಿ ಹೊಂದಿದ್ದಾರೆ ಎಂದರು.ಕಾರ್ಯಕ್ರಮ ಉದ್ಘಾಟಿಸಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶಿವಾನಂದ ತಗಡೂರು ಮಾತನಾಡಿ, ಪತ್ರಕರ್ತರು ವಿಶ್ವಾಸಾರ್ಹತೆಯನ್ನು ಗಳಿಸಿಕೊಳ್ಳಬೇಕು. ದಂಧೆಕೋರರು, ನಕಲಿ ಪತ್ರಕರ್ತರನ್ನು ಸುದ್ದಿ ಮನೆಯಿಂದ ದೂರವಿಡಬೇಕು ಎಂದು ಕರೆ ನೀಡಿದರು.
ಉದ್ಯಮಿ ಅವರೆಮಾದಂಡ ಶರಣ್ ಪೂಣಚ್ಚ ಮಾತನಾಡಿ, ಜಾತಿ, ಧರ್ಮ ಬಿಟ್ಟು ಪತ್ರಕರ್ತರು ಒಗ್ಗಟ್ಟಾಗಿರುವುದು ಸಮಾಜಕ್ಕೆ ಮಾದರಿಯಾಗಿದೆ ಎಂದರು.
ಕೊಡಗು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಬಾಚರಣಿಯಂಡ ಅನು ಕಾರ್ಯಪ್ಪ ಪ್ರಾಸ್ತಾವಿಕವಾಗಿ ಮಾತನಾಡಿ, ಸಂಘದಲ್ಲಿ ೨೨ ಪ್ರಶಸ್ತಿಗಳು ಸ್ಥಾಪನೆಯಾಗಿದ್ದು, ಉತ್ತಮ ವರದಿಗಾರರಿಗೆ ಪ್ರಶಸ್ತಿ ಅರಸಿ ಬರುತ್ತದೆ ಎಂದರು.
ಸಂಘದ ಸದಸ್ಯ ಚನ್ನನಾಯಕ ಪ್ರಾರ್ಥಿಸಿ, ಪ್ರಧಾನ ಕಾರ್ಯದರ್ಶಿ ಎಚ್.ಜೆ. ರಾಕೇಶ್ ಸ್ವಾಗತಿಸಿ, ನಿರ್ದೇಶಕ ಪ್ರಭುದೇವ್ ನಿರೂಪಿಸಿ, ಉಪಾಧ್ಯಕ್ಷೆ ವನಿತಾ ಚಂದ್ರಮೋಹನ್ ವಂದಿಸಿದರು.
ಪಂದ್ಯಂಡ ಬೆಳ್ಯಪ್ಪ ಸ್ಮರಣಾರ್ಥ ಅತ್ಯುತ್ತಮ ಗ್ರಾಮೀಣ ವರದಿ, ಮಡಿಕೇರಿ ವಿಧಾನಸಭಾ ಶಾಸಕ ಡಾ. ಮಂತರ್ ಗೌಡ ಅವರು ತಮ್ಮ ಮುತ್ತಜ್ಜಿ ಸಾಕಮ್ಮ ಅವರ ಹೆಸರಿನಲ್ಲಿ ಸ್ಥಾಪಿಸಿರುವ ಕಾಫಿಗೆ ಸಂಬಂಧಿಸಿದ ಅತ್ಯುತ್ತಮ ಪತ್ರಿಕಾ ವರದಿ ಪ್ರಶಸ್ತಿಯನ್ನು ಹಿರಿಕರ ರವಿ, ಸಂಘದ ಮಾಜಿ ಅಧ್ಯಕ್ಷ ಕೆ.ಕೆ. ಶಶಿಧರ್ ಸ್ಮರಣಾರ್ಥ ಕ್ರೀಡಾ ವರದಿ ಪ್ರಶಸ್ತಿಯನ್ನು ಉದಿಯಂಡ ಜಯಂತಿ ಮಂದಣ್ಣ, ಸಂಘದ ಮಾಜಿ ಉಪಾಧ್ಯಕ್ಷ ಸಿ.ಎನ್. ಸುನಿಲ್ ಕುಮಾರ್ ಸ್ಮರಣಾರ್ಥ ಅತ್ಯುತ್ತಮ ವೀಡಿಯೋಗ್ರಫಿ ಪ್ರಶಸ್ತಿಯನ್ನು ನವೀನ್ ಸುವರ್ಣ, ನಿವೃತ್ತ ವಾರ್ತಾಧಿಕಾರಿ ಪಳೆಯಂಡ ಪೊನ್ನಪ್ಪ ಸ್ಥಾಪಿಸಿದ ಅತ್ಯುತ್ತಮ ತನಿಖಾ ವರದಿ ಪ್ರಶಸ್ತಿಯನ್ನು ಜಗದೀಶ್ ಜೋಡುಬೀಟಿ, ರಾಜ್ಯ ಪತ್ರಕರ್ತರ ಸಂಘದ ಉಪಾಧ್ಯಕ್ಷರಾಗಿದ್ದ ಮಂಡಿಬೆಲೆ ರಾಜಣ್ಣ ತಮ್ಮ ತಂದೆ ಮಂಡಿಬೆಲೆ ಶಾಮಣ್ಣ ಅವರ ಹೆಸರಿನಲ್ಲಿ ಸ್ಥಾಪಿಸಿರುವ ಅರಣ್ಯ ವನ್ಯಜೀವಿ ಪ್ರಶಸ್ತಿಯನ್ನು ಎ.ಎನ್. ವಾಸು, ಮರಗೋಡು ಹಾಲು ಉತ್ಪಾದಕರ ಸಹಕಾರ ಸಂಘದ ಸ್ಥಾಪಕಾಧ್ಯಕ್ಷರಾದ ಮಂದ್ರೀರ ಮೋಹನ್ ದಾಸ್ ಅವರು ಪ್ರಗತಿಪರ ಹಾಲು ಉತ್ಪಾದಕರಾಗಿದ್ದ ಉಳುವಾರನ ಶೇಷಗಿರಿ ಅವರ ಹೆಸರಿನಲ್ಲಿ ಸ್ಥಾಪಿಸಿರುವ ಹೈನುಗಾರಿಕೆ ವರದಿ ಪ್ರಶಸ್ತಿಯನ್ನು ಅಣ್ಣೀರ ಹರೀಶ್ ಮಾದಪ್ಪ, ಸ್ವಸ್ಥ ಸಂಸ್ಥೆಯ ಮುಖ್ಯಸ್ಥೆ ಕಾಕಮಾಡ ಗಂಗಾ ಚಂಗಪ್ಪ ತಮ್ಮ ಮಾವ ಕಾಕಮಾಡ ನಾಣಯ್ಯ ಹೆಸರಿನಲ್ಲಿ ಸ್ಥಾಪಿಸಿರುವ ಶೈಕ್ಷಣಿಕ ವರದಿ ಹಾಗೂ ಶಕ್ತಿ ಸಲಹಾ ಸಂಪಾದಕರಾಗಿರುವ ಬಿ.ಜಿ. ಅನಂತಶಯನ ತಮ್ಮ ಹೋಂಸ್ಟೇ ಆಲ್ಫೆನ್ ಗ್ಲೋ ಹೆಸರಿನಲ್ಲಿ ಸ್ಥಾಪಿಸಿರುವ ಅತ್ಯುತ್ತಮ ಸುದ್ದಿ ಛಾಯಾಚಿತ್ರ ಪ್ರಶಸ್ತಿಯನ್ನು ವಿಘ್ನೇಶ್ ಭೂತನಕಾಡು ಅವರಿಗೆ ಪ್ರದಾನ ಮಾಡಲಾಯಿತು.
ಸಂಘದ ಸದಸ್ಯರಾಗಿದ್ದ ಎಸ್.ಎ. ಮುರುಳೀಧರ್ ತಮ್ಮ ತಾಯಿ ಪಾರ್ವತಮ್ಮ ಅಪ್ಪಸ್ವಾಮಿ ಹೆಸರಿನಲ್ಲಿ ಸ್ಥಾಪಿಸಿರುವ ಕೃಷಿ ವರದಿ ಪ್ರಶಸ್ತಿಯನ್ನು ಕಾಯಪಂಡ ಶಶಿ ಸೋಮಯ್ಯ, ಸಮಾಜ ಸೇವಕ ಮೇರಿಯಂಡ ಸಂಕೇತ್ ಪೂವಯ್ಯ ತಮ್ಮ ತಂದೆ ಮೇರಿಯಂಡ ಪೂವಯ್ಯ ಹೆಸರಿನಲ್ಲಿ ಸ್ಥಾಪಿಸಿರುವ ಹುಲಿ ಸಂರಕ್ಷಣೆ ಕುರಿತಾದ ವರದಿ ಪ್ರಶಸ್ತಿಯನ್ನು ಆರ್. ಸುಬ್ರಮಣಿ, ಮಡಿಕೇರಿ ವಿಧಾನಸಭಾ ಕ್ಷೇತ್ರದ ಶಾಸಕ ಡಾ. ಮಂತರ್ ಗೌಡ ಅವರು ತಮ್ಮ ಮುತ್ತಜ್ಜಿ ಸಾಕಮ್ಮ ಅವರ ಹೆಸರಿನಲ್ಲಿ ಸ್ಥಾಪಿಸಿರುವ ಕಾಫಿಗೆ ಸಂಬಂಧಿಸಿದ ಅತ್ಯುತ್ತಮ ದೃಶ್ಯ ಮಾಧ್ಯಮ ವರದಿ ಪ್ರಶಸ್ತಿಯನ್ನು ಮಲ್ಲಿಕಾರ್ಜುನ್, ಜಿಪಂ ಮಾಜಿ ಸದಸ್ಯ ಬಲ್ಲಾರಂಡ ಮಣಿ ಉತ್ತಪ್ಪ ತಮ್ಮ ತಾಯಿ ಬಲ್ಲಾರಂಡ ಮಾಚಮ್ಮ ಹೆಸರಿನಲ್ಲಿ ಸ್ಥಾಪಿಸಿರುವ ರಾಜಕೀಯ ವರದಿ ಪ್ರಶಸ್ತಿಯನ್ನು ಇಸ್ಮಾಯಿಲ್ ಕಂಡಕರೆ ಪಡೆದುಕೊಂಡರು.
ತನ್ನ ತಂದೆ ದಿ. ಎ.ಕೆ. ಸುಬ್ಬಯ್ಯ ಅವರ ಹೆಸರಿನಲ್ಲಿ ಪತ್ರಿಕೆ ಹಾಗೂ ದೃಶ್ಯ ಮಾಧ್ಯಮ ವಿಭಾಗದ ಪ್ರಶಸ್ತಿ ಸ್ಥಾಪಿಸುವುದಾಗಿ ವಿರಾಜಪೇಟೆ ಶಾಸಕ ಎ.ಎಸ್. ಪೊನ್ನಣ್ಣ ಸಮಾರಂಭದಲ್ಲಿ ಘೋಷಿಸಿದರು. ಈಗಾಗಲೇ ಹಲವಾರು ವಿಭಾಗಗಳಲ್ಲಿ ಪ್ರಶಸ್ತಿಗಳಿದ್ದು, ಸೂಕ್ತ ವಿಭಾಗವನ್ನು ಸಂಘದವರು ಗುರುತಿಸಿ ಪ್ರಶಸ್ತಿಯನ್ನು ಮೀಸಲಿಡಬೇಕೆಂದು ಸೂಚಿಸಿದರು.