ಲೌಕಿಕ ಆಲೋಚನೆಗಿಂತ ಪಾರಮಾರ್ಥಿಕ ಚಿಂತನೆ ಅಗತ್ಯ: ಹೈಕೋರ್ಟ್‌ ನ್ಯಾಯಮೂರ್ತಿ ಇ.ಎಸ್. ಇಂದ್ರೇಶ್‌

KannadaprabhaNewsNetwork | Published : May 23, 2025 12:10 AM
ಸಿದ್ಮ ಇಂಡಸ್ಟ್ರಿಸ್‌ ಪಾರ್ಕ್‌ನ ವ್ಯವಸ್ಥಾಪಕ ನಿರ್ದೇಶಕ ಎಚ್.ಎಸ್. ಮಹದೇವ ಅವರು ಶಿಬಿರವು ಮನಸ್ಸಿಗೆ ನೆಮ್ಮದಿಯನ್ನಷ್ಟೆ ನೀಡುವುದಿಲ್ಲ. ಇಂತಹ ಶಿಬಿರಗಳಿಂದ ಪರಿಸರ ಪ್ರಜ್ಞೆ ಹಾಗೂ ಆಧ್ಯಾತ್ಮಿಕ ವಿಚಾರಗಳ ಬಗ್ಗೆ ಅರಿವನ್ನು ಹೊಂದಬಹುದು .
Follow Us

ಕನ್ನಡಪ್ರಭ ವಾರ್ತೆ ಮೈಸೂರು

ಲೌಕಿಕ ಆಲೋಚನೆಗಿಂತ ಪಾರಮಾರ್ಥಿಕ ಚಿಂತನೆ ಅಗತ್ಯ ಎಂದು ಕರ್ನಾಟಕ ಹೈಕೋರ್ಟ್‌ ನ್ಯಾಯಮೂರ್ತಿ ಇ.ಎಸ್. ಇಂದ್ರೇಶ್‌ ಅಭಿಪ್ರಾಯಪಟ್ಟರು.

ಊಟಿಯ ತೀಟಕಲ್‌ ನ ಜೆಎಸ್ಎಸ್ ಪಬ್ಲಿಕ್ ಶಾಲಾ ಆವರಣದಲ್ಲಿ ನಡೆದ ಜೀವನೋತ್ಸಾಹ ಶಿಬಿರದ ಸಮಾರೋಪದಲ್ಲಿ ಅವರು ಮಾತನಾಡಿದರು.

ಭಾರತೀಯ ಸಂಸ್ಕೃತಿ ಅತ್ಯಂತ ಶ್ರೇಷ್ಠವಾದದ್ದು, ಸನಾತನ ಪರಂಪರೆಯನ್ನು ಬಿಡದೆ ನಿತ್ಯ ಜೀವನದಲ್ಲಿ ಸ್ಮರಣೆ ಮಾಡಬೇಕು. ಯಾಂತ್ರಿಕವಾಗಿ ಬದಲಾಗುತ್ತಿರುವ ಆಧುನಿಕ ಕಾಲದಲ್ಲಿ ಜನರು ಒತ್ತಡಕ್ಕೆ

ಒಳಗಾಗುತ್ತಿದ್ದಾರೆ. ಜೀವನೋತ್ಸಾಹವನ್ನು ಹೆಚ್ಚಿಸಬೇಕೆಂಬ ಆಶಯದಿಂದ ಪರಮಪೂಜ್ಯ ಜಗದ್ಗುರುಗಳು ಶಿಬಿರವನ್ನು ಏರ್ಪಡಿಸಿರುವುದು ಅರ್ಥಪೂರ್ಣವಾಗಿದೆ. ಯುವಕರು ಇಂತಹ ಶಿಬಿರಗಳಲ್ಲಿ

ಭಾಗವಹಿಸುವುದರಿಂದ ಸಂಸ್ಕಾರ, ಸಂಸ್ಕೃತಿ, ಇತಿಹಾಸ ಹಾಗೂ ಬದುಕಿನ ಮೌಲ್ಯಗಳನ್ನು ಅರಿತು ಉತ್ತಮ ನಾಗರಿಕರಾಗಬಹುದು. ಸುತ್ತೂರು ಶ್ರೀಮಠ ಮಾನವ ಕಲ್ಯಾಣಕ್ಕಾಗಿ ಮಾಡುತ್ತಿರುವ ಸೇವೆ ಪ್ರಶಂಸನೀಯ. ಸರ್ಕಾರಗಳು ಮಾಡಲಾಗದ ಕೆಲಸವನ್ನು ಮಠಗಳು ಮಾಡುತ್ತಿರುವುದು ಹೆಮ್ಮೆಯ ಸಂಗತಿ. ಬದುಕಿನಲ್ಲಿ ಮೌಲ್ಯಯುತ ಜೀವನ ನಡೆಸಲು ಸ್ಥಿತಪ್ರಜ್ಞತೆ ಹಾಗೂ ಹಿರಿಯರ ಬಗ್ಗೆ ಕಾಳಜಿ, ಪರಂಪರೆಯ ಸ್ಮರಣೆ ಅಗತ್ಯ ಎಂದು ತಿಳಿಸಿದರು.

ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ಲೋಕಸೇವಾ ಆಯೋಗದ ಅಧ್ಯಕ್ಷ ಶಿವಶಂಕರಪ್ಪ ಎಸ್. ಸಾಹುಕಾರ್‌ ಮಾತನಾಡಿ, ಜೀವನದಲ್ಲಿ ತೃಪ್ತಿ ಇದ್ದರೆ ಜೀವನೋತ್ಸಾಹ ಸಾಧ್ಯ. ನಮ್ಮೊಳಗೆ ಅತೃಪ್ತಿ ಇದ್ದರೆ ನೆಮ್ಮದಿ ಜೀವನ ಸಾಧ್ಯವಾಗುವುದಿಲ್ಲ. ಬದುಕಿನ ಸಾರ್ಥಕತೆ ಕಂಡುಕೊಳ್ಳಲು ಉತ್ತಮ ಚಿಂತನೆಯೊಂದಿಗೆ ಸಂಸ್ಕಾರ ಮುಖ್ಯ ಎಂದರು.

ಕೊಡಗು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ. ಅಶೋಕ ಎಸ್. ಆಲೂರ ಅವರು ನಮ್ಮ ನಡೆ ನುಡಿ ಜನಮೆಚ್ಚುವಂತೆ ಇರಬೇಕು. ದೃಷ್ಟಿ ಬದಲಾದರೆ ಸೃಷ್ಟಿ ಬದಲಾಗುತ್ತದೆ. ನಾವು ನೋಡುವ ನೋಟ, ಮಾಡುವ ಆಲೋಚನೆ ಶುದ್ಧವಾಗಿರಬೇಕು ಎಂದು ತಿಳಿಸಿದರು.

ಕರ್ನಾಟಕ ಲೋಕಸೇವಾ ಆಯೋಗದ ಸದಸ್ಯ ಡಾ.ಎಚ್.ಎಸ್. ನರೇಂದ್ರ ಮಾತನಾಡಿದರು.

ಸಿದ್ಮ ಇಂಡಸ್ಟ್ರಿಸ್‌ ಪಾರ್ಕ್‌ನ ವ್ಯವಸ್ಥಾಪಕ ನಿರ್ದೇಶಕ ಎಚ್.ಎಸ್. ಮಹದೇವ ಅವರು ಶಿಬಿರವು ಮನಸ್ಸಿಗೆ ನೆಮ್ಮದಿಯನ್ನಷ್ಟೆ ನೀಡುವುದಿಲ್ಲ. ಇಂತಹ ಶಿಬಿರಗಳಿಂದ ಪರಿಸರ ಪ್ರಜ್ಞೆ ಹಾಗೂ ಆಧ್ಯಾತ್ಮಿಕ ವಿಚಾರಗಳ ಬಗ್ಗೆ ಅರಿವನ್ನು ಹೊಂದಬಹುದು ಎಂದು ತಿಳಿಸಿದರು.

ಜೆಎಸ್ಎಸ್ ಫಾರ್ಮಸಿ ಕಾಲೇಜಿನ ಪ್ರಾಂಶುಪಾಲ ಡಾ. ಎಸ್.ಪಿ. ಧನಬಾಲ್‌ ಅವರು ಶಿಬಿರಾರ್ಥಿಗಳ ಉತ್ಸಾಹದ ಬಗ್ಗೆ ಸಂತೋಷ ವ್ಯಕ್ತಪಡಿಸಿದರು.

ಶಿಬಿರಾರ್ಥಿಗಳಾದ ಎಂ.ಜಿ. ಸಂಗೊಂದಿಮಠ, ರಮಾ ಕನಾಳೆ, ಶ್ರೀಕಾಂತ್ ಕಿತ್ತಲಿ, ಎಸ್. ಕೆ. ಗಾಯತ್ರಿ, ಪಂಡಿತ್‌ ರಾವ್ ಪಾಟೀಲ್ ಹಾಗೂ ಆರ್‌.ಕೆ.

ಜಯಶ್ರೀ ಅವರು ಅನಿಸಿಕೆಗಳನ್ನು ಹಂಚಿಕೊಂಡರು. ಮಾಯಾ ಹಸಬಿ ಪ್ರಾರ್ಥಿಸಿದರು, ಎಚ್.ಕೆ. ಬಸವಣ್ಣ ಶಿಬಿರದ ವರದಿ ಮಂಡಿಸಿದರು, ಎಚ್.ಎಸ್. ಸಿದ್ಧಮಲ್ಲಿಕಾರ್ಜುನಸ್ವಾಮಿ ಸ್ವಾಗತಿಸಿದರು, ಎಂ.ಎಸ್. ಪ್ರಜ್ವಲ್ ವಂದಿಸಿದರು, ಸೋಮಶೇಖರ ಮಗದುಂ ನಿರೂಪಿಸಿದರು.