ಕನ್ನಡಪ್ರಭ ವಾರ್ತೆ ಮಂಡ್ಯ
ತಾಲೂಕಿನ ಗೊರವಾಲೆ ಗ್ರಾಮದ ಸರ್ಕಾರಿ ಪ್ರೌಢಶಾಲೆ 10ನೇ ತರಗತಿ ವಿದ್ಯಾರ್ಥಿ ಜಿ.ವಿ.ಭುವನ್ ನಗರದ ಸರ್ ಎಂ.ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲಿ ನಡೆದ ಜಿಲ್ಲಾ ಮಟ್ಟದ ಅಥ್ಲೆಟಿಕ್ ಕ್ರೀಡಾಕೂಟದಲ್ಲಿ ಭಾಗವಹಿಸಿ 800 ಮೀಟರ್, 1500 ಮೀಟರ್ ಹಾಗೂ 3000 ಮೀಟರ್ ಓಟದಲ್ಲಿ ಭಾಗವಹಿಸಿ ಪ್ರಥಮ ಸ್ಥಾನ ಪಡೆದು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾನೆ.ಶಾಲೆ ಮುಖ್ಯಶಿಕ್ಷಕಿ ಯಮುನಾ ವಿದ್ಯಾರ್ಥಿಯನ್ನು ಅಭಿನಂದಿಸಿ ಮಾತನಾಡಿ, ಜಿ.ವಿ.ಭುವನ್ ಈ ಬಾರಿಯ ದಸರಾ ಕ್ರೀಡಾಕೂಟದಲ್ಲಿ ಮಂಡ್ಯ ಜಿಲ್ಲೆಯನ್ನು ಪ್ರತಿನಿಧಿಸಿ ಉಡುಪಿಯಲ್ಲಿ ನಡೆದ ವಿಭಾಗ ಮಟ್ಟದ ದಸರಾ ಕ್ರೀಡಾಕೂಟದಲ್ಲೂ ಸಹ ಪಾಲ್ಗೊಂಡಿದ್ದರು. 17 ವರ್ಷ ಒಳಗಿನ ಬಾಲಕರ ವಿಭಾಗದಲ್ಲಿ ಉತ್ತಮ ಅಥ್ಲೆಟಿಕ್ ಪ್ರಶಸ್ತಿಯನ್ನು ಪಡೆದಿದ್ದಾರೆ. ಮುಂಬರುವ ರಾಜ್ಯಮಟ್ಟದ ಕ್ರೀಡಾಕೂಟದಲ್ಲಿ ಭಾಗವಹಿಸಿ ಜಿಲ್ಲೆಗೆ ಶಾಲೆಗೆ ಹಾಗೂ ಇಲಾಖೆಗೆ ಉತ್ತಮ ಹೆಸರು ತರುವಂತಾಗಲಿ ಎಂದು ಶುಭ ಹಾರೈಸಿದರು.
ವಿದ್ಯಾರ್ಥಿಗೆ ತರಬೇತಿ ನೀಡಿದ ಶಾಲೆ ದೈಹಿಕ ಶಿಕ್ಷಣ ಶಿಕ್ಷಕ ಕೆ.ಎಸ್.ರಾಮ ಸಂಜೀವಯ್ಯ ಅವರನ್ನು ತಾಲೂಕು ದೈಹಿಕ ಶಿಕ್ಷಣ ವಿಷಯ ಪರಿವೀಕ್ಷಕ ಎಂ.ಎಸ್.ವಿಜಯ್ ಕುಮಾರ್ ಹಾಗೂ ಶಾಲೆಯ ಸಿಬ್ಬಂದಿ ವರ್ಗ ಅಭಿನಂದಿಸಿದ್ದಾರೆ. ಶಾಲೆ ಶಿಕ್ಷಕರಾದ ಮುತ್ಯಾಲಪ್ಪ, ಹನುಮಂತ ಪೂಜಾರಿ, ಮಂಜುಳಾ, ಜೆಸಿಂತಾ ರೋಜಾಲಿನ್, ಶಂಕರ್ , ಪರಿಸರ ಮಿತ್ರ ಜಯಶಂಕರ್ ಇದ್ದರು.ಅಥ್ಲೆಟಿಕ್ ಕ್ರೀಡಾಕೂಟ ಮೊಹಮ್ಮದ್ ಸಾಹಿದ್ ರಾಜ್ಯ ಮಟ್ಟಕ್ಕೆ ಆಯ್ಕೆ
ಹಲಗೂರು:ಜೆಜೆ ಪಬ್ಲಿಕ್ ಶಾಲೆ 8ನೇ ತರಗತಿ ವಿದ್ಯಾರ್ಥಿ ಮೊಹಮ್ಮದ್ ಶಾಹಿದ್ ಮಂಗಳವಾರ ಮಂಡ್ಯ ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲಿ ನಡೆದ ಜಿಲ್ಲಾ ಮಟ್ಟದ ಅಥ್ಲೆಟಿಕ್ ಕ್ರೀಡಾಕೂಟದ 14 ವರ್ಷ ವಯೋಮಿತಿ ಬಾಲಕರ ಓಟದ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಶಾಲೆ ಸಂಸ್ಥಾಪಕ ಸೋಮಶೇಖರ್ ವಿದ್ಯಾರ್ಥಿಯನ್ನು ಅಭಿನಂದಿಸಿ ಮಾತನಾಡಿ, ವಿದ್ಯಾರ್ಥಿ ಮೊಹಮ್ಮದ್ ಶಾಹಿದ್ ವ್ಯಾಸಂಗದಲ್ಲೂ ಸಹ ಉನ್ನತ ಮಟ್ಟದಲ್ಲಿದ್ದು, ಶಿಕ್ಷಕರ ಮೆಚ್ಚುಗೆಗೆ ಪಾತ್ರವಾಗಿದ್ದಾನೆ. ಶಾಲೆಯ ಪ್ರತಿಯೊಂದು ಕ್ರೀಡಾಕೂಟದಲ್ಲೂ ಉತ್ಸಾಹದಿಂದ ಭಾಗವಹಿಸಿ, ಹೋಬಳಿ ಮಟ್ಟ ಹಾಗೂ ತಾಲೂಕು ಮಟ್ಟದಲ್ಲಿ ವಿಜೇತನಾಗಿದ್ದಾನೆ ಎಂದರು.ಮಂಡ್ಯದಲ್ಲಿ ನಡೆದ ಅಥ್ಲೆಟಿಕ್ಸ್ ಕ್ರೀಡಾಕೂಟದ 100 ಮೀಟರ್ ಓಟದ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಹಾಗೂ ಉದ್ದ ಜಿಗಿತ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ ಪಡೆದು ರಾಜ್ಯಮಟ್ಟಕ್ಕೆ ಆಯ್ಕೆಯಾಗಿ ನಮ್ಮ ಶಾಲೆಗೆ ಕೀರ್ತಿ ತಂದಿದ್ದಾನೆ ಎಂದರು.
ಶಾಲಾ ಆಡಳಿತ ಮಂಡಳಿ ಹಾಗೂ ಶಿಕ್ಷಕವೃಂದದಿಂದ ವಿದ್ಯಾರ್ಥಿಗೆ ಅಭಿನಂದನೆ ಸಲ್ಲಿಸಿದ್ದು, ಮುಂದೆ ನಡೆಯುವ ರಾಜ್ಯಮಟ್ಟದ ಸ್ಪರ್ಧೆಯಲ್ಲಿ ವಿಜೇತರಾಗಲಿ ಎಂದು ಆಶಿಸುತ್ತೇನೆ ಎಂದು ಹೇಳಿದರು.