ಕನ್ನಡ ರಾಜ್ಯೋತ್ಸವದ ಅಂಗವಾಗಿ ಆಟೋ ಕಪ್- 2024 ಕ್ರಿಕೆಟ್ ಪಂದ್ಯಾವಳಿ
ಆಟೋ ಚಾಲಕರು ದೈನಂದಿನ ವೃತ್ತಿ ಬದುಕಿನ ಒತ್ತಡ ನಿಯಂತ್ರಿಸಲು ಕ್ರೀಡಾ ಚಟುವಟಿಕೆಯಲ್ಲಿ ಪಾಲ್ಗೊಂಡರೆ ಮಾನಸಿಕ ಹಾಗೂ ದೈಹಿಕವಾಗಿ ಸದೃಢಗೊಂಡು ಬದುಕನ್ನು ಸುಲಲಿತವಾಗಿಸಲು ಸಾಧ್ಯ ಎಂದು ಬಸವನಹಳ್ಳಿ ಠಾಣೆ ಪೊಲೀಸ್ ಉಪ ನಿರೀಕ್ಷಕ ಬಾಬುದ್ದೀನ್ ಹೇಳಿದರು.
ನಗರದ ದೀಪಾ ನರ್ಸಿಂಗ್ ಹೋಂ ರಸ್ತೆ ಪಟಾಕಿ ಮೈದಾನದಲ್ಲಿ ನಗರ ಆಟೋ ಚಾಲಕರು ಮತ್ತು ಮಾಲೀಕರ ಸಂಘದಿಂದ 69ನೇ ಕನ್ನಡ ರಾಜ್ಯೋತ್ಸವ ಅಂಗವಾಗಿ ಶುಕ್ರವಾರ ಹಮ್ಮಿಕೊಂಡಿದ್ಧ ಆಟೋ ಕಪ್ -2024 ಕ್ರಿಕೇಟ್ ಪಂದ್ಯಾವಳಿಗೆ ಚಾಲನೆ ನೀಡಿ ಮಾತನಾಡಿದರು. ಹಗಲು, ರಾತ್ರಿ ಸನ್ನದೇ ಸಾರ್ವಜನಿಕವಾಗಿ ದುಡಿಯುವ ಆಟೋ ಚಾಲಕರಿಗೆ ಸಂಘ ದಿಂದ ಕ್ರಿಕೇಟ್ ಪಂದ್ಯಾವಳಿ ಆಯೋಜಿಸಿ ಪ್ರೋತ್ಸಾಹಿಸುತ್ತಿರುವುದು ಹೆಮ್ಮೆಯ ಸಂಗತಿ , ಪರಸ್ಪರ ವೈಮನಸ್ಸನ್ನು ದೂರವಿರಿಸಿ ಸ್ನೇಹದಿಂದ ಪಂದ್ಯಾವಳಿಯಲ್ಲಿ ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸಬೇಕು ಎಂದು ಹೇಳಿದರು.ದೈಹಿಕ ಚಟುವಟಿಕೆ ಮುಂದುವರಿದ ಭಾಗವೇ ಕ್ರೀಡೆ, ಪ್ರತಿಯೊಬ್ಬರೂ ಕ್ರೀಡೆ ಬಗ್ಗೆ ಆಸಕ್ತಿ ಹಾಗೂ ಮಹತ್ವ ಅರಿತು ಕೊಳ್ಳಬೇಕಾದ ಅಗತ್ಯವಿದೆ. ಇಂದಿನ ಯುವ ಜನತೆ ಕ್ರೀಡೆಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ದೈಹಿಕವಾಗಿ ಮತ್ತು ಮಾನಸಿಕವಾಗಿ ಸಶಕ್ತರಾಗಬೇಕು ಎಂದರು.
ನಗರ ಆಟೋ ಚಾಲಕರ ಮತ್ತು ಮಾಲೀಕರ ಸಂಘದ ಕಾರ್ಯದರ್ಶಿ ಜಗದೀಶ್ ಕೋಟೆ ಮಾತನಾಡಿ, ಪ್ರಸ್ತುತ ಕ್ರಿಕೇಟ್ ಪಂದ್ಯಾವಳಿಯಲ್ಲಿ ಆರು ಆಟೋ ಚಾಲಕರ ತಂಡವು ನೊಂದಾಯಿಸಿದೆ. 6 ಓವರ್‌ನ ಪಂದ್ಯಾವಳಿ ಇದಾಗಿದ್ದು ವಿಜೇತರಾದ ಪ್ರಥಮ ಹಾಗೂ ದ್ವಿತೀಯ ತಂಡಕ್ಕೆ ನಗದು ಹಾಗೂ ಪಾರಿತೋಷಕ ಬಹುಮಾನ ವಿತರಿಸಲಾಗುವುದು ಎಂದು ತಿಳಿಸಿದರು.