ಹುಬ್ಬಳ್ಳಿ:

ಎಸ್ಸೆಸ್ಸೆಲ್ಸಿ ಫಲಿತಾಂಶ ಸುಧಾರಣೆಗಾಗಿ ಬುನಾದಿ ಸಾಕ್ಷರತೆ ಮತ್ತು ಸಂಖ್ಯಾಜ್ಞಾನ (ಎಫ್‌ಎಲ್‌ಎನ್‌) ಕಾರ್ಯಕ್ರಮ ಹಾಗೂ ಪಾಠ ಆಧಾರಿತ ಮೌಲ್ಯಾಂಕನವನ್ನು (ಎಲ್‌ಬಿಎ) ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಶಿಕ್ಷಕರು ಹಾಗೂ ಅಧಿಕಾರಿಗಳು ಸಮನ್ವಯದಿಂದ ಕಾರ್ಯ ನಿರ್ವಹಿಸಬೇಕು ಎಂದು ಶಾಲಾ ಶಿಕ್ಷಣ ಇಲಾಖೆ ಅಪರ ಆಯುಕ್ತ ಡಾ. ಈಶ್ವರ ಉಳ್ಳಾಗಡ್ಡಿ ಹೇಳಿದರು.ಇಲ್ಲಿನ ಬಿವಿಬಿ ಕ್ಯಾಂಪಸ್‌ನ ದೇಶಪಾಂಡೆ ಫೌಂಡೇಶನ್‌ ಸಭಾಭವನದಲ್ಲಿ ಗುರುವಾರ ನಡೆದ ಬೆಳಗಾವಿ ವಿಭಾಗ ಮಟ್ಟದ ಎಫ್‌ಎಲ್‌ಎನ್‌ ಅನುಷ್ಠಾನ, ಎಲ್‌ಬಿಎ ಹಾಗೂ ಎಸ್ಸೆಸ್ಸೆಲ್ಸಿ ಫಲಿತಾಂಶ ಸುಧಾರಣೆ ಕುರಿತ ಸಮಾಲೋಚನಾ ಸಭೆಯಲ್ಲಿ ಮಾತನಾಡಿದ ಅವರು, ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ ಬೆಳಗಾವಿ ವಿಭಾಗವು ರಾಜ್ಯದಲ್ಲೇ ಪ್ರಥಮ ಸ್ಥಾನ ಗಳಿಸಿರುವುದು ಹೆಮ್ಮೆಯ ಸಂಗತಿ. ಈ ಸಾಧನೆಯ ಹಿಂದೆ ಶಿಕ್ಷಕರು, ಶಿಕ್ಷಣಾಧಿಕಾರಿಗಳು ಹಾಗೂ ಶಾಲಾ ಹಂತದ ಸಿಬ್ಬಂದಿ ಪರಿಶ್ರಮವಿದೆ ಎಂದರು.ಪ್ರಸಕ್ತ ಶೈಕ್ಷಣಿಕ ಸಾಲಿನಲ್ಲಿಯೂ ಅದೇ ಸಾಧನೆಯನ್ನು ಇನ್ನಷ್ಟು ಉತ್ತಮಗೊಳಿಸುವ ಗುರಿಯೊಂದಿಗೆ ಕಾರ್ಯನಿರ್ವಹಿಸಬೇಕು. ಕಳೆದ ವರ್ಷ ಅನುಸರಿಸಿದ ನೀಲನಕ್ಷೆಯನ್ನು ಈ ವರ್ಷವೂ ಮುಂದುವರಿಸಲಾಗಿದೆ. ಶೈಕ್ಷಣಿಕ ಚಟುವಟಿಕೆ ಹಾಗೂ ಪರೀಕ್ಷಾ ಸಿದ್ಧತೆಗೆ ಇನ್ನೂ ಸಾಕಷ್ಟುಸಮಯಾವಕಾಶವಿದ್ದು, ಪ್ರತಿ ಹಂತದಲ್ಲಿಯೂ ಯೋಜಿತವಾಗಿ ಕೆಲಸ ಮಾಡಿದರೆ ಉತ್ತಮ ಫಲಿತಾಂಶ ಸಾಧ್ಯ. ನಮ್ಮ ವಿಭಾಗದಲ್ಲಿ ಶೇ.100 ಫಲಿತಾಂಶ ದಾಖಲಿಸುವುದಷ್ಟೇ ಗುರಿಯಾಗಬಾರದು. ವಿದ್ಯಾರ್ಥಿಗಳ ಕಲಿಕೆಯ ಗುಣಮಟ್ಟವನ್ನು ಹೆಚ್ಚಿಸಿ ಅತ್ಯುತ್ತಮ ಮತ್ತು ಗುಣಮಟ್ಟದ ಫಲಿತಾಂಶ ಪಡೆಯಲು ಶಿಕ್ಷಕರು ಶ್ರಮಿಸಬೇಕು. ಈ ನಿಟ್ಟಿನಲ್ಲಿ 60 ಪ್ಲಸ್‌ ಕಾರ್ಯಕ್ರಮವನ್ನು ಆಯೋಜಿಸಿದ್ದು ಯಶಸ್ವಿಗೊಳಿಸಬೇಕು ಎಂದು ಹೇಳಿದರು.ಎಫ್‌ಎಲ್‌ಎನ್‌ ಕಾರ್ಯಕ್ರಮವು ಒಂದು ಯೋಜನೆಯಾಗಿ ಉಳಿಯಬಾರದು. ಪ್ರತಿ ಮಗುವೂ ತನ್ನ ತರಗತಿಗೆ ಅನುಗುಣವಾದ ಓದುವ, ಬರೆಯುವ ಹಾಗೂ ಮೂಲಭೂತ ಗಣಿತದ ಸಾಮರ್ಥ್ಯ ಹೊಂದುವಂತೆ ಶಿಕ್ಷಕರು ವಿಶೇಷ ಕಾಳಜಿ ವಹಿಸಬೇಕು. ಇದರ ಯಶಸ್ಸು ಮುಂದಿನ ತರಗತಿಗಳಲ್ಲಿನ ಕಲಿಕೆಯ ಗುಣಮಟ್ಟ ಮತ್ತು ಎಸ್ಸೆಸ್ಸೆಲ್ಸಿ ಸೇರಿದಂತೆ ಉನ್ನತ ಹಂತಗಳ ಫಲಿತಾಂಶಕ್ಕೂ ಬಲವಾದ ಅಡಿಪಾಯವಾಗಲಿದೆ ಎಂದರು.

ಶಾಲಾ ಶಿಕ್ಷಣ ಇಲಾಖೆಯ ನಿರ್ದೇಶಕಿ ಮಮತಾ ನಾಯಕ, ಸಹ ನಿರ್ದೇಶಕಿ ಜಯಶ್ರೀ ಕಾರೇಕರ, ಉಪನಿರ್ದೇಶಕ ಗಿರೀಶ ಪದಕಿ, ಉಪನಿರ್ದೇಶಕ (ಅಭಿವೃದ್ಧಿ) ಬಸವರಾಜ ನಾಲತವಾಡ, ಉಪನಿರ್ದೇಶಕ (ಆಡಳಿತ) ಉಮೇಶ ಬೊಮ್ಮಕ್ಕನವರ ಸೇರಿದಂತೆ ಇಲಾಖೆಯ ವಿವಿಧ ಹಂತಗಳ ಅಧಿಕಾರಿಗಳು ಉಪಸ್ಥಿತರಿದ್ದರು.ಕಲಿಕಾ ಕೊರತೆ ಗುರುತಿಸಿ, ನಿವಾರಿಸಿಪಾಠ ಆಧಾರಿತ ಮೌಲ್ಯಾಂಕನ (ಎಲ್‌ಬಿಎ) ಪ್ರಶ್ನೆಗಳು ವಿದ್ಯಾರ್ಥಿಗಳ ಕಲಿಕಾ ಕೊರತೆಗಳನ್ನು ಗುರುತಿಸಿ, ಅವುಗಳನ್ನು ನಿವಾರಿಸಿದರೆ ಉತ್ತಮ ಫಲಿತಾಂಶ ಸಾಧಿಸಲು ಪೂರಕವಾಗುತ್ತದೆ. ಆದ್ದರಿಂದ ಎಲ್‌ಬಿಎ ಪ್ರಶ್ನೆಗಳ ಅಭ್ಯಾಸ, ವಿದ್ಯಾರ್ಥಿಗಳ ಪ್ರತಿಕ್ರಿಯೆ ಹಾಗೂ ಕಲಿಕಾ ಪ್ರಗತಿಯನ್ನು ನಿರಂತರವಾಗಿ ಪರಿಶೀಲಿಸಬೇಕು. ಹಾಗೆಯೇ ಪ್ರತಿಯೊಬ್ಬ ವಿದ್ಯಾರ್ಥಿಯ ಕಲಿಕಾ ಮಟ್ಟವನ್ನು ಗುರುತಿಸಿ, ಅಗತ್ಯವಿರುವ ಕಡೆಗಳಲ್ಲಿ ಹೆಚ್ಚುವರಿ ಬೋಧನೆ ಮತ್ತು ಮಾರ್ಗದರ್ಶನ ನೀಡಬೇಕು. ಶಾಲೆ, ಕ್ಲಸ್ಟರ್‌, ತಾಲೂಕು ಹಾಗೂ ಜಿಲ್ಲಾ ಹಂತಗಳಲ್ಲಿ ವಿದ್ಯಾರ್ಥಿಗಳ ಪ್ರಗತಿಯನ್ನು ನಿರಂತರವಾಗಿ ಅವಲೋಕಿಸುವ ವ್ಯವಸ್ಥೆ ಪರಿಣಾಮಕಾರಿಯಾಗಿ ಜಾರಿಯಾಗಬೇಕು ಎಂದು ಡಾ. ಈಶ್ವರ ಉಳ್ಳಾಗಡ್ಡಿ ಅಧಿಕಾರಿಗಳಿಗೆ ಸೂಚಿಸಿದರು. ​​