ಕರಾಟೆಯಂತಹ ಕ್ರೀಡೆ ಮಕ್ಕಳಲ್ಲಿ ಆತ್ಮಸ್ಥೈರ್ಯ ಹೆಚ್ಚಿಸುತ್ತದೆ: ಅಂಬರೀಷ್

KannadaprabhaNewsNetwork |  
Published : Oct 21, 2024, 12:37 AM IST
ಫೋಟೋ: ಜಯಪುರದಲ್ಲಿ ಐಡಿಯಲ್ ಸ್ಪೋರ್ಟ್ಸ್ ಮಾರ್ಷಲ್ ಆರ್ಟ್ಸ್ ಕರಾಟೆ ಅಸೋಸಿಯೇಷನ್ ಜಯಪುರ ಆಶ್ರಯದಲ್ಲಿ ನಡೆದ ದಸರಾ ಕರಾಟೆ ಶಿಬಿರದ ಸಮಾರೋಪ ಸಮಾರಂಭವು ಭಾನುವಾರ ನೆರವೇರಿತು. | Kannada Prabha

ಸಾರಾಂಶ

ಕೊಪ್ಪ, ಇಂದಿನ ಮಕ್ಕಳು ಅಂಕ ಗಳಿಕೆ ಹಿಂದೆ ಬಿದ್ದಿರುವ ಪರಿಣಾಮ ಸಮಾಜದಲ್ಲಿ ಹೇಗೆ ಬದುಕಬೇಕು, ಕಷ್ಟಗಳನ್ನು ಹೇಗೆ ಎದುರಿಸಬೇಕು ಎಂಬ ಅರಿವು ಪಡೆಯಲಾಗದೆ, ಸಣ್ಣ ಸಣ್ಣ ಸಮಸ್ಯೆಗಳಿಗೂ ಆತ್ಮಸ್ಥೈರ್ಯ ಕಳೆದುಕೊಳ್ಳುತ್ತಿದ್ದು, ಕರಾಟೆಯಂತಹ ಕ್ರೀಡೆಗಳು ಮಕ್ಕಳಲ್ಲಿ ಆತ್ಮಸ್ಥೈರ್ಯ ಹೆಚ್ಚಿಸುತ್ತದೆ ಎಂದು ಜಯಪುರ ಪೊಲೀಸ್ ಉಪನಿರೀಕ್ಷಕ ಅಂಬರೀಷ್ ಹೇಳಿದರು.

ಕನ್ನಡಪ್ರಭ ವಾರ್ತೆ, ಕೊಪ್ಪ

ಇಂದಿನ ಮಕ್ಕಳು ಅಂಕ ಗಳಿಕೆ ಹಿಂದೆ ಬಿದ್ದಿರುವ ಪರಿಣಾಮ ಸಮಾಜದಲ್ಲಿ ಹೇಗೆ ಬದುಕಬೇಕು, ಕಷ್ಟಗಳನ್ನು ಹೇಗೆ ಎದುರಿಸಬೇಕು ಎಂಬ ಅರಿವು ಪಡೆಯಲಾಗದೆ, ಸಣ್ಣ ಸಣ್ಣ ಸಮಸ್ಯೆಗಳಿಗೂ ಆತ್ಮಸ್ಥೈರ್ಯ ಕಳೆದುಕೊಳ್ಳುತ್ತಿದ್ದು, ಕರಾಟೆಯಂತಹ ಕ್ರೀಡೆಗಳು ಮಕ್ಕಳಲ್ಲಿ ಆತ್ಮಸ್ಥೈರ್ಯ ಹೆಚ್ಚಿಸುತ್ತದೆ ಎಂದು ಜಯಪುರ ಪೊಲೀಸ್ ಉಪನಿರೀಕ್ಷಕ ಅಂಬರೀಷ್ ಹೇಳಿದರು.ಭಾನುವಾರ ಜಯಪುರದಲ್ಲಿ ಐಡಿಯಲ್ ಸ್ಪೋರ್ಟ್ಸ್ ಮಾರ್ಷಲ್ ಆರ್ಟ್ಸ್ ಕರಾಟೆ ಅಸೋಸಿಯೇಷನ್ ಜಯಪುರ ಆಶ್ರಯದಲ್ಲಿ ನಡೆದ 15 ದಿನಗಳ ದಸರಾ ಕರಾಟೆ ಶಿಬಿರದ ಸಮಾರೋಪ ಕಾರ್ಯಕ್ರಮದಲ್ಲಿ ಮಾತನಾಡಿ,ಇಂದಿನ ಮಕ್ಕಳನ್ನು ಪುಸ್ತಕದ ಬದನೆಕಾಯಿಯಾಗಿ ಬೆಳೆಸಿ, ಹೆಚ್ಚು ಹೆಚ್ಚು ಅಂಕಗಳಿಕೆಗೆ ಪ್ರಾಧಾನ್ಯತೆ ನೀಡುತ್ತಿರುವುದರಿಂದ ಅವರು ಪ್ರಾಪಂಚಿಕ ಜ್ಞಾನವಿಲ್ಲದೆ ಅತೀಸೂಕ್ಷ್ಮವಾಗಿ ಬೆಳೆಯುತ್ತಿದ್ದಾರೆ. ಇದರಿಂದ ಓದಿನ ನಂತರದ ಜೀವನದಲ್ಲಿ ಸಮಾಜದಲ್ಲಿರುವ ಸ್ಪರ್ಧೆ ಎದುರಿಸಿ ಜೀವನ ನಡೆಸಲಾಗದೆ ಅಂತಹ ಮಕ್ಕಳು ಆತ್ಮಸ್ಥೈರ್ಯ ಕಳೆದುಕೊಳ್ಳುತ್ತಿದ್ದಾರೆ. ಓದಿನ ಜೊತೆಗೆ ಕರಾಟೆಯಂತಹ ಕ್ರೀಡೆಗಳಲ್ಲಿ ಮಕ್ಕಳನ್ನು ತೊಡಗಿಸಬೇಕು ಎಂದರು.

ಬಿಜಿಎಸ್ ಶಿಕ್ಷಣ ಸಂಸ್ಥೆ ಗೌರವ ಕಾರ್ಯದರ್ಶಿ ಎ.ಸಿ.ವಜ್ರಪ್ಪ ಮಾತನಾಡಿ, ಕರಾಟೆ ಇಂದಿನ ಯುವಜನತೆಗೆ ಅತ್ಯಗತ್ಯ. ಹೆಣ್ಣು ಮಕ್ಕಳಿಗೆ ದುರ್ಜನ ರಿಂದ ತಮ್ಮನ್ನು ರಕ್ಷಿಸಿಕೊಳ್ಳಲು ಕರಾಟೆ ಅನಿವಾರ್ಯ ಸಾಧನ. ಹೆಚ್ಚು ಹೆಚ್ಚು ಮಕ್ಕಳು ಕರಾಟೆ ಕಲಿಕೆಗೆ ಆಸಕ್ತಿವಹಿಸಬೇಕು ಎಂದರು.

ಐಡಿಯಲ್ ಸ್ಪೋರ್ಟ್ಸ್ ಮಾರ್ಷಲ್ ಆರ್ಟ್ಸ್ ಕರಾಟೆ ಅಸೋಸಿಯೇಷನ್ ಜಯಪುರದ ಅಧ್ಯಕ್ಷ ಕಿಬ್ಳಿ ಪ್ರಸನ್ನ ಕುಮಾರ್ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಸಮಾಜದಲ್ಲಿ ವಿದ್ಯಾವಂತರ ಸಂಖ್ಯೆ ಜಾಸ್ತಿಯಾಗುತ್ತಿದೆ. ಆದರೂ, ನೈತಿಕತೆ, ಸಾಮಾಜಿಕ ಮೌಲ್ಯ ಹೊಂದಿದ ವ್ಯಕ್ತಿಗಳ ಸಂಖ್ಯೆ ಕಡಿಮೆ ಯಾಗುತ್ತಿದೆ. ಇದರ ಪರಿಣಾಮ ಸಮಾಜದಲ್ಲಿ ಮಹಿಳಾ ದೌರ್ಜನ್ಯ, ಅಪರಾಧ ಚಟುವಟಿಕೆ ಹೆಚ್ಚುತ್ತಿವೆ. ಇದನ್ನೆಲ್ಲ ಎದುರಿಸಲು ಕರಾಟೆಯಂತಹ ಆತ್ಮ ರಕ್ಷಣಾ ಕಲೆ ಕಲಿತು ಯುವ ಜನತೆ ಸಬಲರಾಗಬೇಕಿದೆ. ಈ ಕಾರಣಕ್ಕೆ ದಸರಾ ಕರಾಟೆ ಶಿಬಿರ ಆಯೋಜಿಸಿದೆ ಎಂದರು.

ಕರಾಟೆ ಶಿಕ್ಷಕ ಆರ್.ಮಣಿಕಂಠ, ಶಿಬಿರಾರ್ಥಿಗಳ ಮೂಲಕ ವಿಶೇಷ ಕರಾಟೆ ಪ್ರಾಕಾರಗಳನ್ನು ಪ್ರದರ್ಶಿಸಿದರು. ಶಿಬಿರಾರ್ಥಿಗಳಿಗೆ ಪ್ರಮಾಣ ಪತ್ರ ಹಾಗೂ ಪದಕಗಳನ್ನು ವಿತರಿಸಿ, ವಿವಿಧ ಕ್ರೀಡೆಗಳಲ್ಲಿ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದವರನ್ನು ಅಭಿನಂದಿಸಲಾಯಿತು.

ಕಾರ್ಯಕ್ರಮದಲ್ಲಿ ಕ್ಲಬ್ ಕಾರ್ಯದರ್ಶಿ ವಿಶ್ವನಾಥ್ ಗುಡ್ಡೇತೋಟ, ಜಯಪುರ ಗ್ರಾಪಂ ಸಂಪತ್, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ರಮೇಶ್, ಉಪಾಧ್ಯಕ್ಷ ಅಶ್ವಿನಿ ಶೆಟ್ಟಿ, ಮುಖ್ಯ ಶಿಕ್ಷಕಿ ರೇವತಿ, ಸ್ಪಂದನ ಸ್ವಯಂ ಸೇವಾ ಸಂಸ್ಥೆ ಸುಶ್ಮಿತ, ಹರೀಷ್, ವಿಶ್ವನಾಥ್ ಕೆಳಕೊಡಿಗೆ ಹಾಗೂ ಶಿಬಿರಾರ್ಥಿಗಳು, ಪೋಷಕರು ಇದ್ದರು.

PREV

Recommended Stories

ದಸರಾ ಉದ್ಘಾಟನೆಗೆ ಬಾನು : ಬಿಜೆಪಿ vs ಕಾಂಗ್ರೆಸ್ ಜಟಾಪಟಿ
ಧರ್ಮಸ್ಥಳ ಎಸ್‌ಐಟಿ ಅಧಿಕಾರಿ ಅನುಚೇತ್‌ ಅಮೆರಿಕ ಪ್ರವಾಸಕ್ಕೆ