ಕನ್ನಡಪ್ರಭ ವಾರ್ತೆ ಬೇಲೂರುಕಳೆದ ಸಾಲಿನಲ್ಲಿ ತಾಲೂಕಿನ ವಿದ್ಯಾರ್ಥಿಗಳು ಕ್ರೀಡೆಯಲ್ಲಿ ಜಿಲ್ಲಾ, ರಾಜ್ಯ ರಾಷ್ಟ್ರ ಮಟ್ಟದವರೆಗೂ ತೆರಳಿ ಕೀರ್ತಿ ತಂದಿದ್ದರು. ಅದೇ ರೀತಿ ಈ ಬಾರಿಯೂ ನೀವುಗಳು ಸಹ ರಾಷ್ಟ್ರಮಟ್ಟಕ್ಕೆ ತೆರಳುವಂತಾಗಬೇಕು ಎಂದು ಶಿಕ್ಷಣ ಇಲಾಖೆಯ ಕ್ಷೇತ್ರ ಸಮನ್ವಯಾಧಿಕಾರಿ ಶಿವಮರಿಯಪ್ಪ ಹೇಳಿದರು.ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ, ಶಾಲಾ ಶಿಕ್ಷಣ ಇಲಾಖೆ ಹಾಗೂ ದಿವ್ಯ ವಿದ್ಯಾಸಂಸ್ಥೆ ಸಂಯುಕ್ತಾಶ್ರಯದಲ್ಲಿ ಪಟ್ಟಣದ ಜೂನಿಯರ್ ಕಾಲೇಜಿನ ಮೈದಾನದಲ್ಲಿ ಮಂಗಳವಾರ ಆಯೋಜಿಸಿದ್ದ ಬೇಲೂರು ಕಸಬಾ ಬಿ. ಹೋಬಳಿ ಮಟ್ಟದ ಹಿರಿಯ ಪ್ರಾಥಮಿಕ ಶಾಲಾ ಮಕ್ಕಳ ಕ್ರೀಡಾಕೂಟ ಉದ್ಘಾಟಿಸಿ ಮಾತನಾಡಿದ ಅವರು, ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ಕಮ್ಮಿಯಾಗಿ ದೈಹಿಕ ಶಿಕ್ಷಕರ ನೇಮಕವಾಗುತ್ತಿಲ್ಲ. ಆದರೂ ಇರುವ ಶಿಕ್ಷಕರೇ ಮಕ್ಕಳಿಗೆ ತರಬೇತಿ ನೀಡಿ ಕರೆ ತಂದಿದ್ದಾರೆ. ಮಕ್ಕಳು ತಮ್ಮಲ್ಲಿ ಅಡಗಿರುವ ಕ್ರೀಡಾ ಪ್ರತಿಭೆಯನ್ನು ಹೊರ ತರುವುದಕ್ಕೆ ಇದೊಂದು ಸೂಕ್ತ ವೇದಿಕೆ. ಇಂತಹ ವೇದಿಕೆ ಬಳಸಿಕೊಂಡು ರಾಜ್ಯದಿಂದ ರಾಷ್ಟ್ರ ಮಟ್ಟದಲ್ಲಿ ಕೀರ್ತಿ ಗಳಿಸಬೇಕು. ಕಳೆದ ಬಾರಿ ರಾಷ್ಟ್ರಮಟ್ಟದಲ್ಲಿ ಹೆಸರು ಬರಲು ಕಾರಣರಾದ ಎಲ್ಲ ದೈಹಿಕ ಶಿಕ್ಷಕ ವೃಂದದವರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದರು.ಪತ್ರಕರ್ತರ ಸಂಘದ ಅಧ್ಯಕ್ಷೆ ವೈ.ಆರ್.ಭಾರತೀಗೌಡ ಮಾತನಾಡಿ, ಮಕ್ಕಳು ಚಿಕ್ಕಂದಿನಲ್ಲೆ ಕ್ರೀಡೆಗಳತ್ತ ತೊಡಗಿಸಿಕೊಂಡು ಮುಂದೆ ಸಾಗಿದರೆ, ಕ್ರೀಡೆ ನಿಮ್ಮ ಭವಿಷ್ಯವನ್ನು ರೂಪಿಸುತ್ತದೆ. ಜತೆಗೆ ಈಗಾಗಲೇ ಬೇಲೂರು ತಾಲೂಕಿನಿಂದ ಕ್ರೀಡಾ ಕ್ಷೇತ್ರದಲ್ಲಿ ಹಲವಾರು ಜನರು ಕೀರ್ತಿ ಪತಾಕೆ ಹಾರಿಸಿದ್ದಾರೆ. ಆದ್ದರಿಂದ ವಿದ್ಯಾರ್ಥಿಗಳು ಪಠ್ಯದ ಜತೆ ಇಂತಹ ಕ್ರೀಡೆಗಳಲ್ಲೂ ಭಾಗವಹಿಸಿ ಸಾಧನೆಯ ಶಿಖರ ಏರಿ ಕೀರ್ತಿವಂತರಾಗಬೇಕು ಎಂದರು.
ದಿವ್ಯ ಶಿಕ್ಷಣ ಸಂಸ್ಥೆ ಸಂಸ್ಥಾಪಕ ಅಧ್ಯಕ್ಷ ಗೌಡೇಗೌಡ ಮಾತನಾಡಿ, ಬೇಲೂರು ತಾಲೂಕಿನ ಮಕ್ಕಳು ಕ್ರೀಡೆಯಲ್ಲಿ ರಾಷ್ಟ್ರ ಮಟ್ಟದವರೆಗೂ ಗೆಲುವು ಸಾಧಿಸಿ ಕೀರ್ತಿ ತಂದಿರುವುದು ಹೆಮ್ಮೆಯ ಸಂಗತಿಯಾಗಿದೆ. ಕ್ರೀಡಾಕೂಟದಲ್ಲಿ ತೀರ್ಪುಗಾರರ ತೀರ್ಪು ಮಕ್ಕಳಿಗೆ ಸ್ಫೂರ್ತಿಯಾಗಬೇಕು. ಮಕ್ಕಳು ಸಹ ಕ್ರೀಡಾ ಮನೋಭಾವದೊಂದಿಗೆ ಉತ್ತಮ ಸಾಧನೆಗೆ ಮುಂದಾಗಬೇಕು ಎಂದರು.ದಿವ್ಯ ವಿದ್ಯಾಸಂಸ್ಥೆ ನಿರ್ದೇಶಕ ನಾಗರಾಜ್, ದೈಹಿಕ ಶಿಕ್ಷಣ ಸಂಯೋಜಕ ಜಗದೀಶ್, ಇಸಿಒ ಶಿವಪ್ಪ, ಕುಮಾರ್, ಸಿಪಿಇಒ ಚಂದ್ರೇಗೌಡ, ಸರ್ಕಾರಿ ನೌಕರರ ಸಂಘದ ನಿರ್ದೇಶಕ ಭದ್ರೇಗೌಡ, ದೈಹಿಕ ಶಿಕ್ಷಕರಾದ ನಂದೀಶ್, ಲೋಕೇಶ್ ಇತರರಿದ್ದರು.