ಹಾವೇರಿ: ಕಂದಾಯ ಇಲಾಖೆಯ ಕೆಲಸಗಳನ್ನು ಚುರುಕುಗೊಳಿಸುವ ನಿಟ್ಟಿನಲ್ಲಿ ಇ-ಆಫೀಸ್ ವ್ಯವಸ್ಥೆ ಅಳವಡಿಸಲಾಗಿದೆ. ಇದನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳುವ ಮೂಲಕ ಕಡತಗಳನ್ನು ತುರ್ತಾಗಿ ವಿಲೇ ಮಾಡಬಹುದು. ಇದರಿಂದ ಜನರ ಕೆಲಸಗಳನ್ನು ವಿಳಂಬ ಮಾಡದೇ ತುರ್ತಾಗಿ ಮಾಡಿಕೊಡಬಹುದಾಗಿದೆ ಎಂದು ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ್ ದಾನಮ್ಮನವರ ಹೇಳಿದರು.
ಭೂ ನಿರ್ವಹಣೆಯನ್ನು ಸರಳ ಮತ್ತು ಹೆಚ್ಚು ಪಾರದರ್ಶಕವಾಗಿಸಲು ಆಧಾರ್ ಸೀಡಿಂಗ್ ವ್ಯವಸ್ಥೆ ಜಾರಿಗೊಳಿಸಲಾಗಿದೆ. ಮುಂದಿನ ಒಂದು ವಾರದಲ್ಲಿ ಎಲ್ಲ ತಾಲೂಕಿನ ಕಂದಾಯ ಇಲಾಖೆಗಳು ಪ್ರಗತಿ ವರದಿ ಸಲ್ಲಿಸಬೇಕು. ತಪ್ಪಿದಲ್ಲಿ ಸಂಬಂಧಪಟ್ಟವರ ಮೇಲೆ ಸೂಕ್ತ ಕ್ರಮ ಜರುಗಿಸಲಾಗುವುದು. ಎಚ್ಚರಿಕೆಯಿಂದ ಕರ್ತವ್ಯ ನಿರ್ವಹಿಸುವಂತೆ ಎಲ್ಲ ಅಧಿಕಾರಿ ಹಾಗೂ ಸಿಬ್ಬಂದಿಗೆ ಸೂಚನೆ ನೀಡಿದರು.
ಕಂದಾಯ ಗ್ರಾಮ, ಉಪ ಗ್ರಾಮ ಪ್ರಸ್ತಾವನೆಗಳನ್ನು ಆದಷ್ಟು ಬೇಗ ಪೂರ್ಣಗೊಳಿಸಬೇಕು. ಇ- ಪಾವತಿ ಖಾತೆಯನ್ನು ಆಂದೋಲನ ಮಾದರಿಯಲ್ಲಿ ಎಲ್ಲ ಗ್ರಾಮಗಳಲ್ಲಿ ದೊಡ್ಡ ಪ್ರಮಾಣದಲ್ಲಿ ಪ್ರಚಾರ ಮಾಡಿ ಸಾರ್ವಜನಿಕರಿಗೆ ಅರಿವು ಮೂಡಿಸುವುದು ಹಾಗೂ ಪ್ರಗತಿ ಸಾಧಿಸಿ ವರದಿ ಸಲ್ಲಿಸಬೇಕು ಎಂದರು.ಬಗರಹುಕುಂ ಅಡಿಯಲ್ಲಿ ದುರ್ಬಳಕೆ ತಡೆಗಟ್ಟಲು ಡಿಜಿಟಲ್ ಸಹಿಗೆ ಅವಕಾಶ ಮಾಡಿಕೊಟ್ಟು ಡಿಜಿಟಲ್ ಸಾಗುವಳಿ ಚೀಟಿಯನ್ನು ನೀಡಲಾಗುತ್ತದೆ. ಹೀಗಾಗಿ ಸಂಬಂಧಿಸಿದ ಸಿಬ್ಬಂದಿ ತಮ್ಮ ತಮ್ಮ ಲಾಗಿನ್‌ನಲ್ಲಿರುವ ಕಡತಗಳನ್ನು ಕೂಡಲೇ ವಿಲೇ ಮಾಡಬೇಕು. ಯಾವುದನ್ನೂ ಲಾಗಿನ್‌ನಲ್ಲಿ ಉಳಿಸಿಕೊಳ್ಳದೆ ನಿಗದಿಪಡಿಸಿದ ದಿನದೊಳಗೆ ಎಲ್ಲ ವಿಲೇವಾರಿ ಆಗುವಂತೆ ನೋಡಿಕೊಳ್ಳಬೇಕು ಎಂದರು.
ಸಭೆಯಲ್ಲಿ ತಹಸೀಲ್ದಾರ್ ರೇಣುಕಾ, ಗ್ರೇಡ್-2 ತಹಸೀಲ್ದಾರ್ ಸಿದ್ದನಗೌಡ್ರ, ಉಪ ತಹಸೀಲ್ದಾರರು, ಕಂದಾಯ ನಿರೀಕ್ಷಕರು, ಗ್ರಾಮಾಡಳಿತ ಅಧಿಕಾರಿಗಳು ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.