ಮಹಿಳಾ ದಿನಾಚರಣೆ
ಕನ್ನಡಪ್ರಭ ವಾರ್ತೆ ದಾವಣಗೆರೆವಕೀಲರು ಶ್ರಮಪಟ್ಟು ನ್ಯಾಯ ನಿರ್ಣಯದಲ್ಲಿ ಉತ್ತಮವಾಗಿ ಶ್ರಮವಹಿಸಿದಾಗ ಮಾತ್ರ ಸಮಯಕ್ಕೆ ಸರಿಯಾಗಿ, ಸೂಕ್ತವಾದ ನ್ಯಾಯದಾನ ಸಾಧ್ಯ ಎಂದು ಹೈಕೋರ್ಟ್‌ನ ನ್ಯಾಯಾಧೀಶ, ಜಿಲ್ಲಾ ಆಡಳಿತಾತ್ಮಕ ನ್ಯಾಯಾಧೀಶ ಎನ್.ಎಸ್.ಸಂಜಯಗೌಡ ತಿಳಿಸಿದರು.
ನಗರದ ಜಿಲ್ಲಾ ವಕೀಲರ ಭವನದಲ್ಲಿ ಶನಿವಾರ ಮಹಿಳಾ ದಿನಾಚರಣೆ ಸಮಾರಂಭ ಉದ್ಘಾಟಿಸಿ ಮಾತನಾಡಿ, ಯಾವುದೇ ಪ್ರಕರಣದಲ್ಲಿ ಸರಿಯಾದ, ತ್ವರಿತವಾದ ನ್ಯಾಯದಾನ ಮಾಡಲು ವಕೀಲರ ಶ್ರಮ ಅತ್ಯಗತ್ಯ ಎಂದರು.ಸಾಮಾನ್ಯವಾಗಿ ವಕೀಲರ ಕೊಡುಗೆ ಇಲ್ಲದೇ, ಯಾವುದೇ ಪ್ರಕರಣವೂ ಸರಿ ದಾರಿಯಲ್ಲಿ ನಿರ್ಧಾರವಾಗುವುದಿಲ್ಲ. ವಕೀಲರು ನೀಡುವ ಕೊಡುಗೆ ಆದಾರದಲ್ಲಿ ಮಾತ್ರ ನ್ಯಾಯ ನಿರ್ಣಯವಾಗುತ್ತದೆ. ಒಂದು ವೇಳೆ ವಕೀಲರು ವಿಫಲವಾದರೆ ನ್ಯಾಯಾಧೀಶರು ಹೆಚ್ಚಿನ ಶ್ರಮವಹಿಸಬೇಕಾಗುತ್ತದೆ. ಹಾಗಾಗಿ ನಮ್ಮಲ್ಲಿ ಏನೇ ಸೌಲಭ್ಯಗಳ ಕೊರತೆ ಇದ್ದರೂ ಉತ್ತಮ ನ್ಯಾಯ ನಿರ್ಣಯಕ್ಕೆ ಶ್ರಮಿಸಬೇಕು ಎಂದು ಹೇಳಿದರು.
ಪುರುಷರಿಗಿಂತಲೂ ಮಹಿಳೆಯರು ಯಾವಾಗಲೂ ಉತ್ತಮವೆಂಬುದಕ್ಕೆ ತಮ್ಮ ಜವಾಬ್ಧಾರಿ ಜೊತೆಗೆ ಸಾಮಾಜಿಕ ಕೊಡುಗೆಯನ್ನೂ ನೀಡುತ್ತಾರೆಂಬುದೇ ಸಾಕ್ಷಿ. ಪ್ರತಿಯೊಬ್ಬ ವ್ಯಕ್ತಿಯ ಏಳಿಗೆ, ಅಭಿವೃದ್ಧಿಯ ಹಿಂದೆ ಮಹಿಳೆಯ ಶ್ರಮವಿದೆ. ಯಾವುದೇ ಕ್ಷೇತ್ರದಲ್ಲಿ ಮಹಿಳೆ ಸಾಧನೆ ಮಾಡಿದರೂ ಅದು ವಿಶೇಷವಾಗಿರುತ್ತದೆ. ಪುರುಷರಿಗಿಂತ ಒಂದಿಷ್ಟು ಹೆಚ್ಚು ಸಾಧನೆಯಾಗಿರುತ್ತದೆ. ಕುಟುಂಬ ನಿರ್ವಹಣೆ ಜೊತೆಗೆ ಸಾಧನೆಯಲ್ಲೂ ಮಹಿಳೆಯರು ಒಂದು ಹೆಜ್ಜೆ ಮುಂದೆ ಎಂದು ಶ್ಲಾಘಿಸಿದರು.ವಕೀಲರ ಸಂಘದ ಜಿಲ್ಲಾಧ್ಯಕ್ಷ ಎಲ್.ಎಚ್.ಅರುಣಕುಮಾರ ಮಾತನಾಡಿ, ಬೆಂಗಳೂರಿನಲ್ಲಿ ವಕೀಲರ ಭವನ ನಿರ್ಮಾಣವಾಗಬೇಕು. ಕಲ್ಯಾಣ ನಿಧಿ ಮೊತ್ತವನ್ನು 10 ಲಕ್ಷ ರು.ಗೆ ಹೆಚ್ಚಿಸಬೇಕು. ರಾಜ್ಯಬಾರ್ ಕೌನ್ಸಿಲ್ ಕಟ್ಟಡ ಖಾಸಗಿ ಬಾಡಿಗೆ ಕಟ್ಟಡದಲ್ಲಿದ್ದು, ಅದಕ್ಕೆ ಸ್ವಂತ ಕಟ್ಟಡ ನಿರ್ಮಿಸಬೇಕು ಎಂದು ಸಂಘದ ರಾಜ್ಯ ಪದಾಧಿಕಾರಿಗಳಿಗೆ ಮನವಿ ಮಾಡಿದರು.
ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ರಾಜೇಶ್ವರಿ ಎನ್. ಹೆಗಡೆ, ವಕೀಲರ ಪರಿಷತ್ ರಾಜ್ಯಾಧ್ಯಕ್ಷ ಎಂ.ಎಸ್.ಮಿಠ್ಠಲ್ ಗೋಡ್, ಮಹಿಳಾ ವಕೀಲರ ಒಕ್ಕೂಟದ ಅಧ್ಯಕ್ಷೆ ಹೇಮಲತಾ ಮಹಿಷಿ ವೇದಿಕೆಯಲ್ಲಿದ್ದರು. ವಕೀಲ ಸಿದ್ದೇಶ್ವರ ಪ್ರಾರ್ಥಿಸಿದರು. ಸಂಘದ ಉಪಾಧ್ಯಕ್ಷ ಜಿ.ಕೆ.ಬಸವರಾಜ ಸ್ವಾಗತ ಮಾಡಿದರು. ಕಾರ್ಯದರ್ಶಿ ಬಸರಾಜ ಕಾರ್ಯಕ್ರಮ ನಡೆಸಿಕೊಟ್ಟರು.