ಕನ್ನಡಪ್ರಭ ವಾರ್ತೆ ಕಿಕ್ಕೇರಿ
ಕ್ರೀಡೆ ಪರಸ್ಪರ ಬಾಂಧವ್ಯ ಬೆಸೆಯುವ ಕೊಂಡಿ. ಯುವಕರು ಕ್ರೀಡೆಗಳಲ್ಲಿ ಭಾಗವಹಿಸಿ ಉತ್ತಮ ಕ್ರೀಡಾಪಟುಗಳಾಗಲು ಶ್ರಮಿಸಬೇಕು ಎಂದು ಶಾಸಕ ಎಚ್.ಟಿ.ಮಂಜು ಹೇಳಿದರು.ಕೆಪಿಎಸ್ ಕ್ರೀಡಾಂಗಣದಲ್ಲಿ ಕಿಕ್ಕೇರಿ ಪ್ರೀಮಿಯರ್ ಲೀಗ್ ಸೀಸನ್, ಕಿಕ್ಕೇರಮ್ಮ ಕ್ರಿಕೆಟರ್ಸ್ ಆಯೋಜಿಸಿದ್ದ ಮುಕ್ತ ಟೆನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ಮಾತನಾಡಿ, ನೈಜ್ಯ ಪ್ರತಿಭೆಗಳಿರುವ ಹಳ್ಳಿಗಳಲ್ಲಿ ಕ್ರೀಡೆಗೆ ಕನಿಷ್ಠ ಮೂಲ ಸೌಲಭ್ಯ ಸಿಕ್ಕಲ್ಲಿ ದೇಶದ ಕೀರ್ತಿಯನ್ನು ವಿಶ್ವದಲ್ಲಿ ಪರಿಚಯಿಸಲಿದ್ದಾರೆ ಎಂದರು.
ಆರ್‌ಟಿಒ ಅಧಿಕಾರಿ ಸಂಘದ ರಾಜ್ಯಾಧ್ಯಕ್ಷ ಆರ್‌ಟಿಒ ಮಲ್ಲಿಕಾರ್ಜುನ ಮಾತನಾಡಿ, ಕ್ರೀಡೆ ಜೀವನದ ಉಲ್ಲಾಸ ಆರೋಗ್ಯಕರ ಬೆಳವಣಿಗೆ ಸುವರ್ಣ ಸೇತುವೆಯಾಗಿದೆ. ಗ್ರಾಮೀಣ ಪ್ರದೇಶದಲ್ಲಿ ಉತ್ತಮ ಕ್ರೀಡಾಪಟುಗಳಿದ್ದು, ಇವರನ್ನು ಗುರುತಿಸುವ ಕೆಲಸ ಸಂಘ ಸಂಸ್ಥೆಗಳಿಂದ ಆಗಬೇಕಿದೆ. ಹಳ್ಳಿಗಾಡಿನ ಕ್ರೀಡಾಪಟುಗಳಿಗೆ ಸಹಕಾರಬೇಕಿದೆ. ಕನಿಷ್ಠ ಹೋಬಳಿ ಮಟ್ಟದಲ್ಲಿ ಉತ್ತಮ ಕ್ರೀಡಾಂಗಣ ಇದ್ದರೆ ಬಹಳ ಅನುಕೂಲವಾಗಲಿದೆ ಎಂದು ಅಭಿಪ್ರಾಯಪಟ್ಟರು.ಜೆಡಿಎಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಿ.ಎಂ.ಕಿರಣ್ ಮಾತನಾಡಿ, ಕ್ರಿಕೆಟ್ ಜೊತೆಗೆ ದೇಶಿ ಕ್ರೀಡೆಗಳನ್ನು ಉಳಿಸಲು ಯುವಕರು ಮುಂದಾಗಬೇಕು. ಕ್ರೀಡೆ ಪರಸ್ಪರ ಸ್ನೇಹ, ವಿಶ್ವಾಸವನ್ನು ಮೂಡಿಸುವ, ಮಾನಸಿಕ, ದೈಹಿಕ ನೆಮ್ಮದಿ, ಆರೋಗ್ಯ ವೃದ್ಧಿಗೆ ಉತ್ತಮ ಸಾಧನವಾಗಿದೆ ಎಂದರು.
ಈ ವೇಳೆ ಮುಖಂಡರಾದ ಗಿರೀಶ್, ಬೂಕಿನಕೆರೆ ಹುಳ್ಳೇಗೌಡ, ಸ್ವಾಮಿ, ಕಡಹೆಮ್ಮಿಗೆರಮೇಶ್, ಮಲ್ಲಿಕಾರ್ಜುನ ಅಭಿಮಾನಿ ಸಂಘದ ಅಧ್ಯಕ್ಷ ಗಂಜಿಗೆರೆ ಮಹೇಶ್ ಮತ್ತಿತರರು ಉಪಸ್ಥಿತರಿದ್ದರು.ನಾಡಿದ್ದು ವಿದ್ಯುತ್ ವ್ಯತ್ಯಯ
ಮಂಡ್ಯ: ತಾಲೂಕಿನ ವಿ.ಸಿ.ಫಾರಂ ವಿದ್ಯುತ್ ವಿತರಣಾ ಕೇಂದ್ರದಲ್ಲಿ ತ್ರೈಮಾಸಿಕ ನಿರ್ವಹಣೆ ಹಮ್ಮಿಕೊಂಡಿರುವುದರಿಂದ ಆಗಸ್ಟ್ 29 ರಂದು ಬೆಳಗ್ಗೆ 10 ರಿಂದ ಸಂಜೆ 6 ಗಂಟೆವರೆಗೆ ವಿದ್ಯುತ್ ವ್ಯತ್ಯಯ ಉಂಟಾಗಲಿದೆ. ತಾಲೂಕಿನ ವಿ.ಸಿ.ಫಾರಂ, ಶಿವಳ್ಳಿ, ದುದ್ದ, ಬಿ.ಹಟ್ನ, ಬೇವಕಲ್ಲು, ಹುಲಿಕೆರೆ, ಚಂದಗಾಲು, ಹುಲ್ಲೇನಹಳ್ಳಿ, ಬಿಳಗುಲಿ ಹಾಗೂ ಈ ಸುತ್ತ ಮುತ್ತಲಿನ ಗ್ರಾಮಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ ಎಂದು ಸೆಸ್ಕ್, ಕಾ ಮತ್ತು ಪಾ ಮಂಡ್ಯ ವಿಭಾಗದ ಕಾರ್ಯ ನಿರ್ವಾಹಕ ಅಭಿಯಂತರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.