ಯುವಸಮೂಹಕ್ಕೆ ಅಧ್ಯಾತ್ಮ, ಸಂಸ್ಕಾರ ಶಿಕ್ಷಣ ಅವಶ್ಯ: ಶ್ರೀ ಮಂಜುನಾಥ ಭಾರತಿ ಸ್ವಾಮೀಜಿ

KannadaprabhaNewsNetwork | Published : Feb 9, 2024 1:47 AM

ಸಾರಾಂಶ

ದೇಶದಲ್ಲಿ ಪ್ರಸ್ತುತ ಶಿಕ್ಷಣದ ಗುಣಮಟ್ಟ ಹೆಚ್ಚಿದೆ, ಪ್ರಾಚೀನ ಕಾಲದಿಂದಲೂ ಭಾರತವು ಶಿಕ್ಷಣ ಕ್ಷೇತ್ರದಲ್ಲಿ ಹೆಸರುವಾಸಿಯಾಗಿತ್ತು. ನಳಂದಾ ತಕ್ಷಶೀಲಾ ಮಹಾವಿದ್ಯಾಲಯ, ಗುರುಕುಲಗಳಲ್ಲಿ ಉನ್ನತ ಗುಣಮಟ್ಟದ ಶಿಕ್ಷಣ ಬೋಧಿಸಲಾಗುತ್ತಿತ್ತು.

ಹಳಿಯಾಳ:

ಮಕ್ಕಳಿಗೆ ಹಾಗೂ ಯುವಸಮೂಹಕ್ಕೆ ಅಧ್ಯಾತ್ಮ, ಸಂಸ್ಕಾರ ಹಾಗೂ ಮಾನವೀಯ ಮೌಲ್ಯಗಳ ಶಿಕ್ಷಣದ ಅವಶ್ಯತೆಯಿದೆ ಎಂದು ಬೆಂಗಳೂರು ಶ್ರೀ ಗೋಸಾಯಿ ಮಹಾಸಂಸ್ಥಾನದ ಮರಾಠ ಜಗದ್ಗುರು ಶ್ರೀ ಮಂಜುನಾಥ ಭಾರತಿ ಸ್ವಾಮಿಜಿ ಹೇಳಿದರು.

ಗುರುವಾರ ಹಳಿಯಾಳದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸರ್ವರ ಸಹಕಾರದಲ್ಲಿ ಹಳಿಯಾಳ ತಾಲೂಕಿನ ಹವಗಿಯಲ್ಲಿ ತಾವು ಆರಂಭಿಸಲು ಯೋಜಿಸಿರುವ ಗುರುಕುಲ ಪಾಠಶಾಲೆ ಹಾಗೂ ಫೆ. 11ರಂದು ನಡೆಯಲಿರುವ ಗುರಕುಲದ ಭೂಮಿ ಪೂಜೆ ಕಾರ್ಯಕ್ರಮದ ಬಗ್ಗೆ ಮಾಹಿತಿ ನೀಡಿದರು.ದೇಶದಲ್ಲಿ ಪ್ರಸ್ತುತ ಶಿಕ್ಷಣದ ಗುಣಮಟ್ಟ ಹೆಚ್ಚಿದೆ, ಪ್ರಾಚೀನ ಕಾಲದಿಂದಲೂ ಭಾರತವು ಶಿಕ್ಷಣ ಕ್ಷೇತ್ರದಲ್ಲಿ ಹೆಸರುವಾಸಿಯಾಗಿತ್ತು. ನಳಂದಾ ತಕ್ಷಶೀಲಾ ಮಹಾವಿದ್ಯಾಲಯ, ಗುರುಕುಲಗಳಲ್ಲಿ ಉನ್ನತ ಗುಣಮಟ್ಟದ ಶಿಕ್ಷಣ ಬೋಧಿಸಲಾಗುತ್ತಿತ್ತು. ಆದರೆ ಕ್ರಮೇಣ ಇತ್ತೀಚಿನ ಕೆಲ ಶತಮಾನಗಳಲ್ಲಿ ಆಧುನಿಕತೆ ಸಂಸ್ಕಾರ, ಸಂಪ್ರದಾಯಗಳಿಗೆ ಶರಣಾಗಿ ಗುರುಕುಲ ಶಿಕ್ಷಣವೇ ಮರೆಯಾಗಿ ಹೋಯಿತು. ಇದರಿಂದ ಈಗಿನ ಪೀಳಿಗೆಯಲ್ಲಿ ವ್ಯಕ್ತಿತ್ವ ವಿಕಸನ, ಮುಖಂಡತ್ವ, ನೈತಿಕತೆ, ಆತ್ಮವಿಶ್ವಾಸ, ಉತ್ತಮ ಚಾರಿತ್ರ್ಯ ನಿರ್ಮಾಣ, ಶಿಸ್ತು, ಗುರು ಹಿರಿಯರಿಗೆ ಗೌರವ, ಅಧ್ಯಾತ್ಮದ ಭಾವನೆಗಳೇ ಕಲ್ಪನೆಯೇ ಇಲ್ಲದಂತಾಗಿದೆ ಎಂದರು.ಇಂದು ಉನ್ನತ ವ್ಯಾಸಂಗ ಮಾಡಿ ಉತ್ತಮ ಹುದ್ದೆ, ಸ್ಥಾನಮಾನ ಪಡೆದರೂ ಯುಪೀಳಿಗೆ ತಮ್ಮ ಬದುಕು, ಕುಟುಂಬವನ್ನು ಯಶಸ್ವಿಯಾಗಿ ಕಟ್ಟುವಲ್ಲಿ ಅಸಮರ್ಥರಾಗುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.ಈ ಎಲ್ಲ ಬೆಳವಣಿಗೆ ಸೂಕ್ಷ್ಮವಾಗಿ ಅವಲೋಕಿಸಿ ಶಾಲಾ ಶಿಕ್ಷಣದ ಜತೆಗೆ ಸಂಸ್ಕಾರ, ಸಂಸ್ಕೃತ, ಅಧ್ಯಾತ್ಮ, ಭಗವದ್ಗೀತೆ, ಉಪನಿಷತ್ತು, ಶಾಸ್ತ್ರೀಯ ಸಂಗೀತ, ಪ್ರವಚನ, ಕೀರ್ತನೆ, ಯೋಗಾಭ್ಯಾಸ, ವೈದಿಕ ಜ್ಞಾನದೊಂದಿಗೆ ವಾರಕರಿ ಪದ್ಧತಿಯ ಕಲ್ಪನೆಯೊಂದಿಗೆ ಮೌಲ್ಯಾಧಾರಿತ ಶಿಕ್ಷಣ ನೀಡಿ ವ್ಯಸನ ಮುಕ್ತ ಕುಟುಂಬ ಸಮಾಜ ನಿರ್ಮಿಸಲು ಗುರುಕುಲ ಮಾದರಿ ಶಿಕ್ಷಣದ ಅವಶ್ಯತೆಯಿದೆ. ಅದಕ್ಕಾಗಿ ಹವಗಿಯಲ್ಲಿ ಮೂರು ಎಕರೆ ಜಮೀನಿನಲ್ಲಿ ಶ್ರೀ ಹರಿ ಛತ್ರಪತಿ ಶಿವಾಜಿ ಮಹಾರಾಜ ಗುರುಕುಲವನ್ನು ಸರ್ವರ ಸಹಕಾರದಿಂದ ಆರಂಭಿಸಲು ಯೋಜಿಸಲಾಗಿದೆ. ಫೆ. 11ರಂದು 10ಕ್ಕೆ ಶಿಲಾನ್ಯಾಸ ಸಮಾರಂಭವು ನಡೆಯಲಿದ್ದು, ಅಂದು ನನ್ನ ಪಟ್ಟಾಭಿಷೇಕದ 2ನೇ ವಾರ್ಷಿಕೋತ್ಸವ ಸಮಾರಂಭವನ್ನು ಶಿಷ್ಯವೃಂದ ನಡೆಸಲು ತೀರ್ಮಾನಿಸಿದೆ ಎಂದರು.ಈ ಗುರುಕುಲದಲ್ಲಿ ಜಾತಿ, ಮತ, ಪಂಥ, ಭಾಷೆ ಎಂಬ ಭೇದಭಾವ ಪರಿಗಣಿಸದೇ ಸರ್ವರಿಗೂ ಪ್ರವೇಶ ನೀಡಲಾಗುವುದು. ದೇಶದ ಖ್ಯಾತ ಶಿಕ್ಷಣ ಕೇಂದ್ರಗಳ ಮತ್ತು ಆಧ್ಯಾತ್ಮಿಕ ಪಾಠಶಾಲೆಗಳ ನುರಿತ ಗುರುವೃಂದವು ಗುರುಕುಲದಲ್ಲಿ ಬೋಧನೆ ಮಾಡಲಿದೆ ಎಂದು ತಿಳಿಸಿದರು.ಗಣ್ಯರು ಭಾಗಿ:ಗುರುಕುಲದ ಶಿಲಾನ್ಯಾಸ ಸಮಾರಂಭಕ್ಕೆ ರಾಜ್ಯದ ಬಹುತೆಕ ಕ್ಯಾಬಿನೆಟ್ ಸಚಿವರು, ಮಾಜಿ ಮುಖ್ಯಮಂತ್ರಿಗಳು, ಬಿಜೆಪಿ ರಾಜ್ಯಾಧ್ಯಕ್ಷ, ಗೋವಾ ಮುಖ್ಯಮಂತ್ರಿ ಆಗಮಿಸಲಿದ್ದು ಕಾಶಿ, ಮಥುರಾ, ಮಹಾರಾಷ್ಟ್ರ ಸೇರಿದಂತೆ ರಾಜ್ಯದ ಮಠಾಧೀಶರು ಕಾರ್ಯಕ್ರಮದ ಸಾನ್ನಿಧ್ಯ ವಹಿಸುವರು ಎಂದರು.

Share this article