ಕನ್ನಡಪ್ರಭ ವಾರ್ತೆ ಮೂಡುಬಿದಿರೆ
ಹೋಬಳಿ ಹಂತದಲ್ಲಿರುವ ವಿಶೇಷ ಅಗತ್ಯವಳ್ಳ ವಿದ್ಯಾರ್ಥಿಗಳಿಗೆ ಕ್ರೀಡೆ ಮತ್ತು ಅರಿವು ಕಾರ್ಯಕ್ರಮ ಪುರಸಭಾ ಉಪಾಧ್ಯಕ್ಷ ನಾಗರಾಜ್ ಪೂಜಾರಿ ಅಧ್ಯಕ್ಷತೆಯಲ್ಲಿ ಪ್ರೇರಣಾ ಶಾಲೆಯಲ್ಲಿ ನಡೆಯಿತು.ಶಾಲಾ ಸಂಚಾಲಕ ಶಾಂತರಾಮ ಕುಡ್ವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ವಿಶೇಷ ಅಗತ್ಯವುಳ್ಳ ವಿದ್ಯಾರ್ಥಿಗಳ ಬಗ್ಗೆ ಹೆಮ್ಮೆಪಟ್ಟು ಅವರ ಸಾಧನೆಗೆ ಪ್ರೋತ್ಸಾಹ ನೀಡಿ ಸಹಕರಿಸಬೇಕು ಎಂದು ಶುಭಹಾರೈಸಿದರು.ಅತಿಥಿಯಾಗಿ ಭಾಗವಹಿಸಿದ ತಾಲೂಕು ದೈಹಿಕ ಪರಿವೀಕ್ಷಣಾ ಅಧಿಕಾರಿ ನವೀನ್ ಪುತ್ರನ್ ಮಾತನಾಡಿ, ವಿಶೇಷ ಅಗತ್ಯವುಳ್ಳ ವಿದ್ಯಾರ್ಥಿಗಳಿಗೆ ಪಠ್ಯ ಹಾಗೂ ಪಠ್ಯೇತರ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳಲು ಮಾಹಿತಿ ನೀಡಿ ಕ್ರೀಡೆಯ ರಾಜ್ಯ, ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ನಡೆಯುವ ಸ್ಪರ್ಧೆಗಳು ಹಾಗೂ ಪ್ಯಾರಲಿಂಪಿಕ್ಸ್ ಬಗ್ಗೆ ಮಾಹಿತಿ ನೀಡಿ ಪ್ರೋತ್ಸಾಹಿಸಿದರು.ಪೋಷಕರು, ಶಿಕ್ಷಕರು ಹಾಗೂ ಸಮಾಜದ ಎಲ್ಲ ಸಾಮಾನ್ಯ ಜನರು ವಿಶೇಷ ಅಗತ್ಯವುಳ್ಳ ಮಕ್ಕಳಿಗೆ ಸ್ವಲ್ಪ ಸಹಾಯ ಮಾಡಿದರೂ ಅವರಿಗೆ ತುಂಬಾ ಅನುಕೂಲವಾಗುತ್ತದೆ. ತಾವೆಲ್ಲರೂ ಈ ನಿಟ್ಟಿನಲ್ಲಿ ಸಾಮಾಜಿಕ ಕಳಕಳಿಯಿಂದ ಸಹಕರಿಸಬೇಕೆಂದು ತಿಳಿಸಿದರು.ಕ್ಷೇತ್ರ ಸಮನ್ವಯಾಧಿಕಾರಿ ಸೌಮ್ಯಾ ಎನ್., ಕಾರ್ಯಕ್ರಮದ ಆಶಯವನ್ನು ಪ್ರಾಸ್ತಾವಿಕ ಭಾಷಣದಲ್ಲಿ ನುಡಿದರು.ಈ ಕಾರ್ಯಕ್ರಮದಲ್ಲಿ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವಿದ್ಯಾರ್ಥಿ ಕ್ಷೇಮಾಭಿವೃದ್ಧಿ ಅಧಿಕಾರಿ ಸಬಿತಾ ಮೋನಿಸ್ ಮಾತಾನಾಡಿ, ತಮ್ಮ ಜೀವನದ ಸಾಧನೆಯ ಮೆಟ್ಟಿಲುಗಳನ್ನು ಎಳೆ ಎಳೆಯಾಗಿ ವಿದ್ಯಾರ್ಥಿಗಳಿಗೆ, ಪೋಷಕರಿಗೆ ಹಾಗೂ ನೆರೆದಿರುವರಿಗೆ ತಿಳಿಸಿದರು.
ಎರಡೂ ಕೈಯಿಲ್ಲದಿದ್ದರೂ ತನ್ನ ದೈನಂದಿನ ಬದುಕಿನಲ್ಲಿ ಇತರರನ್ನು ಹೆಚ್ಚು ಅವಲಂಭಿಸದೆ ಬದುಕುವ ಕಲೆಯನ್ನು ತಿಳಿಸಿ ಮಾದರಿ ಬರವಣಿಗೆಯನ್ನು ಹಾಗೂ ಆಹಾರ ಸೇವನೆಯನ್ನು ಕಾಲಿನಿಂದ ಮಾಡಿ ತೋರಿಸಿದರು. ಅವರ ಸಾಧನೆಯ ಶಿಖರವು ಸಾಮಾನ್ಯ ವ್ಯಕ್ತಿಗಳಿಗೆ ತಮ್ಮನ್ನು ತಾವು ಆತ್ಮಾವಲೋಕನ ಮಾಡಲು ಅನುವು ಮಾಡಿತು. ಶಿಕ್ಷಣ ಸಂಯೋಜಕ ರಾಜೇಶ್ ಭಟ್, ಸಬಿತಾ ಮೋನಿಸ್ ಅವರ ಪರಿಚಯವನ್ನು ಪ್ರಸ್ತುತ ಪಡಿಸಿದ ಬಳಿಕ ಸನ್ಮಾನಿಸಲಾಯಿತು.ಕಾರ್ಯಕ್ರಮದಲ್ಲಿ ಮೂಡುಬಿದಿರೆ ತಾಲೂಕು ವೈದ್ಯಾಧಿಕಾರಿ ಡಾ.ಅಕ್ಷತಾ ನಾಯಕ್, ಸಿ.ಆರ್.ಪಿ. ರೋಬರ್ಟ್ ಡಿಸೋಜ, ದಿನಕರ ಹಾಗೂ ಶಾಲಾ ಮುಖ್ಯ ಶಿಕ್ಷಕರಾದ ವತ್ಸಲಾ ವೇದಿಕೆಯಲ್ಲಿ ಉಪಸ್ಥಿತರಿದ್ದರು.ಸಹ ಶಿಕ್ಷಕಿ ಸುಜಾತ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಬಿ.ಐ.ಇ.ಆರ್.ಟಿ. ಸುಶೀಲಾ ಸ್ವಾಗತಿಸಿದರು. ಫ್ಲೇವಿ ಡಿಸೋಜ ವಂದಿಸಿದರು.