ಕನ್ನಡಪ್ರಭ ವಾರ್ತೆ ಮಳವಳ್ಳಿ
ಪಟ್ಟಣದಲ್ಲಿ ಸುತ್ತೂರು ಶಿವರಾತ್ರೀಶ್ವರ ಶಿವಯೋಗಿಗಳ 1066ನೇ ಜಯಂತ್ಯುತ್ಸವದ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದ ಶ್ರೀಗಳು, ಆಧುನಿಕ ಯುಗದಲ್ಲಿ ಜ್ಞಾನವಿಲ್ಲ ಎಂದರೆ ದಿಕ್ಕು ತಪ್ಪುತ್ತೇವೆ. ವ್ಯಕ್ತಿ ವ್ಯಕ್ತಿಗಳ ಮನಸ್ಸು ಕೂಡಿಸಬೇಕಾದ್ರೆ ಆಧ್ಯಾತ್ಮಿಕತೆಯ ಅಗತ್ಯವಿದೆ. ಮಾನಸಿಕ ಮಾಲಿನ್ಯ ತೊಳೆಯುವ ಕೆಲಸ ಸರ್ಕಾರದಿಂದ ಆಗದು, ಆದರೆ ಸುತ್ತೂರು ಮಠದಿಂದ ಅದು ಸಾಧ್ಯವಾಗುತ್ತಿದೆ ಎಂದರು.
ಭೌತ ಜಗತ್ತಿನ ಸಮಸ್ಯೆಗೆ ಹಲವು ಪರಿಹಾರಗಳಿವೆ. ಆದರೆ, ಒಳಗಿನ ಸಮಸ್ಯೆ ಪರಿಹರಿಸಲು ಆಧ್ಯಾತ್ಮಿಕತೆ ಅಗತ್ಯವಿದೆ. ಆಧ್ಯಾತ್ಮಿಕ ಜೊತೆಗೆ ಆಧುನಿಕತೆಯನ್ನು ಅರಿತು ಸುತ್ತೂರು ಮಠ ವಿಶ್ವದೆಲ್ಲಡೆ ತಮ್ಮ ಸಂಸ್ಥೆಗಳನ್ನು ತೆರೆದು ಕೆಲಸ ಮಾಡುತ್ತಿದೆ ಎಂದು ಶ್ಲಾಘಿಸಿದರು.ಬೆಂಗಳೂರು ದಕ್ಷಿಣ ಸಂಸದ ಡಾ.ಸಿ.ಎನ್.ಮಂಜುನಾಥ್ ಮಾತನಾಡಿ, ಇದೊಂದು ಅಂತಾರಾಷ್ಟ್ರೀಯ ಮಟ್ಟದ ಕಾರ್ಯಕ್ರಮವಾಗಿದೆ. ಸುತ್ತೂರು ಮಠದ ಸಾಗರದಾಚೆಗೆ ತನ್ನ ವಿಸ್ತಾರತೆ ಬೆಳೆಸಿಕೊಂಡಿದೆ. ಸ್ವಾತಂತ್ರ್ಯ ಬಂದಾಗ ಶೇ.20ರಷ್ಟು ಸಾಕ್ಷರತೆ ಇದ್ದರೂ ಶೇ.90ರಷ್ಟು ಸಂಸ್ಕಾರ ವಿತ್ತು. ಆದರೆ ಈಗ ಅದು ಬದಲಾಗಿದೆ ಎಂದರು.
ಪ್ರಸ್ತುತ ಸಾಕ್ಷರತೆ ಹೆಚ್ಚಾಗಲು ಸುತ್ತೂರು ಮಠವು ಕಾರಣವಾಗಿದೆ. ಶಿಕ್ಷಣದ ಜೊತೆಗೆ ಸಂಸ್ಕಾರವನ್ನು ಮಠ ನೀಡಿದೆ. ನಾವು ಮಹದೇವ ಆಗಬೇಕು. ಏಕೆಂದರೆ ಮಹದೇವ ನಗುತಾ ಇರುತ್ತಾರೆ. ಕಾಲ ಬದಲಾಗಿಲ್ಲ ಆದರೆ, ಜನರು ಬದಲಾಗಿದ್ದಾರೆ. ಅವರ ನಿರೀಕ್ಷೆ, ಅಪೇಕ್ಷೆ ದೊಡ್ಡದಾಗಿದೆ ಎಂದರು.ಮನುಷ್ಯ ಕಂಡು ಹಿಡಿದಿರುವುದು ಹಣ ಮತ್ತು ಮೊಬೈಲ್ ಮಾತ್ರ. ಅಂದರೆ, ಮಾನವೀಯತೆಗಿಂತಲೂ ಎಲ್ಲವೂ ಬದಲಾಗಿದೆ. ನಾವೆಲ್ಲರೂ ಭಿಕ್ಷುಕರೇ. ಶ್ರೀಮಂತರು ಬಡವರು ಎಲ್ಲರೂ ದೇವರ ಬಳಿ ಬೇಡುತ್ತಾರೆ. ಮನುಷ್ಯ ಆಸ್ಪತ್ರೆ, ಜೈಲು, ರುದ್ರಭೂಮಿಯ ದರ್ಶನ ಮಾಡಿದರೆ ಸಾಕು ಎಲ್ಲವೂ ಅರ್ಥವಾಗುತ್ತದೆ ಎಂದರು.
ಸುತ್ತೂರು ಮಠ ದುಡ್ಡಿಗಾಗಿ ಸೇವೆ ಮಾಡದೇ ಮಾನವೀಯತೆಯ ನೆಲದ ಮೇಲೆ ಕೆಲಸ ಮಾಡುತ್ತಿವೆ. ಸಾಮಾಜಿಕ ಜಾಲತಾಣಗಳು ಸಮಾಜಕ್ಕೆ ಸೇತುವೆಯಾಗಬೇಕೆ ವಿನಹಃ ಗೋಡೆಯಾಗುತ್ತಿವೆ ಎಂದರು.ನಾನು ಆಕಸ್ಮಿಕವಾಗಿ ರಾಜಕಾರಣಕ್ಕೆ ಬಂದು ರಾಜಕಾರಣಿಯಾಗಿರುವೆ. ರಾಜಕಾರಣಿ ರಾಷ್ಟ್ರ ಕರಣಿಗಳು ಆದಾಗ ಮಾತ್ರ ದೇಶ ಅಭಿವೃದ್ಧಿಯಾಗುತ್ತದೆ. ದೇಶ ಕಟ್ಟುವ ಪ್ರೀತಿಸುವ ಕೆಲಸ ಮಾಡಬೇಕು. ದೇಶಕ್ಕೆ ಕೊಡುಗೆ ನೀಡುವುದು ರಾಜಕಾರಣವಾಗಿದೆ ಎಂದರು.
ಕೈಗಾರಿಕೆಗಳ ಆಧುನೀಕರಣ ಸೋಮಾರಿತನದ ಜೊತೆಗಿದೆ. ಮನುಷ್ಯನಿಗೆ ನಿಜವಾದ ಶತ್ರು ಸೋಮಾರಿತನ. ದುಡಿಮೆ ಸತ್ತವರಿಗಿಂತ ಚಿಂತಿಸಿ ಸತ್ತರೇ ಹೆಚ್ಚು. ದಿಢೀರ್ ರಂತ ಶ್ರೀಮಂತರಾಗಬೇಕು. ಅಸೂಯೆ, ಅನುಮಾನ, ಅಹಂಕಾರ ಇರಬಾರದು. ಹೆಣ್ಣು ಹುಟ್ಟಿದ್ದರೆ ಸಿಹಿ ಹಂಚುವ ಕೆಲಸ ಮಾಡಬೇಕು. ತಂದೆ ತಾಯಂದಿರನ್ನು ನೋಡಿಕೊಳ್ಳುವವರು ಹೆಣ್ಣು ಮಕ್ಕಳೆ ಆಗಿದ್ದಾರೆ ಎಂದರು.ಇಂದು ಆರೋಗ್ಯವನ್ನು ಅಡವಿಟ್ಟು ಹಣ ಮಾಡಲು ಹೋಗಿ ಆರೋಗ್ಯಕ್ಕೆ ಖರ್ಚು ಮಾಡುವವರೇ ಹೆಚ್ಚು. ಶಿಕ್ಷಣ ಮತ್ತು ಆರೋಗ್ಯವನ್ನು ಉಚಿತವಾಗಿ ನೀಡಬೇಕು. ಶಾಶ್ವತ ಯೋಜನೆಗಳಿಗೆ ರಾಜಕಾರಣಿಗಳು ಹೆಚ್ಚಿನ ಒತ್ತು ನೀಡಬೇಕು. ಸುತ್ತೂರು ಮಠದಲ್ಲಿ ಮಗುವಿನ ಹೃದಯವಿದೆ ಎಂದು ಬಣ್ಣಿಸಿದರು.
ಲೋಕಸಭೆಯಲ್ಲಿ ಇವತ್ತಿನ ಚರ್ಚೆ ವೇಳೆ ರಾಗಿಗೆ 4886 ನೀಡಲು ನಿರ್ಧರಿಸಿದ್ದು, ಭತ್ತಕ್ಕೂ ಇದೇ ರೀತಿ ನೀಡಬೇಕು ಎನ್ನುವುದು ನಮ್ಮ ಬೇಡಿಕೆಯಾಗಿದೆ ಎಂದರು.