ಕನ್ನಡಪ್ರಭ ವಾರ್ತೆ ಮದ್ದೂರು
ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅವರ ನಿಧನದ ಹಿನ್ನೆಲೆಯಲ್ಲಿ ಪಟ್ಟಣದಲ್ಲಿ ವರ್ತಕರು ಬುಧವಾರ ಸ್ವಯಂ ಪ್ರೇರಿತವಾಗಿ ಪಟ್ಟಣವನ್ನು ಬಂದ್ ಮಾಡಿ ಗೌರವ ಸಲ್ಲಿಸಿದರು.ಪಟ್ಟಣದ ವರ್ತಕರ ಸಂಘ, ವಿವಿಧ ಸಂಘಟನೆಗಳು ಬಂದ್‌ಗೆ ಕರೆ ನೀಡಿದ್ದವು. ಮದ್ದೂರು ಪಟ್ಟಣ, ಶಿವಪುರ, ಕೃಷ್ಣ ಅವರ ಹುಟ್ಟೂರು ಸೋಮನಹಳ್ಳಿ ಸೇರಿದಂತೆ ತಾಲೂಕಿನ ಹೋಬಳಿ ಕೇಂದ್ರಗಳಲ್ಲಿ ವರ್ತಕರು, ಹೋಟೆಲ್ ಮಾಲೀಕರು ತಮ್ಮ ವಹಿವಾಟುಗಳನ್ನು ಸ್ಥಗಿತ ಗೊಳಿಸಿ ಎಸ್.ಎಂ.ಕೃಷ್ಣರ ನಿಧನಕ್ಕೆ ಶ್ರದ್ಧಾಂಜಲಿ ಸಲ್ಲಿಸಿದರು.ಎಸ್ಎಂಕೆ ಅಭಿಯಾನಿಯ 50 ಸಾವಿರ ರು. ಅಪಹರಿಸಿದ ಜೇಬು ಕಳ್ಳರು
ಮದ್ದೂರು:ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ರವರ ಪಾರ್ಥಿವ ಶರೀರದ ಅಂತಿಮ ದರ್ಶನ ನೋಡಲು ಆಗಮಿಸಿದ್ದ ಅಭಿಮಾನಿಯೊಬ್ಬರ ಜೇಬಿನಲ್ಲಿದ್ದ ಹಣ ಅಪಹರಿಸುವ ಮೂಲಕ ಜೇಬುಗಳ್ಳರು ತಮ್ಮ ಕೈ ಕೈಚಳಕ ತೋರಿದ ಘಟನೆ ತಾಲೂಕಿನ ನಿಡಗಟ್ಟ ಬಳಿ ಬುಧವಾರ ಜರುಗಿತು.
ತಾಲೂಕಿನ ಕೊಪ್ಪ ಹೋಬಳಿಯ ಗೂಳೂರು ದೊಡ್ಡಿ ಗ್ರಾಮದ ಗುತ್ತಿಗೆದಾರ ರಾಜು ಅವರು ಇಹಲೋಕ ತ್ಯಜಿಸಿದ ಎಸ್.ಎಂ. ಕೃಷ್ಣ ರವರ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದು ಪುಷ್ಪ ನಮನ ಸಲ್ಲಿಸಲು ಆಗಮಿಸಿದ್ದರು.ಈ ವೇಳೆ ಪಾರ್ಥಿವ ಶರೀರವಿದ್ದ ವಾಹನ ಹತ್ತಲು ಉಂಟಾದ ನೂಕು ನುಗ್ಗಲಿನಲ್ಲಿ ಜೇಬುಗಳ್ಳರು ರಾಜು ಅವರ ಪ್ಯಾಂಟ್ ಜೇಬಿನಲ್ಲಿದ್ದ ಐನೂರು ಮುಖಬೆಲೆಯ 50 ಸಾವಿರ ರು. ಹಣವನ್ನು ಜೇಬುಗಳ್ಳರು ಲೂಟಿ ಮಾಡಿ ಪರಾರಿಯಾಗಿದ್ದಾರೆ.ಉದಯ್ ಮನೆಯಲ್ಲಿ ಸಿಎಂ ಊಟ
ಮದ್ದೂರು: ಎಸ್.ಎಂ.ಕೃಷ್ಣ ಅವರ ಅಂತ್ಯಕ್ರಿಯೆಯಲ್ಲಿ ಭಾಗವಹಿಸಲು ಆಗಮಿಸಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪಾರ್ಥಿವ ಶರೀರ ಆಗಮಿಸುವವರೆಗೆ ಕಾಯಬೇಕಾದ ಪರಿಸ್ಥಿತಿ ಎದುರಾಗಿತ್ತು.ರಾಜ್ಯ ಉಗ್ರಾಣ ನಿಗಮದ ಅಧ್ಯಕ್ಷ ಜಯಣ್ಣ ನಿಧನರಾಗಿದ್ದ ಹಿನ್ನೆಲೆಯಲ್ಲಿ ಅಂತಿಮ ದರ್ಶನ ಪಡೆಯಲು ಚಾಮರಾಜನಗರಕ್ಕೆ ತೆರಳಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮಧ್ಯಾಹ್ನ 1.45ರ ವೇಳೆಗೆ ಮದ್ದೂರಿನ ಸೋಮನಹಳ್ಳಿಗೆ ಆಗಮಿಸಿದರು. ಆಗಿನ್ನೂ ಕೃಷ್ಣರವರ ಪಾರ್ಥಿವ ಶರೀರ ಸೋಮನಹಳ್ಳಿಗೆ ಆಗಮಿಸಿರಲಿಲ್ಲ.
ಹೆಲಿಪ್ಯಾಡ್‌ನಿಂದ ಕದಲೂರಿನಲ್ಲಿರುವ ಶಾಸಕ ಕೆ.ಎಂ.ಉದಯ್ ಅವರ ಮನೆಗೆ ತೆರಳಿ ಅಲ್ಲಿ ಮುದ್ದೆ, ಉಪ್ಸಾರು ಊಟ ಮಾಡಿದರು. ಪಾರ್ಥಿವ ಶರೀರ 2.15ಕ್ಕೆ ಸೋಮನಹಳ್ಳಿಗೆ ಬಂದ ನಂತರ ಸುಮಾರು 2.45ರ ವೇಳೆಗೆ ಸಿಎಂ ಸಿದ್ದರಾಮಯ್ಯ ಅವರು ಸೋಮನಹಳ್ಳಿಗೆ ಆಗಮಿಸಿದರು. ಸಂಜೆ 4.45 ಗಂಟೆಯವರೆಗೂ ಅಂತ್ಯಸಂಸ್ಕಾರ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡಿದ್ದರು. ಅಂತಿಮವಾಗಿ ಎಸ್.ಎಂ.ಕೃಷ್ಣ ಅವರ ಪಾರ್ಥಿವ ಶರೀರದ ಮೇಲೆ ಶ್ರೀಗಂಧದ ತುಂಡುಗಳನ್ನಿಟ್ಟು ಸ್ಥಳದಿಂದ ನಿರ್ಗಮಿಸಿದರು. ನಂತರ ಹೆಲಿಕಾಪ್ಟರ್ ಮೂಲಕ ಬೆಂಗಳೂರಿನತ್ತ ಪ್ರಯಾಣ ಬೆಳೆಸಿದರು.