ಮೂಡುಬಿದಿರೆ: ಇಲ್ಲಿನ ಸ್ವರಾಜ್ಯ ಮೈದಾನದಲ್ಲಿ ನಡೆದಿರುವ 85ನೇ ಅಖಿಲ ಭಾರತ ಅಂತರ ವಿಶ್ವವಿದ್ಯಾಲಯ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್ 2025-26’ರ ಎರಡನೇ ದಿನದ ಮುಕ್ತಾಯಕ್ಕೆ ಮಂಗಳೂರು ವಿಶ್ವವಿದ್ಯಾಲಯವು ಮೊದಲ ದಿನ ಒಂದು ಚಿನ್ನ ಸಹಿತ ಒಟ್ಟು ನಾಲ್ಕು ಬೆಳ್ಳಿ ಹಾಗೂ ಒಂದು ಕಂಚು ಸೇರಿ ಆರು ಪದಕಗಳನ್ನು ಪಡೆದು ಪುರುಷರ ವಿಭಾಗದಲ್ಲಿ ಮುನ್ನಡೆ ಸಾಧಿಸಿದೆ. ಕೂಟದಲ್ಲಿ ಪಾಲ್ಗೊಂಡಿರುವ 324 ವಿವಿಗಳ ಪೈಕಿ ರಾಜ್ಯದಿಂದ 35 ವಿವಿಗಳು ಕಣದಲ್ಲಿವೆ. ಈ ಪೈಕಿ ಎರಡನೇ ದಿನ ಪುರುಷರ ಹೈಜಂಪ್ ನಲ್ಲಿ ಶಿವಮೊಗ್ಗ ಕುವೆಂಪು ವಿವಿಯ ಸುದೀಪ್ ಚಿನ್ನಗೆದ್ದಿರುವುದು ಕೂಡ ರಾಜ್ಯದ ಸಾಧನೆ.
ಮಹಿಳಾ ವಿಭಾಗದಲ್ಲಿ 10,000 ಮೀಟರ್ಸ್ ಓಟ: ನಿರ್ಮಲಾ(ಪ್ರಥಮ), 400 ಮೀ. ಹರ್ಡಲ್ಸ್: ದೀಕ್ಷಿತಾ ರಾಮ ಗೌಡ (ದ್ವಿತೀಯ) ಹಾಗೂ ಪುರುಷರ ವಿಭಾಗದಲ್ಲಿ 100 ಮೀ. ಓಟ: ವಿಭಾಸ್ಕರ್ ಕುಮಾರ್ (ದ್ವಿತೀಯ), 400 ಮೀ. ಹರ್ಡಲ್ಸ್: ಆರ್ಯನ್ ಪ್ರಜ್ವಲ್ ಕಶ್ಯಪ್ (ದ್ವಿತೀಯ), 800 ಮೀ. ಓಟ: ಪ್ರಥಮೇಶ್ ಅಮರಿಸ್ಲಾ ದಿಯೋರಾ, (ದ್ವಿತೀಯ), ಶಾಟ್‌ಪುಟ್: ಅನಿಕೇತ್ (ತೃತೀಯ) ಸ್ಥಾನ ಪಡೆದು ಪದಕಗಳನ್ನು ತಮ್ಮದಾಗಿಸಿಕೊಂಡಿದ್ದಾರೆ.
ಮೊದಲ ಕೂಟದಾಖಲೆ: ಮಿಂಚಿದ ‘ಚೆನ್ನೈ ಎಕ್ಸ್ಪ್ರೆಸ್’!ನೂತನ ಕೂಟ ದಾಖಲೆ ಬರೆದ ತಮಿಳುನಾಡಿನ ಕೊಯಮುತ್ತೂರು ಭಾರತೀಯರ್ ವಿಶ್ವವಿದ್ಯಾಲಯದ ಸ್ಯಾಮ್ ವಸಂತ ಎಸ್. (10.39 ಸೆ.) ಅವರು ‘85ನೇ ಅಖಿಲ ಭಾರತ ಅಂತರ ವಿಶ್ವವಿದ್ಯಾಲಯ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್ 2025-26’ರ ಪುರುಷರ ವಿಭಾಗದ ವೇಗದ ಓಟಗಾರರಾಗಿ ಮೂಡಿಬಂದರು. ಚೆನ್ನೈ ಮದ್ರಾಸ್ ವಿಶ್ವವಿದ್ಯಾಲಯದ ಪ್ರತಿಮಾ ಸೆಲ್ವರಾಜ್ (11.74ಸೆ.) ವೇಗದ ಓಟಗಾರ್ತಿಯಾಗಿ ಚಿನ್ನ ಗೆದ್ದು, ಮುಗುಳ್ನಕ್ಕರು. ಅವರು ಇಲ್ಲಿನ ಸ್ವರಾಜ್ ಮೈದಾನದಲ್ಲಿ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನವು ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ಸಹಭಾಗಿತ್ವದಲ್ಲಿ ಹಮ್ಮಿಕೊಂಡ ಐದು ದಿನಗಳ ‘85ನೇ ಅಖಿಲ ಭಾರತ ಅಂತರ ವಿಶ್ವವಿದ್ಯಾಲಯ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್ 2025-26’ರ ಎರಡನೇ ದಿನವಾದ ಮಂಗಳವಾರ ಆಕರ್ಷಣೆಯಾದರು. ಕೂಟದ ಪುರುಷ ವಿಭಾಗದ ವೇಗದ ಓಟದ ದಾಖಲೆಯು 2018ರಲ್ಲಿ ಮಂಗಳೂರು ವಿಶ್ವವಿದ್ಯಾಲಯವನ್ನು ಪ್ರತಿನಿಧಿಸಿದ್ದ ಆಳ್ವಾಸ್ ಕಾಲೇಜಿನ ವಿದ್ಯಾರ್ಥಿ ವಿ.ಕೆ. ಇಳಕ್ಕಿಯ ದಾಸನ್ (10.41) ಹೆಸರಿನಲ್ಲಿತ್ತು. ಈ ವೇಗವನ್ನು ಸೆಮಿಫೈನಲ್‌ನಲ್ಲಿ ಸ್ಯಾಮ್ ವಸಂತ ಎಸ್ ಮುರಿದಿದ್ದು (10.39ಸೆ.), ದಾಖಲೆಗೆ ಅರ್ಹರಾಗಿದ್ದಾರೆ. ಅವರು ಫೈನಲ್‌ನಲ್ಲಿ 10.44 ಸೆಕೆಂಡ್‌ನಲ್ಲಿ ಗುರಿ ತಲುಪಿದರು.ಬಿದಿರೆಯ ನಾಡಲ್ಲಿ ಮುಂಜಾನೆಯಿಂದಲೇ ತೇವಾಂಶ ಹಾಗೂ ಬಿಸಿಲಿನ ವಾತಾವರಣವಿದ್ದು, ಮಧ್ಯಾಹ್ನ 3 ಗಂಟೆಯ ವೇಳೆಗೆ ಸುಮಾರಿಗೆ ತುಂತುರು ಮಳೆ ಸುರಿಯಿತು. ಮಳೆಯ ಸಿಂಚನದ ಬಳಿಕ ನಡೆದ 100 ಮೀಟರ್ಸ್ ಓಟದ ಸ್ಪರ್ಧೆಯಲ್ಲಿ ಕೊಯಮುತ್ತೂರು ಕೊಂಗಿನಾಡು ಕಾಲೇಜಿನ ಬಿಎಸ್ಸಿ ಕಂಪ್ಯೂಟರ್ ಸೈನ್ಸ್ ವಿದ್ಯಾರ್ಥಿ ಸ್ಯಾಮ್ ವಸಂತ ಚಿನ್ನ ಗೆದ್ದರು. ‘ನನ್ನ ಗೆಲುವಿಗೆ ತರಬೇತುದಾರ ವೇಲು ಮುರುಗನ್ ಹಾಗೂ ತಂದೆ-ತಾಯಿಯೇ ಕಾರಣ’ ಎಂಬ ಬರಹವನ್ನು ಅವರು ಪ್ರದರ್ಶಿಸಿ, ನಿಟ್ಟುಸಿರು ಬಿಟ್ಟರು. ಮಾಸ್ಟರ್ ಸ್ಪ್ರಿಂಟರ್ ಚಾಂಪಿಯನ್ ಕಳೈ ಚೆಲ್ವಿ ಹಾಗೂ ನೂಲು ಗಿರಣಿ ಕಾರ್ಖಾನೆಯ ಕಾರ್ಮಿಕ ವಿ. ಸುಬ್ರಹ್ಮಣ್ಯನ್ ಪುತ್ರ ಸ್ಯಾಮ್ ವಸಂತ್, ‘ವಿಶ್ವವಿದ್ಯಾಲಯದಲ್ಲಿ ನನ್ನ ವೇಗವನ್ನು ಗಮನಿಸಿದ ತರಬೇತುದಾರ ಮುರುಗನ್ ಅವರು, ನೀನು ದಾಖಲೆ ಮಾಡುತ್ತಿಯಾ’ ಎಂದಿದ್ದರು. ಅದು ನನಗೆ ಆತ್ಮಬಲ ತುಂಬಿತ್ತು. ತಂದೆಯ ಬೆಂಬಲ ಹಾಗೂ ತಾಯಿಯೇ ನನ್ನ ಶಕ್ತಿ’ ಎಂದು ಭಾವುಕರಾದರು.
ಎರಡನೇ ದಿನದ ಫಲಿತಾಂಶ
ಇಂದಿನ ಯುವಜನತೆಯನ್ನು ದುಶ್ಚಟಗಳಿಂದ ರಕ್ಷಿಸುವುದು ನಮ್ಮ ಆಯ್ಕೆ ಅಲ್ಲ. ಅನಿವಾರ್ಯತೆ ಎಂದು ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ ಕುಲಪತಿ ಡಾ. ಡಾ.ಭಗವಾನ್ ಹೇಳಿದರು.85ನೇ ಅಖಿಲ ಭಾರತ ಅಂತರ ವಿಶ್ವವಿದ್ಯಾಲಯ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್ ಅಂಗವಾಗಿ ವಿಶ್ವವಿದ್ಯಾಲಯವು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಸಹಭಾಗಿತ್ವದಲ್ಲಿ ಮಂಗಳವಾರ ನಗರದಲ್ಲಿ ಹಮ್ಮಿಕೊಂಡ ‘ನಶಾಮುಕ್ತ ಭಾರತ ಅಭಿಯಾನ ಮತ್ತು ಅಂಗಾಂಗ ದಾನ’ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.‘ಯುವಜನತೆಯನ್ನು ವ್ಯಸನಮುಕ್ತಗೊಳಿಸುವ ನಿಟ್ಟಿನಲ್ಲಿ ದಿಶಾ ಬೋಧ ಪ್ರತಿಷ್ಠಾನದ ಸಹಭಾಗಿತ್ವದಲ್ಲಿ ಯೋಗ ಮತ್ತು ಧ್ಯಾನ ಕಾರ್ಯಕ್ರಮ ಆರಂಭಿಸಲಾಗುವುದು’ ಎಂದರು.‘ಮಾದಕ ದ್ರವ್ಯ ವ್ಯಸನವು ಖಿನ್ನತೆಗೆ ತಳ್ಳುತ್ತದೆ. ಆರೋಗ್ಯದ ಜೊತೆ ಬದುಕನ್ನು ಕೆಡವುತ್ತದೆ’ ಎಂದ ಅವರು, ‘ಸಶಕ್ತೀಕರಣಕ್ಕಾಗಿ ಸ್ವಾಮಿ ವಿವೇಕಾನಂದ ಅವರ ತತ್ವ ಸಿದ್ಧಾಂತಗಳನ್ನು ಪಾಲಿಸಿ’ ಎಂದರು.ರಾಣಿ ಅಬ್ಬಕ್ಕ ಪ್ರತಿಮೆಗೆ ಮಾಲಾರ್ಪಣೆಯೊಂದಿಗೆ ಕಾರ್ಯಕ್ರಮ ಆರಂಭಿಸಲಾಯಿತು. ಬಳಿಕ ರಾಷ್ಟ್ರಗೀತೆ ಹಾಡಲಾಯಿತು. ಅನಂತರ ಚೌಟರ ಅರಮನೆಯ ರಾಣಿ ಅಬ್ಬಕ್ಕ ಪ್ರತಿಮೆಯ ವೃತ್ತದಿಂದ ಸ್ವರಾಜ್ ಮೈದಾನದ ವರೆಗೆ ವಾಕಾಥಾನ್ ಸಾಗಿ ಬಂತು. ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಡಿಯಲ್ಲಿ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ ಹಾಗೂ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ 3 ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು ವಾಕಾಥಾನ್‌ನಲ್ಲಿ ಪಾಲ್ಗೊಂಡರು. ಕುಲಪತಿ ಡಾ.ಭಗವಾನ್ ಪ್ರತಿಜ್ಞಾ ವಿಧಿ ಬೋಧಿಸಿದರು.ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯ ಡಾ. ಇಫ್ತೀಕರ್, ಕರ್ನಾಟಕ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಹೆಚ್ಚುವರಿ ಮುಖ್ಯಕಾರ್ಯದರ್ಶಿ ಮೊಹಮ್ಮದ್ ಮೊಹಿಸೀನ್, ಶ್ರೀಕ್ಷೇತ್ರ ಧರ್ಮಸ್ಥಳ ಶಿಕ್ಷಣ ಸಮಾಜದ ಉಪಾಧ್ಯಕ್ಷ ಡಿ. ಸುರೇಂದ್ರ ಕುಮಾರ್, ವಿ.ವಿ. ಕುಲಸಚಿವ ಅರ್ಜುನ್ ಒಡೆಯರ್, ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವ್ಯವಸ್ಥಾಪಕ ಟ್ರಸ್ಟಿಗಳಾದ ವಿವೇಕ್ ಆಳ್ವ ಮತ್ತು ಡಾ.ವಿನಯ್ ಆಳ್ವ, ದಿಶಾಬೋಧ ಪ್ರತಿಷ್ಠಾನದ ಶಿವಾಂಗಿ ರೆಡ್ಡಿ ಮತ್ತು ಜೀತು ಥಾಮಸ್ ಮತ್ತಿತರರು ಇದ್ದರು.‘ಮಾದಕ ವ್ಯಸನಕ್ಕೆ ಇಲ್ಲ ಹೇಳಿ, ಬದುಕಿಗೆ ಹೌದು ಎನ್ನಿ’ ಎಂಬ ಘೋಷವಾಕ್ಯದ ಜೊತೆ ಕಾರ್ಯಕ್ರಮ ಸಂಪನ್ನಗೊಂಡಿತು.
(ಮಹಿಳಾ ವಿಭಾಗದಲ್ಲಿ 10,000 ಮೀಟರ್ಸ್ ಓಟ: ನಿರ್ಮಲಾ(ಪ್ರಥಮ), 400 ಮೀ. ಹರ್ಡಲ್ಸ್: ದೀಕ್ಷಿತಾ ರಾಮ ಗೌಡ (ದ್ವಿತೀಯ) ಹಾಗೂ ಪುರುಷರ ವಿಭಾಗದಲ್ಲಿ 100 ಮೀ. ಓಟ: ವಿಭಾಸ್ಕರ್ ಕುಮಾರ್ (ದ್ವಿತೀಯ), 400 ಮೀ. ಹರ್ಡಲ್ಸ್: ಆರ್ಯನ್ ಪ್ರಜ್ವಲ್ ಕಶ್ಯಪ್ (ದ್ವಿತೀಯ), 800 ಮೀ. ಓಟ: ಪ್ರಥಮೇಶ್ ಅಮರಿಸ್ಲಾ ದಿಯೋರಾ, (ದ್ವಿತೀಯ), ಶಾಟ್‌ಪುಟ್: ಅನಿಕೇತ್ (ತೃತೀಯ) ಸ್ಥಾನ ಪಡೆದು ಪದಕಗಳನ್ನು ತಮ್ಮದಾಗಿಸಿಕೊಂಡಿದ್ದಾರೆ.