ಮುಂಡರಗಿ ತಾಲೂಕಿನ ಬೀಡನಾಳ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿದ್ಯಾರ್ಥಿಗಳು ಉಪ್ಪಿಟ್ಟು ಸೇವಿಸುವಾಗ ಅದರಲ್ಲಿ ಹಲ್ಲಿ ಕಾಣಿಸಿಕೊಂಡಿದೆ. ಕೆಲವು ವಿದ್ಯಾರ್ಥಿಗಳು ವಾಂತಿ ಮಾಡಿಕೊಂಡಿದ್ದು, ಅಸ್ವಸ್ಥರಾದ ವಿದ್ಯಾರ್ಥಿಗಳಿಗೆ ಮುಂಡರಗಿ‌ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿದೆ.

ಮುಂಡರಗಿ: ತಾಲೂಕಿನ ಬೀಡನಾಳ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿದ್ಯಾರ್ಥಿಗಳು ಉಪ್ಪಿಟ್ಟು ಸೇವಿಸುವಾಗ ಅದರಲ್ಲಿ ಹಲ್ಲಿ ಕಾಣಿಸಿಕೊಂಡಿದೆ. ಕೆಲವು ವಿದ್ಯಾರ್ಥಿಗಳು ವಾಂತಿ ಮಾಡಿಕೊಂಡಿದ್ದು, ಅಸ್ವಸ್ಥರಾದ ವಿದ್ಯಾರ್ಥಿಗಳಿಗೆ ಮುಂಡರಗಿ‌ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿದೆ.

ಬೀಡನಾಳ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಎಲ್‌ಕೆಜಿಯಿಂದ 9ನೇ ತರಗತಿ ವರೆಗೆ ನಡೆಯುತ್ತಿದ್ದು, ವಿದ್ಯಾರ್ಥಿಗಳಿಗೆ ಶನಿವಾರ ಬೆಳಗ್ಗೆ ಅಕ್ಷರ ದಾಸೋಹದ ಯೋಜನೆಯಡಿ ಉಪಾಹಾರಕ್ಕೆ ಉಪ್ಪಿಟ್ಟು ನೀಡಲಾಗಿತ್ತು. 9ನೇ ತರಗತಿ ವಿದ್ಯಾರ್ಥಿನಿಯೊಬ್ಬಳು ಉಪ್ಪಿಟ್ಟು ಸೇವಿಸುತ್ತಿದ್ದಾಗ ತಟ್ಟೆಯಲ್ಲಿ ಸತ್ತ ಹಲ್ಲಿ ಇತ್ತು. ಅಷ್ಟರೊಳಗೆ ಶಾಲೆ ಅರ್ಧದಷ್ಟು ವಿದ್ಯಾರ್ಥಿಗಳು ಉಪ್ಪಿಟ್ಟು ಸೇವನೆ ಮಾಡುತ್ತಿದ್ದರು. ಉಳಿದ ವಿದ್ಯಾರ್ಥಿಗಳಿಗೆ ತಕ್ಷಣವೇ ಉಪ್ಪಿಟ್ಟು ನೀಡುವುದನ್ನು ನಿಲ್ಲಿಸಲಾಯಿತು.

ತಟ್ಟೆಯಲ್ಲಿ ಹಲ್ಲಿ ಕಾಣಿಸಿಕೊಂಡಿದ್ದ ವಿದ್ಯಾರ್ಥಿನಿಗೆ ಸ್ವಲ್ಪ ಸಮಯದ ನಂತರ ವಾಂತಿ, ತಲೆಸುತ್ತು, ಹೊಟ್ಟೆನೋವು ಕಾಣಿಸಿಕೊಂಡಿತು. ಶಿಕ್ಷಕರು ತಕ್ಷಣ ವಿದ್ಯಾರ್ಥಿನಿಯನ್ನು ತಾಲೂಕು ಆಸ್ಪತ್ರೆಗೆ ಕರೆದುಕೊಂಡು ಬಂದು ಚಿಕಿತ್ಸೆ ಕೊಡಿಸಿದರು. ನಂತರದಲ್ಲಿ ಉಪ್ಪಿಟ್ಟು ಸೇವಿಸಿದ ಹಲವು ವಿದ್ಯಾರ್ಥಿಗಳಿಗೆ ಹೊಟ್ಟೆನೋವು, ವಾಂತಿ ಆರಂಭವಾಯಿತು. ಶಾಲೆಯ ಎಲ್ಲ ವಿದ್ಯಾರ್ಥಿಗಳನ್ನು ಗ್ರಾಮಸ್ಥರು ಬೈಕ್, ಇತರ ಲಭ್ಯವಿದ್ದ ವಾಹನಗಳ ಮೂಲಕ ತಾಲೂಕು ಆಸ್ಪತ್ರೆಗೆ ಕರೆತಂದು ಚಿಕಿತ್ಸೆಗೆ ದಾಖಲಿಸಿದರು.

ವಿಷಯ ತಿಳಿಯುತ್ತಿದ್ದಂತೆ ಬಿಇಒ ಗಂಗಾಧರ ಅಣ್ಣೀಗೇರಿ, ಮುಖಂಡರಾದ ಲಿಂಗರಾಜಗೌಡ ಪಾಟೀಲ, ವೈ.ಎನ್. ಗೌಡರ್, ಆನಂದಗೌಡ ಪಾಟೀಲ, ಬೀಡನಾಳ ಗ್ರಾಮದ ಹಿರಿಯರು, ಸಿಪಿಐ ಅಯ್ಯನಗೌಡ ಪಾಟೀಲ ಆಗಮಿಸಿ ಚಿಕಿತ್ಸೆ ಕೊಡಿಸಲು ಎಲ್ಲ ರೀತಿಯ ವ್ಯವಸ್ಥೆ ಮಾಡಿದರು. ತಾಲೂಕು ಸರ್ಕಾರಿ ಆಸ್ಪತ್ರೆಯ ಎಲ್ಲ ವೈದ್ಯಾಧಿಕಾರಿಗಳು ಹಾಗೂ ತಾಲೂಕಿನ ವಿವಿಧ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕಾರ್ಯನಿರ್ವಹಿಸುತ್ತಿರುವ ವೈದ್ಯಾಧಿಕಾರಿಗಳು ಬಂದು ಮಕ್ಕಳ ಆರೋಗ್ಯ ತಪಾಸಣೆ ನಡೆಸಿ, ಚಿಕಿತ್ಸೆ ನೀಡಿದರು. ಶಾಲೆಯಲ್ಲಿ ಒಟ್ಟೂ 245 ವಿದ್ಯಾರ್ಥಿಗಳಿದ್ದು, 160 ವಿದ್ಯಾರ್ಥಿಗಳಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಯಿತು.

ಮಧ್ಯಾಹ್ನ ಶಿರಹಟ್ಟಿ ಶಾಸಕ ಡಾ. ಚಂದ್ರು ಲಮಾಣಿ ಹಾಗೂ ಅನೇಕ ಮುಖಂಡರು ಆಸ್ಪತ್ರೆಗೆ ಭೇಟಿ ನೀಡಿ ಮಕ್ಕಳ ಆರೋಗ್ಯ ವಿಚಾರಿಸಿದರು.

ತಡವಾಗಿ ಆಗಮಿಸಿದ ತಾಲೂಕು ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಎಸ್.ವೈ.ವಿಭೂತಿ ವಿರುದ್ಧ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು. ನಿಷ್ಕಾಳಜಿಯಿಂದ ಅಡುಗೆ ತಯಾರಿಸಿ ಮಕ್ಕಳಿಗೆ ನೀಡುವುದು ಎಷ್ಟರ ಮಟ್ಟಿಗೆ ಸರಿ? ನಮ್ಮ ಮಕ್ಕಳಿಗೆ ಏನಾದರೂ ತೊಂದರೆಯಾಗಿದ್ದರೆ ನಾವು ಯಾರನ್ನು ಕೇಳೋದು ಎಂದು ಪ್ರಶ್ನಿಸಿದರು.

ತಾಲೂಕು ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಎಸ್.ವೈ. ವಿಭೂತಿ ''''ಕನ್ನಡಪ್ರಭ''''ದೊಂದಿಗೆ ಮಾತನಾಡಿ, ತಕ್ಷಣವೇ ನಾಲ್ವರು ಬಿಸಿಯೂಟ ತಯಾರಿಕರನ್ನು ಕರ್ತವ್ಯದಿಂದ ತೆಗೆದುಹಾಕುವಂತೆ ತಾಪಂ ಕಾರ್ಯನಿರ್ವಾಹಕ ಅಧಿಕಾರಿಯವರಿಗೆ ಶಿಫಾರಸು ಮಾಡಲಾಗಿದೆ. ಗದಗ ಆಹಾರ ಸುರಕ್ಷತೆ ಮತ್ತು ಗುಣಮಟ್ಟದ ಅಧಿಕಾರಿಗಳು ಬೀಡನಾಳ ಶಾಲೆಗೆ ಭೇಟಿ ನೀಡಿ ಆಹಾರ ಪರಿಶೀಲನೆ ನಡೆಸಿದ್ದಾರೆ. ಈಗಾಗಲೇ ಪ್ರಾಥಮಿಕ ವರದಿಯನ್ನು ಇಲಾಖೆಗೆ ಸಲ್ಲಿಸಲಾಗಿದೆ. ಧಾರವಾಡದಲ್ಲಿ ಸಭೆಗೆ ತೆರಳಿದ್ದರಿಂದ ಆಸ್ಪತ್ರೆಗೆ ಬರುವುದು ತಡವಾಯಿತು ಎಂದು ತಿಳಿಸಿದರು.

ಕಂಗಾಲಾದ ಪಾಲಕರು: ಶಾಲೆಯಲ್ಲಿ ಹಲ್ಲಿ ಬಿದ್ದಿದ್ದ ವಿದ್ಯಾರ್ಥಿಗಳು ಅಸ್ಪಸ್ಥರಾದ ವಿಷಯ ತಿಳಿದ ಪಾಲಕರು, ತಮ್ಮ ನಿತ್ಯದ ಕೆಲಸ ಕಾರ್ಯಗಳನ್ನು ಬಿಟ್ಟು ಓಡೋಡಿ ಬಂದರು. ಕೆಲವರು ಆಸ್ಪತ್ರೆಗೆ ಗಾಬರಿಯಿಂದ ಅಳುತ್ತ ದೌಡಾಯಿಸಿದರು. ತಮ್ಮ ಮಕ್ಕಳ ಮುಖ ನೋಡಿ, ಆರೋಗ್ಯ ವಿಚಾರಿಸಿ, ಅಪಾಯ ಇಲ್ಲ ಎಂದು ತಿಳಿದಾಗ ನಿಟ್ಟುಸಿರು ಬಿಟ್ಟರು.