ಶಿರಹಟ್ಟಿ: ಮಾನಸಿಕ, ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿಯಾಗಿದ್ದು, ಯುವ ಜನಾಂಗ ಕ್ರೀಡಾಕೂಟದಲ್ಲಿ ಭಾಗವಹಿಸಬೇಕು. ಕ್ರೀಡೆ ದೈಹಿಕ ಹಾಗೂ ಮಾನಸಿಕವಾಗಿ ಅತ್ಯಂತ ಪ್ರಯೋಜನಕಾರಿಯಾಗಿದೆ ಎಂದು ಶಾಸಕ ಡಾ.ಚಂದ್ರು ಕೆ. ಲಮಾಣಿ ಕರೆ ನೀಡಿದರು.
ಜಿಲ್ಲಾಡಳಿತ, ಜಿಪಂ, ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ) ಗದಗ ಹಾಗೂ ಇಲ್ಲಿಯ ಎಫ್.ಬಿ. ಪೂಜಾರ ಸರ್ಕಾರಿ ಪದವಿ ಪೂರ್ವ ಕಾಲೇಜು ಸಂಯುಕ್ತ ಆಶ್ರಯದಲ್ಲಿ ಪಟ್ಟಣದ ಎಸ್.ಎಂ.ಡಬಾಲಿ ತಾಲೂಕು ಕ್ರೀಡಾಂಗಣದಲ್ಲಿ ಏರ್ಪಡಿಸಿದ್ದ ೨೦೨೫-೨೬ನೇ ಸಾಲಿನ ತಾಲೂಕು ಮಟ್ಟದ ಪದವಿಪೂರ್ವ ಕಾಲೇಜುಗಳ ಕ್ರೀಡಾಕೂಟ ಉದ್ಘಾಟಿಸಿ ಮಾತನಾಡಿದರು.ಯುವ ಜನಾಂಗ ದುಶ್ಚಟಗಳಿಂದ ದೂರವಿರಬೇಕು. ಆರೋಗ್ಯಪೂರ್ಣ ಸಮಾಜ ನಿರ್ಮಾಣಕ್ಕೆ ಶ್ರಮಿಸಬೇಕು. ಕ್ರೀಡೆಯಿಂದ ದೈಹಿಕ ಸದೃಢತೆ ಲಭಿಸುತ್ತದೆ. ಪ್ರತಿಯೊಬ್ಬರೂ ಕ್ರೀಡಾಸಕ್ತಿ ಬೆಳೆಸಿಕೊಳ್ಳುವ ಮೂಲಕ ದೇಶದ ಶಕ್ತಿಯಾಗಬೇಕು. ಕ್ರೀಡೆ ಸ್ಪರ್ಧಾತ್ಮಕ ಮನೋಭಾವ, ಶಿಸ್ತು ಮತ್ತು ಆತ್ಮವಿಶ್ವಾಸ ಬೆಳೆಸುತ್ತದೆ ಎಂದು ತಿಳಿಸಿದರು.
ಆರೋಗ್ಯ ನಿರ್ವಹಣೆಗೆ ಕ್ರೀಡೆ ಅಮೂಲ್ಯ ಸಾಧನ. ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಕ್ರೀಡೆ ಸಹಕಾರಿಯಾಗಿದ್ದು, ನಿರ್ಣಾಯಕರು ಕ್ರೀಡಾಸಕ್ತಿಯಿಂದ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಬೇಕು. ಸಮಗ್ರ ಶಿಕ್ಷಣದ ಭಾಗವಾದ ಕ್ರೀಡೆಯು ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕೆ ಸಹಕಾರಿ ಎಂದರು.ವಿದ್ಯಾರ್ಥಿಗಳು ಆರೋಗ್ಯವಾಗಿದ್ದರೆ ಮಾತ್ರ ಕಲಿಕೆಯಲ್ಲಿ ಸಾಧನೆ ಮಾಡಲು ಸಾಧ್ಯ. ಸದೃಢ ದೇಹದಲ್ಲಿ ಸದೃಢ ಮನಸ್ಸಿರುತ್ತದೆ ಎಂಬ ಮಾತಿನಂತೆ ಮಕ್ಕಳ ಸರ್ವಾಂಗೀಣ ಅಭಿವೃದ್ಧಿಯಲ್ಲಿ ಪಠ್ಯದಷ್ಟೇ ಪಠ್ಯೇತರ ಚಟುವಟಿಕೆಗಳು ಮುಖ್ಯ. ಮಕ್ಕಳ ವ್ಯಕ್ತಿತ್ವ ರೂಪಿಸುವಲ್ಲಿ ಕ್ರೀಡಾ ಚಟುವಟಿಕೆಗಳಿಗೆ ಹೆಚ್ಚಿನ ಮಹತ್ವವಿದೆ ಎಂದು ಅಭಿಪ್ರಾಯಪಟ್ಟರು.
ಎಲ್ಲರೂ ಕ್ರೀಡೆಗೆ ಹೆಚ್ಚಿನ ಪ್ರಾಶಸ್ತ್ಯ ನೀಡಬೇಕು. ಕ್ರೀಡೆಯಲ್ಲಿ ಸೋಲು ಗೆಲುವು ಮುಖ್ಯವಲ್ಲ. ಬದಲಿಗೆ ಭಾಗವಹಿಸುವಿಕೆ ಮುಖ್ಯ. ಕ್ರೀಡೆಗಳಿಂದ ಸ್ಪರ್ಧಾ ಮನೋಭಾವ ಮೂಡುತ್ತದೆ. ಕ್ರೀಡೆಗಳಲ್ಲಿ ಭಾಗವಹಿಸಿದರೆ ಒತ್ತಡ ನಿವಾರಣೆಯಾಗುತ್ತದೆ. ಆಧುನಿಕತೆ ಬೆಳೆದಂತೆ ಕ್ರೀಡೆಗಳು ಮರೆಯಾಗುತ್ತಿವೆ. ಹಿಂದೆ ಗ್ರಾಮೀಣ ಕ್ರೀಡೆಗಳು ಹೆಚ್ಚು ಚಾಲ್ತಿಯಲ್ಲಿದ್ದವು. ಆದರೆ, ಈಗ ಗ್ರಾಮೀಣ ಕ್ರೀಡೆಗಳು ನೇಪಥ್ಯಕ್ಕೆ ಸರಿದಿವೆ. ರೋಗ ನಿವಾರಣೆಗೆ ಕ್ರೀಡೆ ಒಳ್ಳೆಯ ಮದ್ದು ಎಂದು ತಿಳಿಸಿದರು.ಬಿಜೆಪಿ ಮುಖಂಡ ಪಪಂ ಮಾಜಿ ಅಧ್ಯಕ್ಷ ನಾಗರಾಜ ಲಕ್ಕುಂಡಿ ಮಾತನಾಡಿ, ವಿದ್ಯಾರ್ಥಿಗಳು ಶಾಲಾ ಕಾಲೇಜು ಜೀವನದಲ್ಲಿ ಪಠ್ಯದೊಂದಿಗೆ ಆಟೋಟಗಳಲ್ಲೂ ಉತ್ಸಾಹದಿಂದ ತೊಡಗಿಸಿಕೊಳ್ಳಬೇಕು. ಅಂದಾಗಲೇ ಆರೋಗ್ಯಯುತ ಜೀವನ ದೊರೆಯುವ ಜತೆಗೆ ಮೌಲ್ಯ ವೃದ್ಧಿಯಾಗುತ್ತವೆ. ಕ್ರೀಡೆಯಿಂದ ಪ್ರಶಸ್ತಿ, ಬಹುಮಾನ, ಕೀರ್ತಿ ಜತೆಗೆ ದೈಹಿಕ ಶಕ್ತಿ ವೃದ್ಧಿಯಾಗುತ್ತದೆ. ಕ್ರೀಡೆಯು ಯುವ ಜನರಲ್ಲಿ ತಂಡ ನಿರ್ವಹಣೆ, ಸಾಮಾಜಿ ಜವಾಬ್ದಾರಿ, ನಾಯಕತ್ವ ಬೆಳೆಸುತ್ತದೆ ಎಂದು ಹೇಳಿದರು.
ವಿದ್ಯಾರ್ಥಿಗಳು ಅಂಕ ಗಳಿಕೆಗೆ ನೀಡುವಷ್ಟೇ ಮಹತ್ವ ಕ್ರೀಡಾಕೂಟದಲ್ಲಿ ಸ್ಪರ್ಧೆಗೂ ನೀಡಬೇಕು. ಆಗ ಮಾತ್ರ ಉಜ್ವಲ ಭವಿಷ್ಯ ನಿರ್ಮಾಣವಾಗುತ್ತದೆ. ಯಾವುದೇ ಕಾರಣಕ್ಕೂ ಶಿಕ್ಷಕರು, ಪೋಷಕರು ಕ್ರೀಡಾಸಕ್ತ ಮಕ್ಕಳನ್ನು ವಿಮುಖರನ್ನಾಗಿ ಮಾಡಬಾರದು ಎಂದು ಸಲಹೆ ನೀಡಿದರು.ಕಾಲೇಜ್ ಪ್ರಾಚಾರ್ಯ ಬಿ.ಜಿ. ಗಿರಿತಮ್ಮಣ್ಣವರ, ಚಂದ್ರಕಾಂತ ನೂರಶೆಟ್ಟರ್, ಹೊನ್ನಪ್ಪ ಶಿರಹಟ್ಟಿ, ಕೆ.ಎ.ಬಳಿಗೇರ, ತಿಪ್ಪಣ್ಣ ಕೊಂಚಿಗೇರಿ, ರಾಮಣ್ಣ ಕಂಬಳಿ, ಶಂಕರ ಮೆರಾಠೆ, ಎಚ್.ಆರ್. ಬೆನಹಾಳ, ಎಂ.ಸಿ. ಭಜಂತ್ರಿ, ರವಿ ಗುಡಿಮನಿ, ಗೌತಮ ಕಪ್ಪತ್ತನವರ, ಶ್ರೀನಿವಾಸ ಕಪಟಕರ, ಬಸವರಾಜ ವಡವಿ, ಮಲ್ಲು ಕಬಾಡಿ, ಎಲ್.ಟಿ. ಪಾಟೀಲ, ಗಿರೀಶ ರಡ್ಡೇರ, ಕವಿತಾ, ಸುನಿಲ ಲಮಾಣಿ, ಇಮ್ರಾನ ಸುಂಕದ, ರಾಜು ನಾಯಕ, ವೈ.ಎ. ಶಿರಹಟ್ಟಿ ಇದ್ದರು.