ಮನಸ್ಸಿನ ಕಲ್ಮಶ ತೊಳೆಯಲು ಪ್ರವಚನ ಸಹಕಾರಿ: ಡಾ. ಮಲ್ಲಿಕಾರ್ಜುನ ಸ್ವಾಮೀಜಿ

KannadaprabhaNewsNetwork |  
Published : Aug 21, 2026, 02:15 AM IST
ಶರಣರ ಚರಿತಾಮೃತ ಪ್ರವಚನವನ್ನು ಅನ್ನದಾನೀಶ್ವರ ಸ್ವಾಮೀಜಿ ಉದ್ಘಾಟಿಸಿದರು. | Kannada Prabha

ಸಾರಾಂಶ

ಸತ್ಪುರುಷರು, ಮಠ- ಮಾನ್ಯಗಳ ಮಾರ್ಗದರ್ಶನ ಇಲ್ಲದಿದ್ದರೆ ಸಮಾಜದಲ್ಲಿ ಅರಾಜಕತೆ ಮತ್ತಷ್ಟು ಹೆಚ್ಚಾಗುತ್ತಿತ್ತು. ಹೀಗಾಗಿ ಮಕ್ಕಳನ್ನು ಮಠಗಳಿಗೆ ಕರೆತಂದು ಸಂತ ಶರಣರ ಮಾತುಗಳನ್ನು ಕೇಳಿಸಬೇಕು.

ಮುಂಡರಗಿ: ಬಾಹ್ಯ ಆಡಂಬರಕ್ಕಿಂತ ಮನುಷ್ಯನಿಗೆ ಆಂತರಿಕ ಸಂಸ್ಕಾರ ಮುಖ್ಯ. ಎಷ್ಟೇ ಜಾಗ್ರತೆ ವಹಿಸಿದರೂ ಮನೆಯಲ್ಲಿ ಧೂಳು, ಕಸ ಸೇರುವಂತೆ, ನಮಗೆ ಅರಿವಿಲ್ಲದೆಯೇ ಮನಸ್ಸು ಕಲುಷಿತಗೊಳ್ಳುತ್ತದೆ. ಅಂತಹ ಮನಸ್ಸಿನ ಕಲ್ಮಶವನ್ನು ತೊಳೆದು ಪರಿಶುದ್ಧಗೊಳಿಸಲು ಮಹಾತ್ಮರ, ಶರಣರ ತತ್ವಾದರ್ಶ ಹಾಗೂ ಪ್ರವಚನಗಳು ಅತ್ಯಗತ್ಯ ಅನ್ನದಾನೀಶ್ವರ ಮಠದ ಉತ್ತರಾಧಿಕಾರಿ ಡಾ. ಮಲ್ಲಿಕಾರ್ಜುನ ಸ್ವಾಮೀಜಿ ಹೇಳಿದರು.

ಪಟ್ಟಣದ ಅನ್ನದಾನೀಶ್ವರ ಮಠದಲ್ಲಿ ಶ್ರಾವಣ ಮಾಸದ ಅಂಗವಾಗಿ ಬುಧವಾರ ಸಂಜೆ ಡಾ. ಅನ್ನದಾನೀಶ್ವರ ಸ್ವಾಮೀಜಿಯವರ ಸಾನ್ನಿಧ್ಯದಲ್ಲಿ ಜರುಗಿದ ಶಿವಶರಣ ಚರಿತ್ರಾಮೃತ ಪ್ರವಚನ ಕಾರ್ಯಕ್ರಮದ ಉದ್ಘಾಟನಾ ಸಮಾರಂಭದ ನೇತೃತ್ವ ವಹಿಸಿ ಮಾತನಾಡಿದರು.

ಸತ್ಪುರುಷರು, ಮಠ- ಮಾನ್ಯಗಳ ಮಾರ್ಗದರ್ಶನ ಇಲ್ಲದಿದ್ದರೆ ಸಮಾಜದಲ್ಲಿ ಅರಾಜಕತೆ ಮತ್ತಷ್ಟು ಹೆಚ್ಚಾಗುತ್ತಿತ್ತು. ಹೀಗಾಗಿ ಮಕ್ಕಳನ್ನು ಮಠಗಳಿಗೆ ಕರೆತಂದು ಸಂತ ಶರಣರ ಮಾತುಗಳನ್ನು ಕೇಳಿಸಬೇಕು ಎಂದರು.

ಜಂಗಮ ಕ್ಷೇತ್ರ ಲಿಂಗನಾಯಕನಹಳ್ಳಿಯ ಚನ್ನವೀರ ಸ್ವಾಮಿಜಿ ಮಾತನಾಡಿ, ಮನುಷ್ಯನ ಮನಸ್ಸೆಂಬ ಹೊಲದಲ್ಲಿ ಬೆಳೆಯುವ ದುರ್ಗುಣಗಳೆಂಬ ಕಸವನ್ನು ಕಿತ್ತೆಸೆದು, ಸದ್ಗುಣ ಮತ್ತು ಭಕ್ತಿಯೆಂಬ ಉತ್ತಮ ಬೆಳೆಯನ್ನು ಬೆಳೆಯಲು ಶ್ರಾವಣ ಮಾಸದ ಶ್ರವಣ ಹಾಗೂ ಸತ್ಸಂಗಗಳು ಅತ್ಯಂತ ಅಗತ್ಯ ಎಂದರು.

ತಾಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಡಿ.ಡಿ. ಮೋರನಾಳ, ಮುಂಡರಗಿ ಬಿಜೆಪಿ ಮಂಡಲ ಅಧ್ಯಕ್ಷ ಡಾ.ಕುಮಾರಸ್ವಾಮಿ ಹಿರೇಮಠ ಮಾತನಾಡಿ, ಇಂದು ಮೊಬೈಲ್ ಮತ್ತು ಟಿವಿ ಮಾಧ್ಯಮಗಳ ಅತಿಯಾದ ಬಳಕೆಯಿಂದ ಸಮಾಜವು ದಾರಿ ತಪ್ಪುತ್ತಿದೆ. ಶಾಲೆಗಳಲ್ಲಿ ಅಕ್ಷರ ಜ್ಞಾನ ದೊರೆತರೆ, ಮಠ- ಮಾನ್ಯಗಳಲ್ಲಿ ಹಾಗೂ ಇಂತಹ ಪುರಾಣ ಕಾರ್ಯಕ್ರಮಗಳಲ್ಲಿ ಜೀವನಕ್ಕೆ ಬೇಕಾದ ಮೌಲ್ಯ ಮತ್ತು ಸಂಸ್ಕಾರ ಸಿಗುತ್ತದೆ ಎಂದರು.

ಸಾನ್ನಿಧ್ಯ ವಹಿಸಿದ್ದ ಡಾ. ಅನ್ನದಾನೀಶ್ವರ ಸ್ವಾಮೀಜಿ‌ ಮಾತನಾಡಿ, ಪ್ರವಚನಕಾರರ ಹಿತನುಡಿಗಳನ್ನು ಕೇವಲ ಒಂದು ಕಿವಿಯಿಂದ ಕೇಳಿ ಮತ್ತೊಂದು ಕಿವಿಯಿಂದ ಬಿಡಬಾರದು. ಅಕ್ಬರ್- ಬೀರಬಲ್ಲರ ಮೂರು ಗೊಂಬೆಗಳ ಕಥೆಯಂತೆ, ಕಿವಿಯ ಮೂಲಕ ಹೃದಯಕ್ಕೆ ಇಳಿದು ಜೀವನದಲ್ಲಿ ಅಳವಡಿಸಿಕೊಳ್ಳುವ ಮಾತುಗಳೇ ಸಾರ್ಥಕ. ಶರಣರ ವಿಚಾರಗಳನ್ನು ಪ್ರತಿಯೊಬ್ಬರೂ ಮನನ ಮಾಡಿಕೊಂಡು ಸತ್ಸಂಸ್ಕೃತಿಯನ್ನು ಬೆಳೆಸಿಕೊಳ್ಳಬೇಕು ಎಂದರು.

ಕಲಬುರಗಿಯ ಮೃತ್ಯುಂಜಯ ದೇವರು ಪ್ರವಚನಕ್ಕೆ‌ ಚಾಲನೆ ನೀಡಿದರು. ತಾಲೂಕು ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ. ರಾಜೇಶ ಟಿ.ಎಸ್., ಡಾ. ವಿಜಯಕುಮಾರ ಗಿಂಡಿಮಠ ದಂಪತಿಗಳಿಗೆ ಶ್ರೀಗಳಿಂದ ಗುರುರಕ್ಷೆ ಜರುಗಿತು. ಬಸವಂತಪ್ಪ ಹೊಸಮನಿ, ಎಸ್.ಬಿ. ಹಿರೇಮಠ, ಮಂಜುನಾಥ ಕಾಗನೂರಮಠ ಪ್ರಸಾದ ಸೇವೆ ನೆರವೇರಿಸಿದರು.

ಕಾರ್ಯಕ್ರಮದಲ್ಲಿ ಕರಬಸಪ್ಪ ಹಂಚಿನಾಳ, ಡಾ. ಬಿ.ಜಿ. ಜವಳಿ, ಪ್ರವಚನ ಸಮಿತಿ ಅಧ್ಯಕ್ಷ ವಿಶ್ವನಾಥ ಪಾಟೀಲ, ಬಸವರಾಜ ಅಂಕದ, ಈರಣ್ಣ ಕಾಶಿಗಾವಿ, ನಂಜುಂಡೇಶ ಲಿಂಬಿಕಾಯಿ, ವಿನಯಕುಮಾರ ಗಂಧದ, ಹಾಲಯ್ಯಸ್ವಾಮಿ ಹಿರೇಮಠ ಉಪಸ್ಥಿತರಿದ್ದರು. ಎಸ್.ಎಸ್. ಮಠದ, ನಾಗಭೂಷಣ ಹಿರೇಮಠ ನಿರೂಪಿಸಿ, ಎಸ್.ಎಸ್. ಇನಾಮತಿ ವಂದಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಎಫ್‌ಎಲ್‌ಎನ್‌, ಎಲ್‌ಬಿಎ ಸೂಕ್ತವಾಗಿ ಜಾರಿ ಮಾಡಿ
ಗದುಗಿನ ಹರಿ ಜಾತ್ರೋತ್ಸವ ಮಹಾ ಅನ್ನಪ್ರಸಾದಕ್ಕೆ ಭಕ್ತಿಸೇವೆ