ಕನ್ನಡಪ್ರಭವಾರ್ತೆ ಚಿತ್ರದುರ್ಗ
ಕಾಂಗ್ರೆಸ್ ಪಕ್ಷ ಸಂಸತ್‌ನಲ್ಲಿ ಉಪ ರಾಷ್ಟ್ರಪತಿ ಜಗದೀಪ್ ಧನಕರ್‌ರವರ ಬಗ್ಗೆ ಅಣಕು ವಿಡಿಯೋ ಮಾಡಿ ವಿಕೃತಿ ಮೆರೆದಿದೆ ಎಂದು ಆರೋಪಿಸಿ ಬಿಜೆಪಿ ಕಾರ್ಯಕರ್ತರು ಗುರುವಾರ ಚಿತ್ರದುರ್ಗದ ಒನಕೆ ಓಬವ್ವ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು.ಈ ವೇಳೆ ಮಾತನಾಡಿದ ಬಿಜೆಪಿ ಮಾಜಿ ಕಾರ್ಯದರ್ಶಿ ಮಲ್ಲಿಕಾರ್ಜನ್, ಸಂಸತ್ ಪೂಜ್ಯನೀಯ ಸ್ಥಳವಾಗಿದ್ದು, ಅಲ್ಲಿ ಯಾವ ರೀತಿ ಇರಬೇಕೆಂದು ಕಾಂಗ್ರೆಸ್ ಸಂಸದರಿಗೆ ಗೊತ್ತಿಲ್ಲ. ಉಪ ರಾಷ್ಟ್ರಪತಿಗಳು ಸಂವಿಧಾನದ ಪರ್ಯಾಯ ವ್ಯಕ್ತಿಯಾಗಿದ್ದಾರೆ. ಸಂವಿಧಾನದ ಪರವಾಗಿ ಪೀಠ ಆಲಂಕರಿಸಿದ್ದಾರೆ. ಅವರಿಗೆ ಎಲ್ಲರೂ ಗೌರವ ನೀಡಬೇಕಿದೆ. ಆದು ಬಿಟ್ಟು ತೇಜೋವಧೆ ಮಾಡುವ ಕಾರ್ಯವೆಸಗಲಾಗಿದೆ ಎಂದು ದೂರಿದರು.ಮೂರು ರಾಜ್ಯಗಳಲ್ಲಿ ಅಧಿಕಾರ ಹಿಡಿಯಲು ಸಾಧ್ಯವಾಗದೆ ಕಾಂಗ್ರೆಸ್ ಹತಾಶವಾಗಿದೆ. ಮುಂದೇನು ಎಂಬುದ ತಿಳಿಯದೆ ಉಪ ರಾಷ್ಟ್ರಪತಿಗಳಿಗೆ ಅವಮಾನ ಮಾಡುವ ಕೆಲಸ ಸಂಸತ್‌ನಲ್ಲಿ ಮಾಡಿದೆ. ದೇಶ ಸಂವಿಧಾನದ ಬದ್ಧವಾಗಿ ನಡೆಯುತ್ತದೆ. ಅದರ ಪ್ರತಿನಿಧಿಯಾಗಿ ಉಪ ರಾಷ್ಟ್ರಪತಿ ಕೆಲಸ ಮಾಡುತ್ತಾರೆ. ಅವರ ತೀರ್ಮಾನಕ್ಕೆ ಪ್ರತಿಭಟನೆ ಸೂಚಿಸುವ ನಿಟ್ಟಿನಲ್ಲಿ ಕಾಂಗ್ರೆಸ್ ಅವಮಾನಿಸಿದೆ. ಇದು ಅತೀರೇಕಕ್ಕೆ ಹೋಗಿ ಬ್ಯಾನರ್ಜಿ ಎಂಬುವವರು ಉಪರಾಷ್ಟ್ರಪತಿಗಳನ್ನು ಮಿಮಿಕ್ರಿ ಮಾಡುತ್ತಾರೆ. ಅಪಹಾಸ್ಯವಾಗಿ ಅಣುಕು ಪ್ರದರ್ಶನ ಮಾಡಿದ್ದಾರೆ. ಸ್ವತಃ ರಾಹುಲ್ ಗಾಂಧಿ ಇದನ್ನು ಚಿತ್ರೀಕರಿಸುತ್ತಾರೆ. ಇದನ್ನು ದೇಶದ ಜನತೆ ನೋಡಿದ್ದಾರೆ. ಇದು ಖಂಡನೀಯ ವಿಚಾರವಾಗಿದೆ ಎಂದರು.
ಹಿಂದುಳಿದ ವರ್ಗದಿಂದ ಬಂದ ಉಪ ರಾಷ್ಟ್ರಪತಿಗಳನ್ನು ಕಾಂಗ್ರೆಸ್ ಅವಮಾನ ಮಾಡುವ ಉದ್ದೇಶದಿಂದ ಈ ರೀತಿಯಾಗಿ ಮಾಡಿದೆ. ರೈತ ನಾಯಕನಾಗಿ ಹೋರಾಟದ ಮೂಲಕ ರಾಜಕೀಯಕ್ಕೆ ಬಂದು ಈಗ ಉಪ ರಾಷ್ಟ್ರಪತಿಯಾಗಿದ್ದಾರೆ. ಈ ಹಿಂದೆ ಕಾಂಗ್ರೆಸ್‌ನಲ್ಲಿದ್ದ ಅವರು, ನಂತರದಲ್ಲಿ ಬಿಜೆಪಿಗೆ ಬಂದು ಸಂಸದರಾಗಿ ಈಗ ಉಪ ರಾಷ್ಟ್ರಪತಿಗಳಾಗಿದ್ದಾರೆ. ಇದನ್ನು ಸಹಿಸದ ಕಾಂಗ್ರೆಸ್ ಈ ರೀತಿಯಾಗಿ ಅವಮಾನ ಮಾಡಿದೆ ಎಂದು ಮಲ್ಲಿಕಾರ್ಜುನ ದೂರಿದರು.ಬಿಜೆಪಿ ವಕ್ತಾರರಾದ ನಾಗರಾಜ್ ಬೇದ್ರೆ, ದಗ್ಗೆ ಶಿವಪ್ರಕಾಶ್, ಶಂಭು, ಪ್ರದೀಪ್, ಶೈಲಾ, ನಾಗರಾಜು, ಮನೋಜ್, ಪಾಂಡು, ಯಶವಂತ, ಕಿರಣ್, ಗೀರೀಶ್, ಲತಾ, ಸಂಜಯ್, ಕಾಂತರಾಜ್, ಪ್ರಕಾಶ್ ಓ ಗೌರಣ್ಣ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.