ಕನ್ನಡಪ್ರಭ ವಾರ್ತೆ ಚಾಮರಾಜನಗರ
ಕ್ರೀಡಾ ಚಟುವಟಿಕೆಗಳು ಒಂದು ದಿನದ ಕಾರ್ಯಕ್ರಮವಾಗದೇ ನಿರಂತರವಾಗಿರಬೇಕು ಎಂದು ಚಾಮರಾಜನಗರ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಎಂ.ಆರ್.ಗಂಗಾಧರ್ ತಿಳಿಸಿದರು.ನಗರದ ಡಾ.ಅಂಬೇಡ್ಕರ್ ಜಿಲ್ಲಾ ಕ್ರೀಡಾಂಗಣದಲ್ಲಿ ಚಾಮರಾಜನಗರದ ದೈಹಿಕ ಶಿಕ್ಷಣ ವಿಭಾಗದ ವತಿಯಿಂದ ಆಯೋಜಿಸಲಾಗಿದ್ದ ಅಂತರ ಕಾಲೇಜುಗಳ ಪುರುಷರ ಹಾಗೂ ಮಹಿಳೆಯರ ಕ್ರೀಡಾಕೂಟ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಕ್ರೀಡಾ ಚಟುವಟಿಕೆ ವಿದ್ಯಾರ್ಥಿಗಳ ಶೈಕ್ಷಣಿಕ ಜೀವನದ ಅವಿಭಾಜ್ಯ ಅಂಗವಾಗಿರಬೇಕು. ಕ್ರೀಡೆ ಮನುಷ್ಯನ ಜೀವನದಲ್ಲಿ ನಿರಂತರವಾಗಿರುವಂತೆ ನೋಡಿಕೊಳ್ಳಬೇಕು. ಕ್ರೀಡೆ ದೈಹಿಕ, ಮಾನಸಿಕ ಸದೃಢತೆಗೆ ಸಹಕಾರಿಯಾಗಲಿದೆ. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಶಿಕ್ಷಣದ ಜೊತೆಗೆ ಕ್ರೀಡೆಗೂ ಮಹತ್ವ ನೀಡಬೇಕು. ಚಾಮರಾಜನಗರ ವಿಶ್ವವಿದ್ಯಾಲಯದಲ್ಲಿ ಕ್ರೀಡೆಗೂ ಪ್ರಾಮುಖ್ಯತೆ ನೀಡಲು ದೈಹಿಕ ಶಿಕ್ಷಣ ವಿಭಾಗಕ್ಕೆ ನಿರ್ದೇಶಕರನ್ನು ನೇಮಿಸಿಕೊಳ್ಳಲಾಗಿದೆ ಎಂದು ತಿಳಿಸಿದರು.ವಿದ್ಯಾರ್ಥಿಗಳು ಕ್ರೀಡೆಯಲ್ಲದೇ ಎನ್ಎಸ್ಎಸ್ ಹಾಗೂ ಎನ್ಸಿಸಿ ಸೇರಿದಂತೆ ಇತರೆ ಪಠ್ಯೇತರ ಚಟುವಟಿಕೆಗಳಿಗೂ ಆದ್ಯತೆ ನೀಡಬೇಕು. ಪ್ರತಿಯೊಬ್ಬರು ಉತ್ತಮ ಆರೋಗ್ಯಕ್ಕೆ ಪೂರಕವಾಗುವಂತಹ ಚಟುವಟಿಕೆಗಳಲ್ಲಿ ತೊಡಗಿಕೊಳ್ಳಬೇಕು. ದಿನನಿತ್ಯದ ವ್ಯಾಯಾಮದ ಜೊತೆಗೆ ಟೆನ್ನಿಸ್, ಸೆಟ್ಲ್ಕಾಕ್ ಆಟಗಳನ್ನು ರೂಢಿಸಿಕೊಳ್ಳಬೇಕು ಎಂದು ಹೇಳಿದರು.
ಕಾರ್ಯಕ್ರಮ ಉದ್ಘಾಟಿಸಿದ ಚಾಮರಾಜನಗರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಡೀನ್ ಮತ್ತು ನಿರ್ದೇಶಕ ಡಾ.ಎಚ್.ಜಿ. ಮಂಜುನಾಥ್ ಮಾತನಾಡಿ, ಪ್ರತಿಯೊಬ್ಬರು ದೈಹಿಕ ಹಾಗೂ ಮಾನಸಿಕ ಆರೋಗ್ಯದಿಂದ ಕೂಡಿರಲು ಕ್ರೀಡೆಗಳು ಸಹಕಾರಿಯಾಗಿವೆ. ಕ್ರೀಡಾ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವುದರಿಂದ ಪ್ರತಿದಿನ ಉಲ್ಲಾಸ, ಉತ್ಸಾಹದಿಂದಿರಲು ಸಾಧ್ಯವಾಗಲಿದೆ ಎಂದರು.ಅಂತಾರಾಷ್ಟ್ರಿಯ ಖೋ ಖೋ ಕ್ರೀಡಾಪಟು ಬಿ.ಚೈತ್ರ ಕ್ರೀಡಾಪಟುಗಳನ್ನು ಉದ್ದೇಶಿಸಿ ಮಾತನಾಡಿ, ಕ್ರೀಡೆಗಳನ್ನು ಎಲ್ಲರು ಪ್ರೀತಿಸಬೇಕು. ಕ್ರೀಡೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡರೆ ಯಶಸ್ಸು ನಮ್ಮನ್ನು ಹುಡುಕಿ ಬರಲಿದೆ. ನಾನು ಸಹ ಸಾಮಾನ್ಯ ಕ್ರೀಡಾಪಟುವಾಗಿದ್ದೆ, ಕ್ರೀಡೆಯನ್ನು ಪ್ರೀತಿಸಿ, ಯಶಸ್ವಿಯಾಗಿದ್ದೇನೆ. ಗಣ್ಯರಿಂದ ಸಾಕಷ್ಟು ಅಭಿನಂದನೆಗಳನ್ನು ಪಡೆದಿದ್ದೇನೆ. ಮುಂದಿನ ದಿನಗಳಲ್ಲಿ ಕ್ರೀಡಾಕ್ಷೇತ್ರಕ್ಕೆ ಹೆಚ್ಚಿನ ಕೊಡುಗೆ ನೀಡುವ ಜವಾಬ್ದಾರಿ ನಮ್ಮ ಮೇಲಿದೆ ಎಂದರು.
ಚಾಮರಾಜನಗರ ವಿಶ್ವವಿದ್ಯಾಲಯದ ಕುಲಸಚಿವ (ಆಡಳಿತ) ಆರ್. ಲೋಕನಾಥ್, ಪರಿಕ್ಷಾಂಗ ಕುಲಸಚಿವ ಡಾ. ವಿ.ಜಿ. ವೆಂಕಟರಮಣ, ದೈಹಿಕ ಶಿಕ್ಷಣ ವಿಭಾಗದ ನಿರ್ದೇಶಕ ಡಾ. ಶಾಂತರಾಜು, ಜಿಲ್ಲಾ ಯುವ ಪ್ರಶಸ್ತಿ ಪುರಸ್ಕೃತರು ಹಾಗೂ ವಿ.ವಿ.ಕ್ರೀಡಾ ಸಲಹಾ ಸಮಿತಿ ಸದಸ್ಯರಾದ ಜಿ. ಬಂಗಾರು, ಕಾರ್ತಿಕ್, ಇತರರು ಕಾರ್ಯಕ್ರಮದಲ್ಲಿ ಇದ್ದರು. ಇದೇ ವೇಳೆ ಅಂತಾರಾಷ್ಟ್ರೀಯ ಖೋ ಖೋ ಕ್ರೀಡಾಪಟು ಹಾಗೂ ವಿಶ್ವಕಪ್ ವಿಜೇತೆ ಬಿ. ಚೈತ್ರರನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು.ವೇದಿಕೆ ಕಾರ್ಯಕ್ರಮಕ್ಕೂ ಮೊದಲು ವಿ.ವಿ.ಕುಲಪತಿ ಪ್ರೊ.ಎಂ.ಆರ್ಗಂಗಾಧರ್ ಧ್ವಜಾರೋಹಣ ನೆರವೇರಿಸಿ, ವಿವಿಧ ತಾಲೂಕುಗಳಿಂದ ಆಗಮಿಸಿದ್ದ ಕ್ರೀಡಾತಂಡಗಳ ಪರಿಚಯ ಮಾಡಿಕೊಂಡರು. ಕುಲಸಚಿವ ಆರ್. ಲೋಕನಾಥ್ ಕ್ರೀಡಾಜ್ಯೋತಿ ಬೆಳಗಿದರು. ಬಳಿಕ ಕ್ರೀಡಾಪಟುಗಳಿಂದ ಆಕರ್ಷಕ ಪಥಸಂಚಲನ ನಡೆಯಿತು.