ಕನ್ನಡಪ್ರಭ ವಾರ್ತೆ ಸುತ್ತೂರು
ಸುತ್ತೂರು ಶ್ರೀ ಕ್ಷೇತ್ರದಲ್ಲಿ ಶ್ರಾವಣಮಾಸದ 19ನೇ ದಿನದ ಪ್ರವಚನ ನೀಡುತ್ತ ಅವರು ತಿಳಿಸಿದರು.
ನಾವು ಆಡುವ ಮಾತುಗಳು ಇತರರಿಗೆ ನೋವುಂಟು ಮಾಡುವಂತಿರಬಾರದು. ಅದಕ್ಕಿಂತ ಮಿಗಿಲಾಗಿ ನಮ್ಮನ್ನು ಸಂಕಷ್ಟಕ್ಕೆ ಸಿಲುಕಿಸುವಂತೆ ಇರಬಾರದು. ಮಾತು ಬೆಣ್ಣೆಯಲ್ಲಿ ಕೂದಲು ತೆಗೆದಂತಿರಬೇಕು ಎಂಬ ಮಾತೊಂದಿದೆ. ಕಠೋರ ಸತ್ಯವನ್ನು ಕೇಳುವವರಿಗೆ ಹಿತವಾಗುವಂತೆ ಹೇಳುವುದೂ ಒಂದು ಕಲೆ. ಗುರುಗಳ ಮಾತು ಕೇಳಿ ಅನೇಕ ಶಿಷ್ಯರು ತಮ್ಮ ಜೀವನ ವಿಧಾನವನ್ನು ಬದಲಾಯಿಸಿಕೊಂಡವರುಂಟು. ಗುರುಗಳ ನಡೆ-ನುಡಿಯನ್ನು ನೋಡಿ ಸಹಸ್ರಾರು ಮಂದಿ ಮನ: ಪರಿವರ್ತನೆ ಮಾಡಿಕೊಂಡಿರುವುದುಂಟು ಎಂದರು.ಮಾತಿನಿಂದ ನಗೆ, ಮಾತಿನಿಂದ ಹಗೆ ಎನ್ನುತ್ತಾರೆ ಸರ್ವಜ್ಞ ಕವಿ. ನುಡಿದರೆ ಮುತ್ತಿನ ಹಾರದಂತಿರಬೇಕು ಎನ್ನುತ್ತಾರೆ ಶರಣರು. ಕೆಟ್ಟ ನುಡಿಯಿಂದ ಯಾರಿಗೂ ಒಳಿತಾಗುವುದಿಲ್ಲ ಎಂಬುದನ್ನು ಇತಿಹಾಸದ ಉದ್ದಕ್ಕೂ ಕಾಣಬಹುದು. ಭೋಜರಾಜನು ಬಾಲ್ಯದಲ್ಲೇ ತಂದೆಯನ್ನು ಕಳೆದುಕೊಳ್ಳುತ್ತಾನೆ. ಆಗ ಸಂಬಂಧಿಯಾದ ಮುಂಜ, ಭೋಜನನ್ನು ಕೊಲ್ಲಿಸಲು ಹವಣಿಸಿ ಕಟುಕರೊಂದಿಗೆ ಕಾಡಿಗೆ ಕಳುಹಿಸುತ್ತಾನೆ. ಆದರೆ ಭೋಜನ ಮುಖ ಸೌಂದರ್ಯಕ್ಕೆ ಮಾರುಹೋದ ಕಟುಕರು ಅವನನ್ನು ಕೊಲ್ಲದೆ ಕಾಡಿನಲ್ಲಿ ಬಿಟ್ಟು ಹಿಂತಿರುಗುತ್ತಾರೆ. ಆಗ ಭೋಜನು ಬರೆದು ಕಳುಹಿಸಿದ ಓಲೆಯೊಂದನ್ನು ಓದಿ ಮುಂಜನ ಮನಃ ಪರಿವರ್ತನೆಯಾಗಿ, ಭೋಜನನ್ನು ಕಾಡಿನಿಂದ ಕರೆಸಿ ಪಟ್ಟಾಧಿಕಾರ ಮಾಡಿ ಭೋಜನನ್ನೇ ರಾಜನನ್ನಾಗಿ ಮಾಡುತ್ತಾನೆ ಎಂದರು.