ಮಕ್ಕಳ ವಾರ್ಷಿಕ ಕ್ರೀಡಾಕೂಟದಲ್ಲಿ ಕಾಡದೇವರಮಠ
ಧಾರವಾಡ: ಮಕ್ಕಳಿಗೆ ಕ್ರೀಡಾ ಚಟುವಟಿಕೆಯು ಕಲಿಕೆಯ ಒಂದು ಆಯಾಮ ಎಂಬುದನ್ನು ಪಾಲಕರು ತಿಳಿದುಕೊಳ್ಳಬೇಕು. ಬಹಳಷ್ಟು ಪಾಲಕರು ತಮ್ಮ ಮಕ್ಕಳು ಕ್ರೀಡಾ ಚಟುವಟಿಕೆಗಳಲ್ಲಿ ಭಾಗವಹಿಸುವುದರಿಂದ ಹಿಂದೆ ಉಳಿಯುತ್ತಾರೆ ಎಂಬ ಭಾವನೆಯಿಂದ ತಮ್ಮ ಮಕ್ಕಳಿಗೆ ಪ್ರೋತ್ಸಾಹ ನೀಡದಿರುವುದು ತಪ್ಪು ಎಂದು ಶಹರದ ಪೊಲೀಸ್ ಇನಸ್ಪೆಕ್ಟರ್ ನಾಗಯ್ಯ ಕಾಡದೇವರಮಠ ಹೇಳಿದರು.ಚಿಲಿಪಿಲಿ ಪೂರ್ವ ಪ್ರಾಥಮಿಕ ಹಾಗೂ ಗುಬ್ಬಚ್ಚಿ ಗೂಡು ಹೈಸ್ಕೂಲದ ಮಕ್ಕಳ ವಾರ್ಷಿಕ ಕ್ರೀಡಾಕೂಟಕ್ಕೆ ಮಂಗಳವಾರ ಚಾಲನೆ ನೀಡಿದ ಅವರು, ಕ್ರೀಡೆಯು ಮಕ್ಕಳಲ್ಲಿ ಸ್ಪರ್ಧಾ ಮನೋಭಾವನೆ ಬೆಳೆಸುತ್ತದೆ.ಎಲ್ಲವನ್ನು ಸಮಚಿತ್ತದಿಂದ ಸ್ವೀಕರಿಸುವ ಗುಣ ಬರುತ್ತದೆ. ಎಲ್ಲರೊಟ್ಟಿಗೆ ಬೆರೆಯುವ ಮತ್ತು ಏಕಾಗ್ರತೆ ಹೊಂದುವುದಕ್ಕೆ ಸಹಕಾರಿಯಾಗುತ್ತದೆ. ಇದರಿಂದ ಓದಿನಲ್ಲಿ ವಿದ್ಯಾರ್ಥಿಗಳಿಗೆ ಆಸಕ್ತಿ ಹೆಚ್ಚುತ್ತದೆ. ದೈಹಿಕವಾಗಿ ಸದೃಢವಾಗಿದ್ದಾರೆ. ಮಾನಸಿಕವಾಗಿ ಸದೃಢವಾಗಿರಲು ಸಾಧ್ಯವಾಗುವುದು. ಪಾಲಕರು ಇದನ್ನು ಸರಿಯಾಗಿ ತಿಳಿದುಕೊಂಡು ಯಾವುದಾದರು ಒಂದು ಕ್ರೀಡೆಯಲ್ಲಿ ಭಾಗವಹಿಸುವಂತೆ ನೋಡಿಕೊಳ್ಳಬೇಕಾಗಿದ್ದು ಅವಶ್ಯವಿದೆ ಎಂದರು.
ಜೆಎಸ್ಎಸ್ ಐಟಿಐ ಕಾಲೇಜಿನ ಪ್ರಾಚಾರ್ಯ ಮಹಾವೀರ ಉಪಾಧ್ಯಾಯ ಮಾತನಾಡಿ, ಪ್ರತಿಯೊಂದು ಶಾಲೆಯಲ್ಲಿ ಕ್ರೀಡೆಗೆ ಮಹತ್ವ ನೀಡಬೇಕು.ಯಾವ ಮಗು ಯಾವ ಕ್ರೀಡೆಯಲ್ಲಿ ಆಸಕ್ತಿ ಇದೆ ಎಂಬುದನ್ನು ದೈಹಿಕ ಶಿಕ್ಷಕರು ಗುರುತಿಸಿ,ಅದರಲ್ಲಿ ಆ ಮಗುವಿಗೆ ತರಬೇತಿ ಮತ್ತು ಮಾರ್ಗದರ್ಶನ ಮಾಡಬೇಕು.ಜಿಲ್ಲೆಯು ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ ಅತೀ ಹಿಂದುಳಿಯಲು ಇದೂ ಒಂದು ಕಾರಣ ಎಂಬುದನ್ನು ನಾವು ಮರೆಮಾಚುತ್ತಿದ್ದೇವೆ. ಮಕ್ಕಳು ಕ್ರೀಡಾ ಚಟುವಟಿಕೆಯಲ್ಲಿ ಭಾಗವಹಿಸುವುದರಿಂದ ಸಹಜವಾಗಿ ಮೆದುಳು ಚುರುಕುಕೊಳ್ಳುತ್ತದೆ. ಇದರಿಂದ ಓದಿನಲ್ಲಿ ಹೆಚ್ಚಿನ ಸಾಧನೆ ಮಾಡಲು ಸಾಧ್ಯ ಎಂದರು.ಶಿಕ್ಷಣ ಚಿಂತಕ ಎಂ.ಎಂ. ಚಿಕ್ಕಮಠ ಮಾತನಾಡಿ, ಮಕ್ಕಳಲ್ಲಿ ಶಿಸ್ತನ್ನು ಕ್ರೀಡೆ ತಂದು ಕೊಡುತ್ತದೆ. ಮಕ್ಕಳಾದವರು ನಾನು ಸೋಲುತ್ತೇನೆ ಎಂದು ಕ್ರೀಡಾ ಚಟುವಟಿಕೆಗಳಲ್ಲಿ ಭಾಗವಹಿಸುವುದರಿಂದ ಹಿಂಜರಿಯಬಾರದು. ಸೋತರೆ ಮುಂದಿನ ಬಾರಿ ನಾನು ಗೆದ್ದೇ ಗೆಲ್ಲುತ್ತೇನೆ ಎಂಬ ಛಲ ಹೊಂದಬೇಕು. ಸೋತಲ್ಲೇ ಗೆಲುವನ್ನು ಹುಡುಕಬೇಕು. ಈ ಗುಣ ಮುಂದೆ ಜೀವನದಲ್ಲೂ ಸಹಾಯವಾಗುತ್ತದೆ. ಎಂತಹ ಕಠಿಣ ಸಂದರ್ಭವನ್ನು ಎದೆಗುಂದದೇ ಎದುರಿಸುವ ಆತ್ಮಸ್ಥೈರ್ಯ ಕ್ರೀಡೆಯಿಂದ ಬರುತ್ತದೆ ಎಂದರು.
ಚಿಲಿಪಿಲಿ ಸಂಸ್ಥೆಯ ಅಧ್ಯಕ್ಷ ಶಂಕರ ಹಲಗತ್ತಿ ಅಧ್ಯಕ್ಷತೆ ವಹಿಸಿದರು. ದೈಹಿಕ ಶಿಕ್ಷಕ ಸಿಕಂದರ ದಂಡಿನ ಕ್ರೀಡಾ ಸ್ಪರ್ಧೆ ನಡೆಸಿಕೊಟ್ಟರು. ವಿಜಯಲಕ್ಷ್ಮಿ ಸುಭಾಂಜಿ ಸ್ವಾಗತಿಸಿದರು. ಶಾಲೆಯ ಪ್ರಧಾನ ಗುರುಮಾತೆ ಲಕ್ಷ್ಮಿ ಜಾಧವ ನಿರೂಪಿಸಿದರು.