ದೊಡ್ಡಬಳ್ಳಾಪುರ: ಜಗತ್ತಿನ ಸರ್ವ ಸಾಹಿತ್ಯಕ್ಕೆ ಬೇಕಾದ ಎಲ್ಲ ಅಂಶಗಳೂ ಕನ್ನಡ ಸಾಹಿತ್ಯದಲ್ಲಿದೆ. ಎಲ್ಲ ಭಾಷೆಗಳಿಗೂ ಕೊಡಬಲ್ಲಷ್ಟು ಸಂಪತ್ತು ಕನ್ನಡ ಭಾಷೆಯಲ್ಲಿದೆ ಎಂದು ಸಾಬೀತುಪಡಿಸಿದವರು ದ.ರಾ.ಬೇಂದ್ರೆ ಎಂದು ಸಂಸ್ಕೃತಿ ಚಿಂತಕ ಡಾ.ಜಿ.ಬಿ.ಹರೀಶ ಅಭಿಪ್ರಾಯಪಟ್ಟರು.
ನಗರದ ಮಂಗಳ ವಿದ್ಯಾ ಮಂದಿರದಲ್ಲಿ ಅಖಿಲ ಭಾರತ ಸಾಹಿತ್ಯ ಪರಿಷತ್ ಹಾಗೂ ಗ್ರಾಮಾಂತರ ಜಿಲ್ಲಾ ಘಟಕದ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಕವಿ ದ.ರಾ.ಬೇಂದ್ರೆ ಅವರ ''''''''ನಾಕುತಂತಿ ಷಷ್ಠಿಪೂರ್ತಿ'''''''' ಸರಣಿ ನಾದ-2 ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಾಕುತಂತಿ ಕವನಗಳಲ್ಲಿ ಜೈನ, ಬೌದ್ಧ, ಜಾನಪದ, ವೈದಿಕ, ಸಾಮಾಜಿಕ ಹಾಗೂ ಕನ್ನಡ ಸಂಸ್ಕೃತಿ ಮೇಳೈಸಿದೆ. 2068 ಅರಿಯುವ ಸಾಹಿತ್ಯದ ಅಂತಃಸತ್ವ ಹಾಗೂ ಜಗತ್ತಿಗೆ ಪರಿಚಯಿಸುವ ಕಾರ್ಯವಾಗಬೇಕಿದೆ. ಆದರೆ, ಮಾಧ್ಯಮಗಳು ಕಲೆಗೆ ಹತ್ತಿರವಾಗುತ್ತಿಲ್ಲ. ಕನ್ನಡ ಸಾಹಿತ್ಯ ಲೋಕದ ಭಾವಜಲ ಬತ್ತಿ ಹೋಗುತ್ತಿರುವುದು ಬೇಸರದ ಸಂಗತಿ ಎಂದರು.ಬೇಂದ್ರೆ ಅವರ ನಾಕುತಂತಿ ಕವನ ಸಂಕನಲದಲ್ಲಿ 44 ಕವನಗಳಿವೆ. ಇದರಲ್ಲಿ ಸಾಂಸ್ಕೃತಿಕ, ಭೌಗೋಳಿಕ ಸೇರಿದಂತೆ ಹಲವು ಮಜಲುಗಳಿವೆ. ಅಧ್ಯಾತ್ಮ ನೆಲೆಯಲ್ಲಷ್ಟೆ ಅಲ್ಲದೇ ಸಾಮಾಜಿಕ ನೆಲೆಯಲ್ಲೂ ಬೇಂದ್ರೆ ಕಾವ್ಯ ಪ್ರಮುಖವಾಗುತ್ತದೆ. ವಿವಿಧ ನಂಬಿಕೆ, ಸಂಪ್ರದಾಯದವರು ಅವರ ಪಾಡಿಗೆ ಅವರಿದ್ದರೆ ಎಲ್ಲರೂ ಒಂದಾಗುವುದು ಯಾವಾಗ? ನಾನು, ನೀನು, ಅನು, ತಾನು ಎನ್ನುವುದನ್ನೇ ಈ ದೃಷ್ಟಿಯಿಂದ ಓದಿದರೆ ಅದರಲ್ಲಿ ಸಾಮರಸ್ಯದ ಸಂದೇಶ ಸಿಗುತ್ತದೆ. ಬೇಂದ್ರೆ ಕಾವ್ಯದಲ್ಲಿ ಆಧ್ಯಾತ್ಮ ಜಿಜ್ಞಾಸುಗಳಿಗೆ ಅಧ್ಯಾತ್ಮದಂತೆ, ಪ್ರೇಮಿಗಳಿಗೆ ಪ್ರೇಮ ಕವಿತೆಯಂತೆ ಕಾಣುತ್ತದೆ. ಬೇಂದ್ರೆ ಒಂದೇ ಕವನದಲ್ಲಿ ಒಂದೇ ವಿಷಯವನ್ನು ಇರಿಸಿಕೊಂಡು ಬರೆಯುವುದಿಲ್ಲ ಎಂದರು.
ಬೇಂದ್ರೆ ಅವರು ತತ್ತ್ವಜ್ಞಾನಿಯಾಗಿ ಲೋಕವನ್ನು ನೋಡುತ್ತಾರೆ. ಸಾಹಿತ್ಯವನ್ನು ದಾರ್ಶನಿಕವಾಗಿ ನೋಡುತ್ತಾರೆ. ಇತಿಹಾಸವನ್ನು ಅವರು ಕೇವಲ ಪುಸ್ತಕ, ಸಾಹಿತಿಗಳ ಆಧಾರದಲ್ಲಿ ನೋಡದೆ ಬುದ್ಧನ ಹಿನ್ನೆಲೆಯಾಗಿಟ್ಟುಕೊಂಡು ಮಾತನಾಡುತ್ತಾರೆ. ಇಷ್ಟೆಲ್ಲ ವೈವಿಧ್ಯತೆ ಹೊಂದಿದ್ದ ಬೇಂದ್ರೆ ಅವರು, ಜೀವನದಲ್ಲಿ ಬಡವರಾಗಿದ್ದರೂ ಸ್ನೇಹದಲ್ಲಿ ಶ್ರೀಮಂತರಾಗಿದ್ದರು ಎಂದರು.ದೇವುಡು, ಗೋವಿಂದ ಪೈ, ಮಾಸ್ತಿ ವೆಂಕಟೇಶ ಅಯ್ಯಂಗಾರ್, ಬೆಳಗೆರೆ ಜಾನಕಮ್ಮ ಹೀಗೆ ಅನೇಕರು ನಿಧನರಾದಾಗ ಕವಿತೆಗಳನ್ನು ಬೇಂದ್ರೆ ಬರೆದಿದ್ದಾರೆ. ಅವರಿಗೆ ಉತ್ತರ ಕರ್ನಾಟಕ, ದಕ್ಷಿಣ ಕರ್ನಾಟಕ ಎಂಬ ಯಾವ ಭೇದವೂ ಇರಲಿಲ್ಲ. ಆದರೆ, ಇಂದು ಪರಿಸ್ಥಿತಿ ವಿಭಿನ್ನವಾಗಿದೆ. ಯು.ಆರ್.ಅನಂತಮೂರ್ತಿ, ಡಿ.ಆರ್.ನಾಗರಾಜ್, ಪಿ.ಲಂಕೇಶ, ಚೆನ್ನವೀರ ಕಣವಿ ಅವರು ನಿಧನರಾದಾಗ ಯಾರೂ ಅವರ ಬಗ್ಗೆ ಕವಿತೆ ಬರೆದಿದ್ದನ್ನು ನೋಡಿಲ್ಲ. ಇದೆಲ್ಲವನ್ನೂ ನೋಡಿದಾಗ ಕನ್ನಡ ಸಾಹಿತ್ಯ ಸಂಸ್ಕೃತಿ ಎಲ್ಲೋ ದಾರಿತಪ್ಪಿದೆ ಎನ್ನಿಸುತ್ತದೆ ಎಂದರು.
ಬೇಂದ್ರೆ ಅವರ ನಾಕುತಂತಿ ಕವನ ಸಂಕಲನ ಹೊರಬಂದು 60 ವರ್ಷ ಹಾಗೂ ಜ್ಞಾನಪೀಠ ಪ್ರಶಸ್ತಿ ಬಂದು 50 ವರ್ಷ ಸಂದಿವೆ. ಅಧಾತ್ಮ, ಪ್ರಕೃತಿ, ಮಾನವೀಯ ಸಂಬಂಧಗಳ ವಿಚಾರ ತಮ್ಮ ಕವನದಲ್ಲಿ ಅಳವಡಿಸಿಕೊಂಡಿದ್ದಾರೆ. ಕನ್ನಡ ಸಂಸ್ಕೃತಿ ಹೊಗಳುವುದರೊಂದಿಗೆ ನ್ಯೂನತೆ ಕುಟುಕಿದ್ದಾರೆ. ಜಡದಿಂದ ಪ್ರೇಮದ ತನಕ ಅಣುಮಹಲ್ ಕವನದಲ್ಲಿ ಹೇಳಿದ್ದಾರೆ ಎಂದು ಬೇಂದ್ರೆ ಅವರ ನಾಕುತಂತಿ ಕವನಗಳನ್ನು ವಿಶ್ಲೇಷಿಸಿದರು.ಹಾಸ್ಯ ಬರಹಗಾರ ಎಂ.ಎಸ್. ನರಸಿಂಹಮೂರ್ತಿ ಪ್ರಾಸ್ತಾವಿಕವಾಗಿ ಮಾತನಾಡಿ, ಜೀವನದಲ್ಲಿ ಬೇಂದ್ರೆ ಅವರಷ್ಟು ಕಷ್ಟಪಟ್ಟವರು ಬೇರೆ ಯಾವ ಸಾಹಿತಿಯೂ ಇರಲಿಕ್ಕಿಲ್ಲ. ಆದರೆ, ನೋವನ್ನೆಲ್ಲ ನುಂಗಿ ಒಳಿತಾದದ್ದನ್ನೇ ಜನರಿಗೆ ತಮ್ಮ ಸಾಹಿತ್ಯದ ಮೂಲಕ ನೀಡಿದರು. ಸ್ವಾತಂತ್ರ್ಯ ಚಳವಳಿಗೆ ಧುಮುಕಿದರು. ಬದುಕಿನ ಸಂವೇದನೆ ಕವನದಲ್ಲಿ ವ್ಯಕ್ತಪಡಿಸಿದರು ಎಂದರು.
ಪ್ರೀತಿ ನವೀನ್ ಅವರು ಬೇಂದ್ರೆ ಅವರ ನಾಕುತಂತಿ ಕವಿತೆ ಗಾಯನ ಮಾಡಿದರು. ಲೇಖಕಿ ಕೆ.ಎಸ್.ಪ್ರಭಾ. ವಾಣಿಜ್ಯ ತೆರಿಗೆಗಳ ಸಹಾಯಕ ಆಯುಕ್ತ ಜಿ.ಎಸ್.ಸ್ಮಿತಾ, ಕನ್ನಡ ಶಿಕ್ಷಕಿ ಯಶೋಧಾ ಬೇಂದ್ರೆ ಅವರ ಕವನಗಳ ವಾಚನ ಮಾಡಿದರು.ಡಾ.ಇಂದಿರಾ ಸ್ವಾಗತಿಸಿ. ಜಿಲ್ಲಾಧ್ಯಕ್ಷ ಡಿ.ಎಂ.ಘನಶ್ಯಾಮ, ದಕ್ಷಿಣ ಜಿಲ್ಲಾಧ್ಯಕ್ಷೆ ಡಾ.ಭಾನು, ಉತ್ತರ ಜಿಲ್ಲಾಧ್ಯಕ್ಷ ಸದ್ಯೋಜಾತ ಭಟ್, ಸಂಯೋಜಕ ಚಂದ್ರಶೇಖರ್ ಇದ್ದರು.
17ಕೆಡಿಬಿಪಿ3-ದೊಡ್ಡಬಳ್ಳಾಪುರದಲ್ಲಿ ಅಖಿಲ ಭಾರತೀಯ ಸಾಹಿತ್ಯ ಪರಿಷದ್ ವತಿಯಿಂದ ನಡೆದ ಕವಿ ದ.ರಾ.ಬೇಂದ್ರೆ ಅವರ ನಾಕುತಂತಿ ಷಷ್ಠಿಪೂರ್ತಿ ಕಾರ್ಯಕ್ರಮದಲ್ಲಿ ಡಾ.ಜಿ.ಬಿ.ಹರೀಶ ಮಾತನಾಡಿದರು.