ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ಕ್ರೀಡೆ ಸಹಕಾರಿ

KannadaprabhaNewsNetwork |  
Published : Aug 23, 2026, 02:15 AM IST
22ಕೆಕೆಆರ್5:ಕೊಪ್ಪಳ ತಾಲೂಕಿನ  ಬೋಚನಹಳ್ಳಿ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಜರುಗಿದ ಅಳವಂಡಿ ಕ್ಲಸ್ಟರ್ ಮಟ್ಟದ ಕ್ರೀಡಾಕೂಟ ಉದ್ಘಾಟನೆ ಜರುಗಿತು.  | Kannada Prabha

ಸಾರಾಂಶ

ಶಿಕ್ಷಣದ ಜತೆಗೆ ಕ್ರೀಡೆಗೂ ಸಮಾನ ಆದ್ಯತೆ ನೀಡಬೇಕು. ಮಕ್ಕಳು ಕೇವಲ ಪಠ್ಯಪುಸ್ತಕದ ಜ್ಞಾನಕ್ಕೆ ಸೀಮಿತವಾಗದೆ ತಮ್ಮಲ್ಲಿರುವ ವಿವಿಧ ಪ್ರತಿಭೆ ಗುರುತಿಸಿಕೊಂಡು ಅವುಗಳನ್ನು ಬೆಳೆಸಿಕೊಳ್ಳಬೇಕು.

ಕೊಪ್ಪಳ: ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಯಲ್ಲಿ ಕ್ರೀಡೆ ಸಹಕಾರಿ ಆಗಿದೆ ಎಂದು ಬಿಇಒ ಶೇಖರಪ್ಪ ಹೊರಪೇಟೆ ಹೇಳಿದರು.

ತಾಲೂಕಿನ ಬೋಚನಹಳ್ಳಿ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಜರುಗಿದ ಅಳವಂಡಿ ಕ್ಲಸ್ಟರ್ ಮಟ್ಟದ ಕ್ರೀಡಾಕೂಟ ಉದ್ಘಾಟಿಸಿ ಮಾತನಾಡಿದ ಅವರು, ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಯಲ್ಲಿ ಕ್ರೀಡೆಗಳು ಅತ್ಯಂತ ಪ್ರಮುಖ ಪಾತ್ರ ವಹಿಸುತ್ತವೆ. ಕ್ರೀಡೆಗಳು ಮಕ್ಕಳಲ್ಲಿ ದೈಹಿಕ ಸಾಮರ್ಥ್ಯದ ಜತೆಗೆ ಮಾನಸಿಕ ದೃಢತೆ, ಶಿಸ್ತು, ಸಮಯಪಾಲನೆ, ನಾಯಕತ್ವ ಗುಣ, ತಂಡದ ಮನೋಭಾವ ಹಾಗೂ ಸೋಲು-ಗೆಲುವನ್ನು ಸಮಾನವಾಗಿ ಸ್ವೀಕರಿಸುವ ಮನೋಭಾವ ಬೆಳೆಸುತ್ತವೆ ಎಂದರು.

ಶಿಕ್ಷಣದ ಜತೆಗೆ ಕ್ರೀಡೆಗೂ ಸಮಾನ ಆದ್ಯತೆ ನೀಡಬೇಕು. ಮಕ್ಕಳು ಕೇವಲ ಪಠ್ಯಪುಸ್ತಕದ ಜ್ಞಾನಕ್ಕೆ ಸೀಮಿತವಾಗದೆ ತಮ್ಮಲ್ಲಿರುವ ವಿವಿಧ ಪ್ರತಿಭೆ ಗುರುತಿಸಿಕೊಂಡು ಅವುಗಳನ್ನು ಬೆಳೆಸಿಕೊಳ್ಳಬೇಕು. ಕ್ರೀಡಾಕೂಟಗಳು ವಿದ್ಯಾರ್ಥಿಗಳಲ್ಲಿರುವ ಪ್ರತಿಭೆ ಹೊರತರುವ ಉತ್ತಮ ವೇದಿಕೆಯಾಗಿದ್ದು, ಇತಂಹ ಅವಕಾಶ ಮಕ್ಕಳು ಸದುಪಯೋಗಪಡಿಸಿಕೊಳ್ಳಬೇಕು ಎಂದರು.

ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಎಸ್.ಬಿ.ಕುರಿ ಮಾತನಾಡಿ, ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಯ ಜತೆಗೆ ಅವರ ಆರೋಗ್ಯ ಮತ್ತು ದೈಹಿಕ ಸದೃಢತೆಯೂ ಅತ್ಯಗತ್ಯ. ಕ್ರೀಡಾ ಚಟುವಟಿಕೆಗಳಲ್ಲಿ ಭಾಗವಹಿಸುವುದರಿಂದ ಮಕ್ಕಳಲ್ಲಿ ಚೈತನ್ಯ,ಆತ್ಮವಿಶ್ವಾಸ ಹಾಗೂ ಸಕಾರಾತ್ಮಕ ಚಿಂತನೆ ಬೆಳೆಯುತ್ತದೆ. ಕ್ರೀಡೆ ಜೀವನದ ಅವಿಭಾಜ್ಯ ಭಾಗವನ್ನಾಗಿ ಮಾಡಿಕೊಂಡು ಉತ್ತಮ ಸಾಧನೆ ಮಾಡಬೇಕು ಎಂದರು.

ಪ್ರಭಾರ ಕ್ಷೇತ್ರ ಸಮನ್ವಯಾಧಿಕಾರಿ ಮಹಿಬೂಬ್ ಹುಸೇನ್ ಮಾತನಾಡಿ, ವಿದ್ಯಾರ್ಥಿಗಳಲ್ಲಿ ಕ್ರೀಡಾ ಮನೋಭಾವ ಬೆಳೆಸುವ ಅಗತ್ಯ ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಉತ್ತಮ ಅವಕಾಶ ಕಲ್ಪಿಸುವ ನಿಟ್ಟಿನಲ್ಲಿ ಶೈಕ್ಷಣೀಕ ಇಲಾಖೆ ಕ್ರೀಡಾಕೂಟ ಆಯೋಜೆನ ಮಾಡಿದೆ ಎಂದರು.

ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹನುಮಂತಪ್ಪ ಕುರಿ ಮಾತನಾಡಿ, ಮಕ್ಕಳು ಸತತ ಓದು, ಪರಿಶ್ರಮ ಹಾಗೂ ಶ್ರದ್ಧೆಯಿಂದ ಅಧ್ಯಯನ ಮಾಡಿದಾಗ ಉತ್ತಮ ಸಾಧನೆ ಮಾಡಲು ಸಾಧ್ಯ. ಅದೇ ರೀತಿ ಮಕ್ಕಳು ಮಾನಸಿಕವಾಗಿ ಹಾಗೂ ದೈಹಿಕವಾಗಿ ಆರೋಗ್ಯವಾಗಿರಲು ಕ್ರೀಡೆ ಅವಶ್ಯಕತೆಯಿದೆ. ಕ್ರೀಡೆ ಮತ್ತು ಶಿಕ್ಷಣ ಎರಡನ್ನೂ ಸಮನ್ವಯಗೊಳಿಸಿಕೊಂಡು ಮುನ್ನಡೆಯುವ ವಿದ್ಯಾರ್ಥಿಗಳು ಜೀವನದಲ್ಲಿ ಉತ್ತಮ ಸಾಧನೆ ಮಾಡಲು ಸಾಧ್ಯವಾಗುತ್ತದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಭೀಮೇಶ ಹವಳಣ್ಣವರ್, ದೇವಪ್ಪ ಬಚ್ಚಕ್ಕನವರ್, ಯಲ್ಲಪ್ಪ ಬಂಡಿ, ರಮೇಶಬುದ್ಧನ ಗೌಡರ್, ಗುರುಸ್ವಾಮಿ ಆರ್., ಮಲ್ಲಪ್ಪ ಗುಡದಣ್ಣವರ್, ವೆಂಕರಡ್ಡಿ ಇಮ್ಮಡಿ, ಮಂಜುನಾಥ ಕೆಸಲಾಪುರ, ವಿರೂಪಾಕ್ಷಪ್ಪ ಬಾಗೋಡಿ, ರುದ್ರಪ್ಪ ಮಂಡಿ, ಶರಣಬಸಪ್ಪ, ಹನುಮೇಶ ಅವೋಜಿ ಇತರರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮುಂಡರಗಿ: ಬಿಸಿಯೂಟದ ಉಪ್ಪಿಟ್ಟಿನಲ್ಲಿ ಹಲ್ಲಿ ಪತ್ತೆ, 160 ವಿದ್ಯಾರ್ಥಿಗಳು ಅಸ್ವಸ್ಥ
ದೇಗುಲಗಳು ಶಾಂತಿ, ನೆಮ್ಮದಿ ನೀಡುವ ಪವಿತ್ರ ಕೇಂದ್ರಗಳು: ಫಕೀರ ಸಿದ್ಧರಾಮ ಸ್ವಾಮೀಜಿ