ಪೊಲೀಸರ ದೈಹಿಕ, ಮಾನಸಿಕ ಸದೃಢತೆಗೆ ಕ್ರೀಡೆ ಸಹಕಾರಿ: ವಿಟಿಯು ಕುಲಸಚಿವ ಡಾ.ರಂಗಸ್ವಾಮಿ

KannadaprabhaNewsNetwork |  
Published : Dec 01, 2024, 01:32 AM IST
ಮಚ್ಛೆ ಕೆಎಸ್‌ಆರ್‌ಪಿ 2ನೇ ಪಡೆ ವಾರ್ಷಿಕ ಕ್ರೀಡಾಕೂಟಕ್ಕೆ ವಿಟಿಯು ಕುಲಸಚಿವ ಡಾ.ಬಿ.ಇ. ರಂಗಸ್ವಾಮಿ ಚಾಲನೆ ನೀಡಿದರು | Kannada Prabha

ಸಾರಾಂಶ

ಪೊಲೀಸ್‌ ಅಧಿಕಾರಿ ಮತ್ತು ಸಿಬ್ಬಂದಿಗೆ ಉತ್ತಮ ಆರೋಗ್ಯದ ಹಿತದೃಷ್ಟಿಯಿಂದ, ದೈಹಿಕ ಹಾಗೂ ಮಾನಸಿಕ ಸದೃಢತೆಗೆ ಹಾಗೂ ಒತ್ತಡದ ಜೀವನದಿಂದ ಹೊರಬರಲು ಕ್ರೀಡೆ ಸಹಕಾರಿಯಾಗಿದೆ ಎಂದು ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಕುಲಸಚಿವ ಡಾ.ಬಿ.ಇ. ರಂಗಸ್ವಾಮಿ ಹೇಳಿದರು.

ಕನ್ನಡಪ್ರಭ ವಾರ್ತೆ ಬೆಳಗಾವಿ

ಪೊಲೀಸ್‌ ಅಧಿಕಾರಿ ಮತ್ತು ಸಿಬ್ಬಂದಿಗೆ ಉತ್ತಮ ಆರೋಗ್ಯದ ಹಿತದೃಷ್ಟಿಯಿಂದ, ದೈಹಿಕ ಹಾಗೂ ಮಾನಸಿಕ ಸದೃಢತೆಗೆ ಹಾಗೂ ಒತ್ತಡದ ಜೀವನದಿಂದ ಹೊರಬರಲು ಕ್ರೀಡೆ ಸಹಕಾರಿಯಾಗಿದೆ ಎಂದು ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಕುಲಸಚಿವ ಡಾ.ಬಿ.ಇ. ರಂಗಸ್ವಾಮಿ ಹೇಳಿದರು.

ಮಚ್ಚೆ ಬಳಿ ಕೆಎಸ್‌ಆರ್‌ಪಿ 2ನೇ ಪಡೆ ಪೊಲೀಸ್ ಕ್ಯಾಂಪ್‌ನಲ್ಲಿ ಬೆಳಗಾವಿಯ ಪಿಟಿಎಸ್ ಕಂಗ್ರಾಳಿ ಸಂಯುಕ್ತ ಆಶ್ರಯದಲ್ಲಿ ಗುರುವಾರ ನಡೆದ ವಾರ್ಷಿಕ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಮಾತನಾಡಿದರು. ಇಂದು ಸಮಾಜದ ನೆಮ್ಮದಿಗಾಗಿ ಹಗಲಿರುಳು ಕೆಲಸ ಮಾಡುವ ಪೊಲೀಸರು ದೈಹಿಕ ಮತ್ತು ಮಾನಸಿಕ ಸದೃಢತೆ ಕಾಯ್ದುಕೊಳ್ಳುವುದು ಅವಶ್ಯವಾಗಿದೆ. ಅಲ್ಲದೆ, ದೈನಂದಿನ ಕಾರ್ಯಗಳ ವೇಳೆ ಪೊಲೀಸರು ಹೊಸ ಹೊಸ ಸವಾಲು ಹಾಗೂ ಸಮಸ್ಯೆ ಎದುರಿಸುವುದು ಅನಿವಾರ್ಯವಾಗುತ್ತದೆ. ಅಂತಹ ಒತ್ತಡಗಳಿಂದ ಹೊರಬರಲು ಹಾಗೂ ಮಾನಸಿಕ, ದೈಹಿಕ ಸಾಮರ್ಥ್ಯ ಅಭಿವೃದ್ಧಿಗೆ ಕ್ರೀಡೆಯಲ್ಲಿ ಪಾಲ್ಗೊಳ್ಳುವಿಕೆ ಸಹಾಯ ಮಾಡುತ್ತದೆ ಎಂದು ಸಲಹೆ ನೀಡಿದರು.

ಶಾಂತಿ ಸುವ್ಯವಸ್ಥೆ ಕಾಪಾಡಲು ಹಗಲು ಮತ್ತು ರಾತ್ರಿ ಎನ್ನದೇ, ದಿನದ 24 ಗಂಟೆಗಳ ಕಾಲ ಜನರ ಭದ್ರತೆಗಾಗಿ ಕಾರ್ಯನಿರ್ವಹಿಸುತ್ತಿರುವ ಪೊಲೀಸ್​ ಇಲಾಖೆಯ ಕಾರ್ಯದೊಂದಿಗೆ, ತಮ್ಮ ವೈಯಕ್ತಿಕ ಆರೋಗ್ಯ ಕಾಪಾಡಿಕೊಳ್ಳುವುದು ಅವಶ್ಯಕವಾಗಿದೆ. ಆದ್ದರಿಂದ ನಿಯಮಿತವಾಗಿ ಯೋಗ, ವ್ಯಾಯಾಮ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವುದರ ಮೂಲಕ ಸದೃಢ ಮನಸನ್ನು ಹೊಂದಬೇಕು. ಇಂದು ನಡೆದ ಈ ಕ್ರೀಡಾಕೂಟವನ್ನು ಹಬ್ಬವೆಂದು ಪರಿಗಣಿಸಿ, ಸಕ್ರಿಯವಾಗಿ ಪಾಲ್ಗೊಳ್ಳಬೇಕು. ಕ್ರೀಡಾಪಟುಗಳು ಸೋಲು-ಗೆಲುವು ಸಮನಾಗಿ ಸ್ವೀಕರಿಸಿ, ಕ್ರೀಡಾ ಮನೋಭಾವ ಮೆರೆಯುವಂತೆ ಮನವಿ ಮಾಡಿದರು.

ಈ ವೇಳೆ ಕೆಎಸ್ಆರ್‌ಪಿ 2ನೇ ಪಡೆಯ ಕಮಾಂಡೆಂಟ್ ರಮೇಶ ಬೊರಗಾವೆ ಅಧ್ಯಕ್ಷತೆ ವಹಿಸಿದ್ದರು. ಕಂಗ್ರಾಳಿ ಪಿಟಿಎಸ್ ಪ್ರಾಂಶುಪಾಲ ಕೆ.ಎಂ. ಮಹಾದೇವಪ್ರಸಾದ, ಖಾನಾಪುರ ಪಿಟಿಎಸ್ ಪ್ರಾಂಶುಪಾಲ ಅಮರಸಿದ್ದ ಗೊಂದಳಿ, ಬೆಳಗಾವಿ ಸಿಸಿಪಿ ಸಿಎಆರ್‌ ಸಿದ್ದನಗೌಡ ಪಾಟೀಲ, ಸಹಾಯಕ ಕಮಾಂಡೆಂಟ್‌ಗಳಾದ ಚನ್ನಬಸವ, ನಾಗೇಶ ಯಡಾಳ, ಅವಿನಾಶ ಮೇಘನ್ನವರ ಹಾಗೂ 2ನೇ ಪಡೆಯ, ಪಿಟಿಎಸ್ ಕಂಗ್ರಾಳಿ ಅಧಿಕಾರಿ ಮತ್ತು ಸಿಬ್ಬಂದಿ ಇದ್ದರು.

ಕಾರ್ಯಕ್ರಮಕ್ಕೂ ಮುನ್ನ ಕ್ರೀಡಾಪಟುಗಳಿಂದ ಪ್ರತಿಜ್ಞಾ ವಿಧಿ ಸ್ವೀಕರಿಸಲಾಯಿತು. ನಂತರ ಕ್ರೀಡಾಕೂಟದಲ್ಲಿ ಪುರುಷರಿಗೆ ರನ್ನಿಂಗ್‌, ವಾಲಿಬಾಲ್, ಬ್ಯಾಡ್ಮಿಂಟನ್, ಕಬಡ್ಡಿ, ಮಹಿಳೆಯರಿಗೆ ಜಂಪಿಂಗ್, ರನ್ನಿಂಗ್‌ ಪಂದ್ಯಾವಳಿ ನಡೆದವು. ಈ ಕ್ರೀಡಾಕೂಡದಲ್ಲಿ ವಿಜೇತ ಪೇದೆಗಳಿಗೆ ಬಹುಮಾನ ನೀಡಲಾಯಿತು.

PREV

Recommended Stories

ಟಿಕೆಟ್ ಆಯ್ತು, ಮಲ್ಟಿಪ್ಲೆಕ್ಸ್‌ಗಳಲ್ಲಿ ತಿಂಡಿ ದರ ಇಳಿಸಿ : ಸಿನಿ ಪ್ರಿಯರು
ಮಂಗಳಮುಖಿಯರು, ಮಹಿಳೆಯರಿಗೆ ಸರ್ಕಾರದಿಂದಲೇ ಉಚಿತ ಆಟೋ