ಕನ್ನಡಪ್ರಭ ವಾರ್ತೆ ಬಾಗಲಕೋಟೆ
ಮಾನವನ ದೈಹಿಕ ಹಾಗೂ ಮಾನಸಿಕ ಸಮತೋಲನಕ್ಕೆ ಕ್ರೀಡೆ ಸಹಕಾರಿಯಾಗಿದೆ ಎಂದು ಸೈಬರ್ ಕ್ರೈಂ ವಿಭಾಗದ ಡಿ.ವೈ.ಎಸ್.ಪಿ ಡಾ.ಗಿರೀಶ ಭೋಜನ್ನವರ ಹೇಳಿದರು.ನಗರದ ಬಸವೇಶ್ವರ ಕಾಲೇಜು ಮೈದಾನದಲ್ಲಿ ಬಿ.ವಿ.ವಿ.ಎಸ್. ಹೋಮಿಯೋಪಥಿಕ್ ವೈದ್ಯಕೀಯ ಮಹಾವಿದ್ಯಾಲಯದಲ್ಲಿ ಆಯೋಜಿಸಿದ್ದ 4 ದಿನಗಳ ವಾರ್ಷಿಕ ಕ್ರೀಡಾಕೂಟ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ಉತ್ಸಾಹ- 25 ಕ್ರೀಡಾ ಜ್ಯೋತಿ ಬೆಳಗಿಸುವ ಮೂಲಕ ಚಾಲನೆ ನೀಡಿ ಮಾತನಾಡಿದರು.
ವೈದ್ಯ ವಿದ್ಯಾರ್ಥಿಗಳು ಪಠ್ಯಚಟುವಟಿಕೆಯ ಜತೆಯಲ್ಲಿ ಕ್ರೀಡೆ, ಸಾಂಸ್ಕೃತಿಕ, ಪ್ರತಿಭಾ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವ ಅಗತ್ಯವಿದೆ. ಪಠ್ಯ ಶಿಕ್ಷಣ, ಕ್ರೀಡೆ ಹಾಗೂ ಕಲೆ ಮತ್ತು ಸಂಸ್ಕೃತಿ ವಿಭಾಗಗಳು ಶಿಕ್ಷಣದ ಅವಿಭಾಜ್ಯ ಅಂಗವಾಗಿರುವುದನ್ನು ವಿದ್ಯಾರ್ಥಿಗಳು ಮತ್ತು ಪೋಷಕರು ಅರಿತುಕೊಳ್ಳಬೇಕು. ದೈಹಿಕ ಮತ್ತು ಮಾನಸಿಕ ಸಮತೋಲನಕ್ಕೆ ಕ್ರೀಡೆ ಸಹಕಾರಿಯಾಗಿರುವುದರಿಂದ ವಿದ್ಯಾರ್ಥಿಗಳು ಕ್ರೀಡೆಗೂ ಆದ್ಯತೆ ನೀಡಬೇಕು ಎಂದು ಹೇಳಿದರು.ಬವಿವ ಸಂಘದ ಆಯುಷ್ ಹಾಗೂ ಫಾರ್ಮಸಿ ಕಾಲೇಜುಗಳ ಆಡಳಿತ ಮಂಡಳಿ ಕಾರ್ಯಾಧ್ಯಕ್ಷ ಮಲ್ಲಿಕಾರ್ಜುನ ಸಾಸನೂರ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಪಟ್ಟಣ ಮತ್ತು ನಗರ ಪ್ರದೇಶಗಳಲ್ಲಿ ಪೋಷಕರು ಕೇವಲ ಪಠ್ಯ ಶಿಕ್ಷಣಕ್ಕೆ ಆದ್ಯತೆ ನೀಡುತ್ತಿದ್ದಾರೆ. ಇಂದು ರಾಜ್ಯದ್ಯಂತ ವಿದ್ಯಾಸಂಸ್ಥೆಗಳು ಹೆಚ್ಚಿನ ಪ್ರಮಾಣದಲ್ಲಿ ಸ್ಥಾಪನೆಯಾಗುತ್ತಿದ್ದು, ಇಂತಹ ಶಿಕ್ಷಣ ಸಂಸ್ಥೆಗಳು ಕೇವಲ ವ್ಯವಹಾರಿಕ ಮತ್ತು ಪ್ರತಿಷ್ಠೆಯ ಶಿಕ್ಷಣ ಸಂಸ್ಥೆಗಳಾಗಿ ಕಾರ್ಯ ನಿರ್ವಹಿಸುತ್ತಿವೆ. ಇದರಿಂದ ವಿದ್ಯಾರ್ಥಿಗಳು ಕ್ರೀಡಾ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಲು ಆಟದ ಮೈದಾನ, ಮತ್ತು ಕಲೆ-ಸಂಸ್ಕೃತಿಯನ್ನು ಪ್ರದರ್ಶಿಸಲು ಸೂಕ್ತ ವೇದಿಕೆಯ ವ್ಯವಸ್ಥೆ ಇಲ್ಲ. ಇದರಿಂದ ವಿದ್ಯಾರ್ಥಿಗಳಿಗೆ ಪಠ್ಯೇತರ ಚಟುವಟಿಕೆಗಳಲ್ಲಿ ಆಸಕ್ತಿ ಕಳೆದುಕೊಳ್ಳುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಪ್ರಾಚಾರ್ಯ ಡಾ.ಆರುಣ ಹೂಲಿ ಮಾತನಾಡಿದರು. ಇದೇ ವೇಳೆ ಮುಖ್ಯ ಅತಿಥಿಗಳು ಕ್ರೀಡಾ ಧ್ವಜಾರೋಹಣ ನೆರವೇರಿಸಿ ಕ್ರೀಡಾ ಪ್ರತಿಜ್ಞಾವಿಧಿ ಬೋಧಿಸಿದರು. ಸಮಾರಂಭದಲ್ಲಿ ಕ್ರೀಡಾ ಹಾಗೂ ಸಾಂಸ್ಕೃತಿಕ ಸಂಯೋಜಕರಾದ ಡಾ.ಮಂಜುನಾಥ ಪಾಟೀಲ, ಡಾ.ವಿ.ಎಸ್. ಸಂಕೇಶ್ವರಿ, ಡಾ.ತೃಪ್ತಿ ಶಿಂದೆ, ಡಾ.ರುದ್ರೇಶ ಕೊಪ್ಪಳ, ಡಾ.ಅಮರೇಶ ಬಳಗಾನೂರ, ಡಾ.ರತ್ನ ಪ್ರಿಯದರ್ಶನಿ, ಡಾ.ಹಾಜಿಮಲಂಗ ತಾಂಬೋಲಿ, ಡಾ.ಲಕ್ಷ್ಮಿ ಪ್ರಾಧ್ಯಾಪಕರಾದ ಡಾ.ರವಿ ಕೋಟೆಣ್ಣವರ, ಡಾ.ಸುಧೀರ ಬೆಟಗೇರಿ, ಡಾ.ಅಖಿಲಾ ಹುಲ್ಲೂರ, ಡಾ.ಫಾತಿಮಾ ಬಾಲಸಿಂಗ, ಡಾ.ಶಮಶಾದ, ಡಾ.ಪ್ರದೀಪ, ಡಾ.ದೀಪಕ ಉಪಸ್ಥಿತರಿದ್ದರು. ವಿದ್ಯಾರ್ಥಿನಿ ಅಪೂರ್ವ ಪಾಟೀಲ ಹಾಗೂ ಸಂಗಡಿಗರು ಪ್ರಾರ್ಥಿಸಿದರು. ಪ್ರಜ್ಞಾ ನಾಯಿಕ ಸ್ವಾಗತಿಸಿದರು. ಅನ್ನಪೂರ್ಣ ಲೋಹಾರ ಪರಿಚಯಿಸಿದರು. ಭಾಗ್ಯ ಗಂಗಶಟ್ಟಿ ವಂದಿಸಿದರು.