ಕನ್ನಡಪ್ರಭ ವಾರ್ತೆ ವಿಜಯಪುರ
ಯಾವ ಅಸುರ ಶಕ್ತಿಗಳು ರಾಮ ಮಂದಿರ ನಿರ್ಮಾಣ ವಿರೋಧಿಸಿದವೋ, ಕರಸೇವಕರನ್ನು ದಮನಿಸಿದವೋ ಆ ಶಕ್ತಿಗಳೇ ಇಂದು ಜೈ ಶ್ರೀರಾಮ ಘೋಷಣೆ ಮೊಳಗಿಸುತ್ತಿವೆ ಎಂದು ವಿಧಾನ ಪರಿಷತ್ ಮಾಜಿ ಸದಸ್ಯ ಅರುಣ ಶಹಾಪೂರ ಹೇಳಿದರು.ನಗರದ ಸಾಯಿ ವಿಹಾರದಲ್ಲಿ ನಡೆದ ಬಿಜೆಪಿ ಜಿಲ್ಲಾ ಕಾರ್ಯಕಾರಿಣಿ ಸಭೆಗೆ ಚಾಲನೆ ನೀಡಿ ಮಾತನಾಡಿದ ಅವರು, ಕರಸೇವಕರನ್ನು ಗುಂಡಿಕ್ಕಿದ ಶಕ್ತಿಗಳು ಸಹ ಇಂದು ರಾಮ ನಾಮ ಜಪಿಸುತ್ತಿವೆ. ಯಾವ ಮುಖ್ಯಮಂತ್ರಿ ತಿಲಕ ಹಚ್ಚಿಕೊಳ್ಳಲು ನಿರಾಕರಿಸುತ್ತಿದ್ದರೋ ಅವರು ಸಹ ರಾಮನನ್ನು ಸ್ಮರಿಸುತ್ತಿದ್ದಾರೆ. ಬನಾಯೇಂಗೆ ಮಂದಿರ ಎಂಬ ಹಾಡನ್ನು ಹಾಡಿದರೆ ಕೇಸು ದಾಖಲಿಸುವ ಪರಿಸ್ಥಿತಿ ಇತ್ತು. ಅಂದು ಆ ರೀತಿ ರಾಮ ಭಕ್ತರನ್ನು ಕಾಡಿದವರೇ ಇಂದು ರಾಮನನ್ನು ನೆನೆಯುತ್ತಿದ್ದಾರೆ ಎಂದು ಹೇಳಿದರು.
ರಾಮ ಮಂದಿರ ನಿರ್ಮಾಣದ ಮೂಲಕ ಭಾರತ ವಿಶ್ವ ಗುರುವಾಗಿ ಶೀಘ್ರದಲ್ಲಿಯೇ ಅಲಂಕೃತವಾಗಲಿದೆ. ಎಸ್.ಎಸ್.ಎಲ್.ಸಿ. ಪರೀಕ್ಷೆಯ ಸಮಯ ನಿಗದಿಯಲ್ಲೂ ಧರ್ಮದ ಲೇಪನ ಮಾಡಿರುವ ಕಾಂಗ್ರೆಸ್ ಮುಸ್ಲಿಮರ ತುಷ್ಟೀಕರಣ ಪರಾಕಾಷ್ಠೆಗೆ ತಲುಪಿದೆ. ಶುಕ್ರವಾರ ಪ್ರಾರ್ಥನೆಗಾಗಿ ಸಮಯ ಮೀಸಲಿರಿಸಿ ಪರೀಕ್ಷೆಯ ವೇಳಾಪಟ್ಟಿ ನಿಗದಿ ಮಾಡಲು ಧರ್ಮದ ಓಲೈಕೆಯಂತಹ ನೀಚಕೃತ್ಯಕ್ಕೆ ತಲುಪಿದೆ ಎಂದು ಕಿಡಿಕಾರಿದರು.ಒಂದೇ ಒಂದು ಸಂಸದ ಸ್ಥಾನವನ್ನು ಕಾಂಗ್ರೆಸ್ ಪಡೆಯುವುದಿಲ್ಲ. ಎಲ್ಲ ಕ್ಷೇತ್ರದಲ್ಲಿಯೂ ಬಿಜೆಪಿ ಗೆಲುವು ಸಾಧಿಸಲಿದೆ. ಕಾಂಗ್ರೆಸ್ ಕಾಲಘಟ್ಟದಲ್ಲಿ ಅಡುಗೆ ಅನಿಲ ಪಡೆಯಲು ಶಿಫಾರಸು ಬೇಕಾಗಿತ್ತು. ಈಗ ಕಾಲ ಬದಲಾಗಿದೆ ಎಂದು ಹೇಳಿದರು.
ಬಿಜೆಪಿ ಜಿಲ್ಲಾಧ್ಯಕ್ಷ ಆರ್.ಎಸ್. ಪಾಟೀಲ ಕುಚಬಾಳ ಮಾತನಾಡಿ, ಹಿಂದೂತ್ವ ಹಾಗೂ ಬಿಜೆಪಿಯನ್ನು ವಿರೋಧಿಸಿದವರೇ ಇಂದು ನಾವು ಹಿಂದೂ, ನಾವು ಹಿಂದೂ ಎಂದು ಹೇಳುವಂತಾಗಿದೆ. ಮತಗಳ ಓಲೈಕೆಗಾಗಿ ದೇಗುಲಗಳಿಗೆ ಹೋಗಲು ಸಹ ಅಂಜುತ್ತಿದ್ದವರು ಇಂದು ಗಂಟೆಗಟ್ಟಲೆ ದೇವಾಲಯದ ಮುಂದೆ ಸರತಿ ಸಾಲಿನಲ್ಲಿ ನಿಲ್ಲಬೇಕಾಗಿದೆ ಎಂದರು.ವೋಟ್ ಬ್ಯಾಂಕ್ ಗಾಗಿ ಜಾತಿ, ಜಾತಿಗಳ ನಡುವೆ ವೈಷಮ್ಯ ಬಿತ್ತಿದ ಕಾಂಗ್ರೆಸ್ ಕಾಲಘಟ್ಟದಲ್ಲಿ ಯಾವ ಅಭಿವೃದ್ಧಿ ಕಾಮಗಾರಿಗಳು ನಡೆಯಲಿಲ್ಲ ಎಂದರು.
ಬಜೆಟ್ ಅಭಿಪ್ರಾಯ ಹೇಳುವಾಗ ದೇಶವನ್ನೇ ವಿಭಜನೆ ಮಾಡುವ ಹೇಳಿಕೆ ನೀಡುವಷ್ಟು ಹೇಯಕೃತ್ಯಕ್ಕೆ ತೊಡಗಿರುವ ಕಾಂಗ್ರೆಸ್ ನಾಯಕರಿಗೆ ಬೌದ್ಧಿಕ ದಿವಾಳಿಯಾಗಿದೆ. ಅಲ್ಲದೇ ಒಂದು ಸಮುದಾಯದವರಿಗೆ ಓಲೈಕೆ ಮಾಡಲು ಪರೀಕ್ಷೆ ಸಮಯ ನಿಗದಿ ಮಾಡಲು ಹೊರಟಿರುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು.ಈ ಹಿಂದೆ ಯುಪಿಎ ಸರ್ಕಾರ ಅವಧಿಯಲ್ಲಿ ಎಲ್ಲಿ ಬಾಂಬ್ ಬೀಳುತ್ತವೆ ಎಂಬ ಭಯ ಇರುತ್ತಿತ್ತು. ಆದರೆ ಈಗ ಯಾವ ಭಯವೂ ಇಲ್ಲದಂತಾಗಿದೆ. ಕಾಂಗ್ರೆಸ್ ಶಾಸಕರೇ ಕಾಂಗ್ರೆಸ್ ಬಗ್ಗೆ ಬೇಸತ್ತಿದ್ದಾರೆ. ಗ್ಯಾರಂಟಿ ಹೊರೆಯಿಂದ ಯಾವ ಅಭಿವೃದ್ಧಿಗೂ ಅನುದಾನ ದೊರಕುತ್ತಿಲ್ಲ. ಹೀಗಾಗಿ ಯಾವ ರೀತಿ ಅಭಿವೃದ್ಧಿ ಮಾಡಬೇಕು ಎಂದು ಅವರ ಸ್ವ ಪಕ್ಷದ ಶಾಸಕರೇ ಆತಂಕ ಹೊರಹಾಕಿದ್ದಾರೆ. ಲೋಕಸಭೆ ಚುನಾವಣೆವರೆಗೆ ಅವರೆಲ್ಲರೂ ಕಾಯುತ್ತಿದ್ದಾರೆ ಎಂದು ಹೇಳಿದರು.
ವಿಧಾನ ಪರಿಷತ್ ಸದಸ್ಯ ಪಿ.ಎಚ್. ಪೂಜಾರ, ಮಾಜಿ ಸಚಿವ ಎಸ್.ಕೆ.ಬೆಳ್ಳುಬ್ಬಿ, ಮಾಜಿ ಶಾಸಕರಾದ ರಮೇಶ ಭೂಸನೂರ, ಸೋಮನಗೌಡ ಪಾಟೀಲ ಸಾಸನೂರ, ವಿಜುಗೌಡ ಪಾಟೀಲ, ಚಂದ್ರಶೇಖರ ಕವಟಗಿ, ಮುಖಂಡರಾದ ಉಮೇಶ ಕಾರಜೋಳ, ಕಾಸುಗೌಡ ಬಿರಾದಾರ, ಸಂಜೀವ ಐಹೊಳಿ, ಮಲ್ಲಿಕಾರ್ಜುನ ಜೋಗೂರ, ಬಸವರಾಜ ಬಿರಾದಾರ, ಮಲ್ಲಮ್ಮ ಜೋಗೂರ, ನಾಗರಾಜ ಭೂವಿ ಮುಂತಾದವರು ಇದ್ದರು. ಪಾಲಿಕೆ ಸದಸ್ಯ ಶಿವರುದ್ರ ಬಾಗಲಕೋಟ ನಿರೂಪಿಸಿದರು.