ಕನ್ನಡಪ್ರಭ ವಾರ್ತೆ ಬಾಳೆಹೊನ್ನೂರು
ಸದಾ ಕರ್ತವ್ಯದ ಒತ್ತಡ ನಿವಾರಿಸಲು ನೌಕರರಿಗೆ ಕ್ರೀಡಾಕೂಟಗಳು ಪೂರಕವಾಗಲಿದೆ ಎಂದು ಕಾಫಿ ಮಂಡಳಿ ಸದಸ್ಯ ಭಾಸ್ಕರ್ ವೆನಿಲ್ಲಾ ಹೇಳಿದರು.ಪಟ್ಟಣದ ಜೇಸಿಐ ಬಾಳೆಹೊನ್ನೂರು ಕ್ಲಾಸಿಕ್‌ನಿಂದ ಕಲಾರಂಗ ಕ್ರೀಡಾಂಗಣದಲ್ಲಿ ಸರ್ಕಾರಿ ನೌಕರರಿಗೆ ಆಯೋಜಿಸಿದ್ದ ಅಫಿಶಿಯಲ್ ಪ್ರೀಮಿಯರ್ ಲೀಗ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ಮಾತನಾಡಿದರು. ವರ್ಷವಿಡೀ ಕರ್ತವ್ಯದ ಒತ್ತಡದಲ್ಲಿರುವ ನೌಕರರು ಇಂತಹ ಕ್ರೀಡಾಕೂಟಗಳಲ್ಲಿ ಭಾಗವಹಿಸುವ ಮೂಲಕ ವೃತ್ತಿ ಜೀವನದ ಎಲ್ಲ ಒತ್ತಡಗಳಿಂದ ಹೊರಬಂದು ಮನಸ್ಸಿಗೆ ಉತ್ತಮ ಶಾಂತಿ, ನೆಮ್ಮದಿ ಪಡೆಯಲಿದ್ದಾರೆ. ಒತ್ತಡ ನಿವಾರಿಸುವ ಉದ್ದೇಶದಿಂದ ಜೇಸಿ ಸಂಸ್ಥೆ ಆಯೋಜಿಸಿರುವ ಪಂದ್ಯಾವಳಿ ಶ್ಲಾಘನೀಯ ಎಂದರು.ಜಿಪಂ ಮಾಜಿ ಸದಸ್ಯ ಮಹಮ್ಮದ್ ಇಫ್ತೆಖಾರ್ ಆದಿಲ್ ಮಾತನಾಡಿ, ಸರ್ಕಾರಿ ನೌಕರರನ್ನು ಸಮಾಜದಲ್ಲಿ ಗುರುತಿಸಿ ಕ್ರೀಡಾಕೂಟದ ಮೂಲಕ ಅವರಿಗೆ ಉತ್ತಮ ವೇದಿಕೆ ಕಲ್ಪಿಸಿರುವುದು ಶ್ಲಾಘನೀಯ. ನೌಕರರಿಗೆ ಮಾತ್ರ ಆಯೋಜಿಸುವ ಇಂತಹ ಕ್ರೀಡಾಕೂಟಗಳು ಸಾಮರಸ್ಯ, ಶಾಂತಿ ಸಂದೇಶ ಸಾರಲು ಪೂರಕವಾಗಿದೆ ಎಂದರು.
ಜೇಸಿ ಅಧ್ಯಕ್ಷ ಶಶಿಧರ್ ಮಾತನಾಡಿ, ಸಾರ್ವಜನಿಕರ ಸೇವೆಯಲ್ಲಿ ಸದಾ ತೊಡಗಿರುವ ಸರ್ಕಾರಿ ನೌಕರಲ್ಲಿಯೂ ಸಹ ಉತ್ತಮ ಪ್ರತಿಭೆಗಳು ಅಡಗಿದ್ದು, ಅದನ್ನು ಹೊರತಂದು ಅವರ ಕರ್ತವ್ಯದ ಒತ್ತಡ ದೂರ ಮಾಡುವ ಉದ್ದೇಶದಿಂದ ಹಾಗೂ ಸಾರ್ವಜನಿಕರೊಂದಿಗೆ ಬೆರೆತು ಇನ್ನಷ್ಟು ಉತ್ತಮ ಸೇವೆ ನೀಡಲಿ ಎಂಬ ಉದ್ದೇಶದಿಂದ ನೌಕರರ ಪ್ರೀಮಿಯರ್ ಲೀಗ್ ಅನ್ನು ಆಯೋಜಿಸಲಾಗಿದೆ. ಎಲ್ಲಾ ನೌಕರರು ಸಹ ಉತ್ತಮ ಸ್ಪಂದನೆ ತೋರಿದ್ದು, ಪಂದ್ಯಾವಳಿ ಯಶಸ್ವಿ ಗೊಂಡಿದೆ ಎಂದರು.ಗುತ್ತಿಗೆದಾರ ಟಿ.ಎಂ.ಬಶೀರ್, ಬಿ.ಕಣಬೂರು ಗ್ರಾಪಂ ಅಧ್ಯಕ್ಷ ಸದಾಶಿವ ಆಚಾರ್ಯ, ಆರ್‌ಎಫ್‌ಓ ಎಂ.ಸಂದೀಪ್, ಪೊಲೀಸ್ ಇಲಾಖೆ ನಾಗರಾಜ್, ಪ್ರೌಢ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಕೆ.ಎಂ.ರಾಘವೇಂದ್ರ, ತೀರ್ಪುಗಾರ ಓ.ಡಿ.ಸ್ಟೀಫನ್, ಶೇಖರ್ ಇಟ್ಟಿಗೆ, ಜೇಸಿ ನಿಕಟಪೂರ್ವ ಅಧ್ಯಕ್ಷ ಬಿ.ಎಸ್.ಅಜಿತ್, ಕಾರ್ಯ ದರ್ಶಿ ಶೃಜಿತ್ ಹುಯಿಗೆರೆ, ಕಾರ್ಯಕ್ರಮ ನಿರ್ದೇಶಕ ಕೆ.ಪ್ರಶಾಂತ್ ಕುಮಾರ್, ಕಿರಣ್ ನೆಲ್ಲಿಮಕ್ಕಿ ಮತ್ತಿತರರು ಹಾಜರಿದ್ದರು.
ಪಂದ್ಯಾವಳಿಯಲ್ಲಿ ಎನ್.ಆರ್.ಪುರ ಪೊಲೀಸ್ ತಂಡ ಚಾಂಪಿಯನ್ ಸ್ಥಾನದೊಂದಿಗೆ ನಗದು, ಟ್ರೋಫಿ ಪಡೆಯಿತು. ಬಾಳೆಹೊನ್ನೂರು ಪೊಲೀಸ್ ತಂಡ ರನ್ನರ್ ಸ್ಥಾನದೊಂದಿಗೆ ನಗದು, ಟ್ರೋಫಿ ಪಡೆಯಿತು. ಪಂದ್ಯಾವಳಿಯಲ್ಲಿ ಶಿಕ್ಷಕರ ತಂಡ, ಮೆಸ್ಕಾಂ ನೌಕರರ ತಂಡ, ಗ್ರಾಪಂ ನೌಕರರ ತಂಡ, ಅರಣ್ಯ ಇಲಾಖೆ, ಪೊಲೀಸ್, ಆರೋಗ್ಯ ಇಲಾಖೆ ತಂಡಗಳು ಭಾಗವಹಿಸಿದ್ದವು.