ಜನರೇ ಭ್ರಷ್ಟ ಕಾಂಗ್ರೆಸ್‌ ಸರ್ಕಾರ ಕಿತ್ತೊಗೆಯುತ್ತಾರೆ: ಮಾಜಿ ಸಿಎಂ ಯಡಿಯೂರಪ್ಪ

KannadaprabhaNewsNetwork |  
Published : Feb 09, 2024, 01:46 AM IST
8ಕೆಡಿವಿಜಿ14-ದಾವಣಗೆರೆಯಲ್ಲಿ ಬಿಜೆಪಿ ನೂತನ ಜಿಲ್ಲಾಧ್ಯಕ್ಷ, ಪ್ರಧಾನ ಕಾರ್ಯದರ್ಶಿಗಳ ಪದಗ್ರಹಣ ಸಮಾರಂಭ ಉದ್ಘಾಟಿಸಿ ಮಾತನಾಡಿದ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ. ..............8ಕೆಡಿವಿಜಿ15, 16, 17-ದಾವಣಗೆರೆಯಲ್ಲಿ ನೂತನ ಬಿಜೆಪಿ ಜಿಲ್ಲಾಧ್ಯಕ್ಷ, ಪ್ರಧಾನ ಕಾರ್ಯದರ್ಶಿಗಳ ಪದಗ್ರಹಣ ಸಮಾರಂಭಕ್ಕೆ ಆಗಮಿಸಿದ್ದ ಮಾಜಿ ಸಿಎಂ ಯಡಿಯೂರಪ್ಪ, ಮಾಜಿ ಡಿಸಿಎಂ ಕೆ.ಎಸ್‌.ಈಶ್ವರಪ್ಪ ಇತರರು ವೇದಿಕೆಯಲ್ಲಿ. ...................8ಕೆಡಿವಿಜಿ18, 19-ದಾವಣಗೆರೆಯಲ್ಲಿ ನೂತನ ಬಿಜೆಪಿ ಜಿಲ್ಲಾಧ್ಯಕ್ಷ, ಪ್ರಧಾನ ಕಾರ್ಯದರ್ಶಿಗಳ ಪದಗ್ರಹಣ ಸಮಾರಂಭಕ್ಕೆ ಆಗಮಿಸಿದ್ದ ಮಾಜಿ ಸಿಎಂ ಯಡಿಯೂರಪ್ಪ ಆಗಮಿಸಿದ್ದ ಹಿನ್ನೆಲೆಯಲ್ಲಿ ಇಡೀ ಸಭಾಂಗಣ ಹಾಗೂ ಹೊರ ಭಾಗದಲ್ಲಿ ಅಪಾರ ಸಂಖ್ಯೆಯಲ್ಲಿ ಕಾರ್ಯಕರ್ತರು, ಬಿಎಸ್‌ವೈ ಅಭಿಮಾನಿಗಳು ಜಮಾಯಿಸಿದ್ದರು. | Kannada Prabha

ಸಾರಾಂಶ

ಕೇಂದ್ರ ಸಮರ್ಪಕ ಅನುದಾನ ನೀಡಿಲ್ಲವೆಂದು ಸುಳ್ಳು ಹೇಳಿಕೊಂಡು ದೆಹಲಿ ಜಂತರ್ ಮಂತರ್ ಮುಂದೆ ಹೋದ ಸಿದ್ದರಾಮಯ್ಯ ಸರ್ಕಾರ ರಾಷ್ಟ್ರ ಮಟ್ಟದಲ್ಲಿ ರಾಜ್ಯದ ಮಾನ ಕಳೆಯುತ್ತಿದ್ದಾರೆ. ಕೇಂದ್ರದಿಂದ ಬರ ಪರಿಹಾರ ಬಂದೇ ಇಲ್ಲವೆಂದು ಸಿದ್ದರಾಮಯ್ಯ ಹೇಳುತ್ತಾರೆ. ಆದರೆ, ಕೇಂದ್ರ ಸರ್ಕಾರ ವಿಪತ್ತು ನಿರ್ವಹಣೆಯಡಿ 6 ಸಾವಿರ ಕೋಟಿ ರು. ಅನುದಾನ ನೀಡಿದೆ. ಕಾಂಗ್ರೆಸ್ಸಿಗರು ದೆಹಲಿಗೆ ಹೋಗಿ, ರಾಜ್ಯದ ಮಾನ ಕಳೆಯುವ ಕೆಲಸ ಮಾಡಿದ್ದಾರೆ.

ಕನ್ನಡಪ್ರಭ ವಾರ್ತೆ ದಾವಣಗೆರೆ

ಗ್ಯಾರಂಟಿ ಯೋಜನೆ ಭರವಸೆ ಮೇಲೆ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರದ ಭ್ರಷ್ಟಾಚಾರ, ದುರಾಡಳಿತ ಮಿತಿ ಮೀರಿದ್ದು, ಇದೆಲ್ಲದರಿಂದ ರೋಸಿ ಹೋಗಿರುವ ಜನತೆ ಭ್ರಷ್ಟ ಕಾಂಗ್ರೆಸ್‌ ಸರ್ಕಾರವನ್ನು ಕಿತ್ತೊಗೆಯಬೇಕೆನ್ನುತ್ತಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ವಾಗ್ದಾಳಿ ನಡೆಸಿದ್ದಾರೆ.

ನಗರದ ಪಾರ್ವತಮ್ಮ ಶಾಮನೂರು ಶಿವಶಂಕರಪ್ಪ ಕಲ್ಯಾಣ ಮಂಟಪದಲ್ಲಿ ಬುಧವಾರ ಬಿಜೆಪಿ ನೂತನ ಜಿಲ್ಲಾಧ್ಯಕ್ಷ, ಪ್ರಧಾನ ಕಾರ್ಯದರ್ಶಿಗಳ ಪದಗ್ರಹಣ ಸಮಾರಂಭ ಉದ್ಘಾಟಿಸಿ ಮಾತನಾಡಿ ಕಳೆದ ವಿಧಾನಸಭೆ ಚುನಾವಣೆಯಲ್ಲಿ ಗ್ಯಾರಂಟಿ ಯೋಜನೆಗಳ ಹೆಸರಲ್ಲೇ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರ ಒಂದು ಕಡೆ ಸಮರ್ಪಕವಾಗಿ ಗ್ಯಾರಂಟಿ ಯೋಜನೆಗಳನ್ನೂ ಜಾರಿಗೆ ತಂದಿಲ್ಲ. ಗ್ಯಾರಂಟಿ ನೆಪದಲ್ಲಿ ಮತ್ತೊಂದು ಕಡೆ ಅಭಿವೃದ್ಧಿ ಕಾರ್ಯಗಳನ್ನೂ ಕೈಗೊಂಡಿಲ್ಲ ಎಂದು ಅಸಮಾಧಾನ ಹೊರ ಹಾಕಿದರು.

ಕೇಂದ್ರ ಸಮರ್ಪಕ ಅನುದಾನ ನೀಡಿಲ್ಲವೆಂದು ಸುಳ್ಳು ಹೇಳಿಕೊಂಡು ದೆಹಲಿ ಜಂತರ್ ಮಂತರ್ ಮುಂದೆ ಹೋದ ಸಿದ್ದರಾಮಯ್ಯ ಸರ್ಕಾರ ರಾಷ್ಟ್ರ ಮಟ್ಟದಲ್ಲಿ ರಾಜ್ಯದ ಮಾನ ಕಳೆಯುತ್ತಿದ್ದಾರೆ. ಕೇಂದ್ರದಿಂದ ಬರ ಪರಿಹಾರ ಬಂದೇ ಇಲ್ಲವೆಂದು ಸಿದ್ದರಾಮಯ್ಯ ಹೇಳುತ್ತಾರೆ. ಆದರೆ, ಕೇಂದ್ರ ಸರ್ಕಾರ ವಿಪತ್ತು ನಿರ್ವಹಣೆಯಡಿ 6 ಸಾವಿರ ಕೋಟಿ ರು. ಅನುದಾನ ನೀಡಿದೆ. ಕಾಂಗ್ರೆಸ್ಸಿಗರು ದೆಹಲಿಗೆ ಹೋಗಿ, ರಾಜ್ಯದ ಮಾನ ಕಳೆಯುವ ಕೆಲಸ ಮಾಡಿದ್ದಾರೆ. ಸರ್ಕಾರದ ದುಡ್ಡಿನಲ್ಲಿ ಜಾಹೀರಾತು ನೀಡಿ, ಸುಳ್ಳು ಹೇಳಿ ಸಿಕ್ಕಿ ಹಾಕಿಕೊಳ್ಳುವ ಹೀನಸ್ಥಿತಿಗೆ ಕಾಂಗ್ರೆಸ್ ಸರ್ಕಾರ ತಲುಪಿದೆ ಎಂದು ಹರಿಹಾಯ್ದರು.

ಕಾಂಗ್ರೆಸ್‌ ಅಪ್ರಸ್ತುತವಾಗಿದೆ:

ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಲೋಕಸಭೆ, ರಾಜ್ಯಸಭೆ ಕಲಾಪದಲ್ಲಿ ಸಿದ್ದರಾಮಯ್ಯ ಆರೋಪಗಳಿಗೆ ಸರಿಯಾದ ಉತ್ತರವನ್ನೇ ನೀಡಿದ್ದಾರೆ. ಒಕ್ಕೂಟ ವ್ಯವಸ್ಥೆಯನ್ನೇ ಪ್ರಶ್ನಿಸುವ, ದೇಶ ವಿಭಜನೆ ಮಾತುಗಳನ್ನಾಡುವವರನ್ನು ಇನ್ನು ಕೆಲವೇ ಕೆಲ ದಿನಗಳಲ್ಲಿ ಜನರೇ ಅಪ್ರಸ್ತುತ ಮಾಡಲಿದ್ದಾರೆ. ರಾಷ್ಟ್ರ ರಾಜಧಾನಿಗೂ ಹೋಗಿ ಸುಳ್ಳು ಹೇಳಿ ರಾಜ್ಯದ ಜನರ ಮರ್ಯಾದೆ ತೆಗೆಯುವ ಕೆಲಸವನ್ನು ಸಿದ್ದರಾಮಯ್ಯ ಸರ್ಕಾರ ಮಾಡಿದೆ ಎಂದು ಕಿಡಿಕಾರಿದರು.

ಸಿದ್ದೇಶಣ್ಣನ ಗೌರವದಿಂದ ಕಾಣುತ್ತೇವೆ: ಬಿಎಸ್‌ವೈ

ಮುಂಬರುವ ಲೋಕಸಭೆ ಚುನಾವಣೆಯಲ್ಲಿ ರಾಜ್ಯದ 28 ಕ್ಷೇತ್ರವನ್ನೂ ಗೆಲ್ಲುವ ಪಣ ತೊಟ್ಟು, ಸಂಕಲ್ಪ ಮಾಡಿದ್ದೇವೆ ಅದಕ್ಕೆ ರಾಜ್ಯದ ಜನರ ಸಹಕಾರವೂ ಬೇಕು. ಬಿಜೆಪಿ ಜಿಲ್ಲಾಧ್ಯಕ್ಷ, ಪ್ರಧಾನ ಕಾರ್ಯದರ್ಶಿಗಳ ಪದಗ್ರಹಣ ಸಮಾರಂಭಕ್ಕೆ ಸಂಸದ ಡಾ.ಜಿ.ಎಂ.ಸಿದ್ದೇಶ್ವರ ಬಂದಿಲ್ಲವೆಂದು ಯಾರೂ ತಪ್ಪಾಗಿ ಭಾವಿಸಬೇಕಿಲ್ಲ. ದೆಹಲಿಯಲ್ಲಿ ಸಂಸದ ಸಿದ್ದೇಶ್ವರ ಇರಬೇಕಾದ ಅನಿವಾರ್ಯತೆ ಇದೆ. ಸಿದ್ದೇಶಣ್ಣನ ಜೊತೆ ದೂರವಾಣಿಯಲ್ಲಿ ಮಾತನಾಡಿದ್ದೇನೆ. ಸ್ವತಃ ಸಿದ್ದೇಶಣ್ಣನೇ ಕಾರ್ಯಕ್ರಮಕ್ಕೆ ಹೋಗಿ, ಯಶಸ್ವಿಗೊಳಿಸುವಂತೆ ನನಗೆ ಹೇಳಿದ್ದರು. ಸಿದ್ದೇಶಣ್ಣನನ್ನು ನಾವು ಗೌರವದಿಂದ ಕಾಣುತ್ತೇವೆ. ದಾವಣಗೆರೆ ಲೋಕಸಭೆ ಚುನಾವಣೆಯಲ್ಲಿ ಎಲ್ಲರೂ ಒಟ್ಟಾಗಿ, ಒಂದಾಗಿ ಬಿಜೆಪಿ ಸಂಸದರ ಗೆಲ್ಲಿಸಬೇಕು.

ಬಿ.ಎಸ್.ಯಡಿಯೂರಪ್ಪ, ಮಾಜಿ ಮುಖ್ಯಮಂತ್ರಿ

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಶೇ.11ರಷ್ಟು ಟೊಯೋಟಾ ಕಾರುಗಳು ರಾಜ್ಯದಲ್ಲೇ ಸೇಲ್‌
ರಾಜ್ಯದಲ್ಲಿ 2 ದಿನ ಮೋಡಕವಿದ ವಾತಾವರಣ, ಮಳೆ