ಕುಶಾಲನಗರ: ಕ್ರೀಡೆ ಮತ್ತು ಜೀವನದಲ್ಲಿ ಯಶಸ್ಸು ಸಾಧಿಸಲು ಕಠಿಣ ಪರಿಶ್ರಮ, ಸಮರ್ಪಣಾ ಭಾವ ಮತ್ತು ಬದ್ಧತೆಯೇ ಮೂಲಾಧಾರಗಳಿಗಿವೆ ಎಂದು ಕೊಡಗು ಸೈನಿಕ ಶಾಲೆಯ ಪ್ರಾಂಶುಪಾಲರಾದ ಕರ್ನಲ್ ಅಮರ್ ಜೀತ್ ಸಿಂಗ್ ಹೇಳಿದರು. ಅಖಿಲ ಭಾರತ ಸೈನಿಕ ಶಾಲೆಗಳ ಗ್ರೂಪ್ ಹೆಚ್ ರಾಷ್ಟ್ರೀಯ ಕ್ರೀಡಾಕೂಟವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಸೈನಿಕ ಶಾಲಾ ಪರಿವಾರದೊಳಗೆ ಬಲವಾದ ಸಂಬಂಧವನ್ನು ಬೆಸೆಯಲು, ಶಾಶ್ವತವಾದ ಒಡನಾಟದ ಭಾವನೆಯನ್ನು ಮತ್ತು ಕ್ರೀಡೆ ಹಾಗೂ ಅಥ್ಲೆಟಿಕ್ಸ್ ಕಡೆಗೆ ಸಾಮೂಹಿಕ ಬದ್ಧತೆಯನ್ನು ಬೆಳೆಸಿಕೊಳ್ಳಲು ಕರೆ ನೀಡಿದರು.
ಕ್ರೀಡಾಕೂಟದಲ್ಲಿ ಪಾಲ್ಗೊಳ್ಳುತ್ತಿರುವ ಸಂಸ್ಥೆಗಳು: ತಮಿಳುನಾಡಿನ ಅಮರಾವತಿನಗರ ಸೈನಿಕ ಶಾಲೆ, ಆಂಧ್ರಪ್ರದೇಶದ ಕಲಿಕಿರಿ ಸೈನಿಕ ಶಾಲೆ, ಕೇರಳದ ಕಾಸರಗೋಡು/ಕಾಳಕೊಟ್ಟಂ ಸೈನಿಕ ಶಾಲೆ (ಕಾಳಕೊಟ್ಟಂ), ಕರ್ನಾಟಕದ ಕೊಡಗು ಸೈನಿಕ ಶಾಲೆ, ಮೈಸೂರಿನ ವಿವೇಕ ಸ್ಕೂಲ್ ಆಫ್ ಎಕ್ಸಲೆನ್ಸ್ ಸೈನಿಕ ಶಾಲೆ, ಕೇರಳದ ಕೋಯಿಕ್ಕೋಡ್ನ ವೇದವ್ಯಾಸ ವಿದ್ಯಾಲಯ ಹಿರಿಯ ಮಾಧ್ಯಮಿಕ ಶಾಲೆ, ತಮಿಳುನಾಡಿನ ತೂತುಕುಡಿಯ ದಿ ವಿಕಾಸ ಸೈನಿಕ ಶಾಲೆ, ಕೇರಳದ ಎರ್ನಾಕುಲಂನ ಶ್ರೀ ಶಾರದಾ ವಿದ್ಯಾಲಯ ಸೈನಿಕ ಶಾಲೆ, ಕೇರಳದ ಆಲಪ್ಪುಳದ ವಿದ್ಯಾಧೀರ ವಿದ್ಯಾಪೀಠಂ ಸೆಂಟ್ರಲ್ ಸೈನಿಕ ಶಾಲೆ, ತಮಿಳುನಾಡಿನ ಮಧುರೆಯ ವಲ್ಲಭ ವಿದ್ಯಾಲಯ ಸೈನಿಕ ಶಾಲೆ ಹಾಗೂ ತಮಿಳುನಾಡಿನ ನಾಮಕ್ಕಲ್ನ ಎಸ್ ಆರ್ ಐ ಎಸ್ ಪಿ ಕೆ ಪಬ್ಲಿಕ್ ಸೀನಿಯರ್ ಸೆಕೆಂಡರಿ ಸೈನಿಕ ಶಾಲೆಗಳು ಸಮಾರಂಭದಲ್ಲಿ ಪಾಲ್ಗೊಂಡಿವೆ.
ಉದ್ಘಾಟನಾ ಸಮಾರಂಭದಲ್ಲಿ ಕ್ರೀಡಾಜ್ಯೋತಿ ಬೆಳಗಿಸುವುದು ಮತ್ತು ರಿಲೇ ಓಟದೊಂದಿಗೆ ಏಕತೆ, ನ್ಯಾಯಯುತ ಆಟ ಮತ್ತು ಕ್ರೀಡಾ ಶ್ರೇಷ್ಠತೆಯನ್ನು ಬಿಂಬಿಸುವ ಪ್ರತಿಜ್ಞಾವಿಧಿ ಸ್ವೀಕಾರ ಸಮಾರಂಭ ನಡೆಯಿತು. 13 ರಿಂದ 18 ರ ತನಕ ನಿಗದಿಯಾಗಿರುವ ಈ ಕ್ರೀಡಾಕೂಟದಲ್ಲಿ ಬಾಲಕ ಮತ್ತು ಬಾಲಕಿಯರ ವಿಭಾಗಗಳಲ್ಲಿ ಬಾಸ್ಕೆಟ್ಬಾಲ್, ವಾಲಿಬಾಲ್ ಮತ್ತು ಅಥ್ಲೆಟಿಕ್ಸ್ ಸ್ಪರ್ಧೆಗಳೊಂದಿಗೆ ಚರ್ಚಾ ಸ್ಪರ್ಧೆ ಹಾಗೂ ರಸಪ್ರಶ್ನೆ ಸ್ಪರ್ಧೆಗಳು ನಡೆಯಲಿವೆ.ಕಾರ್ಯಕ್ರಮದಲ್ಲಿ ಉಪ ಪ್ರಾಂಶುಪಾಲರಾದ ವಿಂಗ್ ಕಮಾಂಡರ್ ಮೊಹಮ್ಮದ್ ಶಾಜಿ, ಆಡಳಿತ ಅಧಿಕಾರಿ ಸ್ಕ್ವಾಡ್ರನ್ ಲೀಡರ್ ದೀಪಕ್ ನಾಯಕ್, ಶಾಲಾ ವೈದ್ಯಾಧಿಕಾರಿ ಡಾ. ಅಶೋಕ್ ಕುಮಾರ್, ಹಿರಿಯ ಎನ್. ವಿಬಿನ್ ಕುಮಾರ್, ಎನ್ ಸಿ ಸಿ ಅಧಿಕಾರಿಗಳು, ಬೋಧಕ-ಬೋಧಕೇತರ ವರ್ಗ, ತರಬೇತುದಾರರು, ತಂಡದ ವ್ಯವಸ್ಥಾಪಕರು ಮತ್ತು ತಾಂತ್ರಿಕ ಅಧಿಕಾರಿಗಳು ಇದ್ದರು.