45 ಕೋಟಿ ರು. ವೆಚ್ಚದ ಕ್ರೀಡಾ ತರಬೇತಿ ಕೇಂದ್ರ: ಪೊನ್ನಣ್ಣ

KannadaprabhaNewsNetwork |  
Published : Jun 16, 2026, 02:30 AM IST
 | Kannada Prabha

ಸಾರಾಂಶ

ವಿರಾಜಪೇಟೆ ತಾಲೂಕಿನ ವಿ. ಬಾಡಗ ಬಳಿ ನಿರ್ಮಾಣವಾಗುತ್ತಿರುವ ‘ಕ್ರೀಡಾ ತರಬೇತಿ ಕೇಂದ್ರ’ದ ಆಡಳಿತ ಕಟ್ಟಡ ಕಾಮಗಾರಿಯನ್ನು ಶಾಸಕ ಎ.ಎಸ್. ಪೊನ್ನಣ್ಣ ಅವರು ಸೋಮವಾರ ಭೇಟಿ ನೀಡಿ ಪರಿಶೀಲಿಸಿದರು.

ಕನ್ನಡಪ್ರಭ ವಾರ್ತೆ ಮಡಿಕೇರಿ

ವಿರಾಜಪೇಟೆ ತಾಲೂಕಿನ ವಿ. ಬಾಡಗ ಬಳಿ ನಿರ್ಮಾಣವಾಗುತ್ತಿರುವ ‘ಕ್ರೀಡಾ ತರಬೇತಿ ಕೇಂದ್ರ’ದ ಆಡಳಿತ ಕಟ್ಟಡ ಕಾಮಗಾರಿಯನ್ನು ಶಾಸಕ ಎ.ಎಸ್. ಪೊನ್ನಣ್ಣ ಅವರು ಸೋಮವಾರ ಭೇಟಿ ನೀಡಿ ಪರಿಶೀಲಿಸಿದರು.

ಸುಮಾರು 11 ಎಕರೆ ಜಾಗದಲ್ಲಿ ಅಥ್ಲೆಟಿಕ್ ಮಾದರಿಯಲ್ಲಿ ನಿರ್ಮಾಣ ಮಾಡಲುದ್ದೇಶಿಸಿರುವ ಕ್ರೀಡಾ ತರಬೇತಿ ಕೇಂದ್ರದ ಆಡಳಿತ ಭವನ ಜತೆಗೆ ಇತರ ಕಾಮಗಾರಿಯ ಜಾಗವನ್ನು ಶಾಸಕರು ವೀಕ್ಷಿಸಿದರು.

ಸುಮಾರು 45 ಕೋಟಿ ರು. ಯೋಜನಾ ವೆಚ್ಚದಲ್ಲಿ ಕ್ರೀಡಾ ತರಬೇತಿ ಕೇಂದ್ರ ಹಾಗೂ ವಸತಿ ನಿಲಯ ಸೇರಿದಂತೆ ವಿವಿಧ ಕಾಮಗಾರಿ ಕೈಗೊಳ್ಳಲು ಉದ್ದೇಶಿಸಲಾಗಿದೆ. ಕ್ರೀಡಾ ತರಬೇತಿ ಕೇಂದ್ರ ವ್ಯಾಪ್ತಿಯಲ್ಲಿ ಪ್ರಥಮ ಹಂತದಲ್ಲಿ 2 ಕೋಟಿ ರು. ವೆಚ್ಚದಲ್ಲಿ ಆಡಳಿತ ಭವನ ನಿರ್ಮಾಣವಾಗುತ್ತಿದ್ದು, ಈ ಕಾಮಗಾರಿಯನ್ನು ಶಾಸಕರು ಪರಿಶೀಲಿಸಿದರು.

ಆಡಳಿತ ಭವನದಲ್ಲಿ ನೆಲ ಮಹಡಿ ಹಾಗೂ ಮೊದಲ ಮಹಡಿ ಇರಲಿದ್ದು, ಒಳಾಂಗಣ ಮತ್ತು ಹೊರಾಂಗಣ ಕ್ರೀಡಾ ತರಬೇತಿ ಕೇಂದ್ರಗಳು ನಿರ್ಮಾಣವಾಗಲಿದೆ. ಒಳಾಂಗಣದಲ್ಲಿ ಶಟಲ್ ಬ್ಯಾಡಿಮಿಂಟನ್, ಟೇಬಲ್ ಟೆನ್ನಿಸ್, ಸ್ಕ್ವಾಷ್, ಜಿಮ್ಮು, ಹೊರಾಂಗಣದಲ್ಲಿ ಹಾಕಿ ಟರ್ಪ್, ಈಜುಕೊಳ, ಕ್ರಿಕೆಟ್, ವಾಲಿಬಾಲ್, ಫೂಟ್ ಬಾಲ್ ಹೀಗೆ ವಿವಿಧ ರೀತಿಯ ಕ್ರೀಡೆಗೆ ಸಂಬಂಧಿಸಿದಂತೆ ಕ್ರೀಡಾ ತರಬೇತಿ ಕೇಂದ್ರ ಒಳಗೊಂಡಿದೆ.

ಆಡಳಿತ ಭವನ ನಿರ್ಮಾಣದಲ್ಲಿ ನೆಲ ಮಹಡಿ ಮತ್ತು ಮೊದಲ ಮಹಡಿಯಲ್ಲಿ ಕಚೇರಿ ಜೊತೆಗೆ ಒಳಾಂಗಣ ಕ್ರೀಡಾ ಚಟುವಟಿಕೆಯ ತರಬೇತಿ ಕೇಂದ್ರಗಳು ನಿರ್ಮಾಣವಾಗಲಿದೆ.

ಬಳಿಕ ಸುದ್ದಿಗಾರರ ಜೊತೆ ಮಾತನಾಡಿದ ಶಾಸಕ ಪೊನ್ನಣ್ಣ ಅವರು, ಕ್ರೀಡಾ ತರಬೇತಿ ಕೇಂದ್ರ ಸ್ಥಾಪನೆಗೆ ಯೋಜನೆ ರೂಪಿಸಲಾಗಿದ್ದು, ಕಾಮಗಾರಿ ಪ್ರಗತಿ ಹಂತದಲ್ಲಿದೆ. ಟೆನಿಸ್, ಜಿಮ್‌, ಹಾಕಿ ಟರ್ಪ್, ಅಥ್ಲೆಟಿಕ್ ಟ್ರ್ಯಾಕ್, ಈಜುಕೊಳ, ಟೇಬಲ್ ಟೆನಿಸ್, ಬಾಲಕ ಮತ್ತು ಬಾಲಕಿಯರಿಗೆ ಪ್ರತ್ಯೇಕ ವಿದ್ಯಾರ್ಥಿ ನಿಲಯ, ವೈದ್ಯಕೀಯ ವಿಭಾಗ ಸೇರಿದಂತೆ ಒಂದು ಸುಸಜ್ಜಿತ ಅಂತಾರಾಷ್ಟ್ರೀಯ ಮಾದರಿಯಲ್ಲಿ ಕ್ರೀಡಾ ತರಬೇತಿ ಕೇಂದ್ರ ಹಾಗೂ ವಸತಿ ನಿಲಯ ಕಾಮಗಾರಿಗಳು ಹಂತ ಹಂತವಾಗಿ ನಿರ್ಮಾಣಗೊಳ್ಳಲಿದೆ ಎಂದು ಮಾಹಿತಿ ನೀಡಿದರು.

ಕ್ರೀಡಾ ತರಬೇತಿ ಕೇಂದ್ರದಲ್ಲಿ 50 ಬಾಲಕರಿಗೆ ಮತ್ತು 50 ಬಾಲಕಿಯರಿಗೆ ಪ್ರತ್ಯೇಕ ವಸತಿ ನಿಲಯ ನಿರ್ಮಾಣವಾಗಲಿದೆ. ಹೆಚ್ಚು ಬೇಡಿಕೆ ಇದ್ದಲ್ಲಿ ಸಂಖ್ಯೆ ಹೆಚ್ಚಿಸಲಾಗುವುದು. ಸ್ಥಳೀಯರಿಗೆ ಆದ್ಯತೆ ನೀಡಲಾಗುವುದು. ಸರ್ಕಾರದ ನಿಯಮದಂತೆ ಎಲ್ಲ ವರ್ಗದವರಿಗೆ ಆದ್ಯತೆ ನೀಡಲಾಗುವುದು ಎಂದು ಶಾಸಕ ಎ.ಎಸ್. ಪೊನ್ನಣ್ಣ ಹೇಳಿದರು.

ಈಗಾಗಲೇ ಮುಖ್ಯಮಂತ್ರಿ ಅವರು ಕ್ರೀಡಾ ತರಬೇತಿ ಕೇಂದ್ರ ನಿರ್ಮಾಣಕ್ಕೆ ಬಜೆಟ್‍ನಲ್ಲಿ ಪ್ರಸ್ತಾಪ ಮಾಡಿದ್ದಾರೆ. ಆ ನಿಟ್ಟಿನಲ್ಲಿ ಹಣ ಬಿಡುಗಡೆಯಾಗಲಿದೆ. ಸದ್ಯ ರಾಜ್ಯಸಭಾ ಸದಸ್ಯರಾದ ಅಜಯ್ ಮಾಕನ್ ಅವರಿಂದ ಅನುದಾನ ಬಿಡುಗಡೆಯಾಗಿದ್ದು, ಆಡಳಿತ ಭವನ ನಿರ್ಮಾಣ ಆಗುತ್ತಿದೆ. ಮುಂದಿನ ಎರಡು ವರ್ಷದಲ್ಲಿ ಸುಸಜ್ಜಿತ ಕ್ರೀಡಾ ತರಬೇತಿ ಕೇಂದ್ರ ಆರಂಭವಾಗಲಿದೆ. ಹಂತ ಹಂತವಾಗಿ ಕಾಮಗಾರಿಗಳು ನಡೆಯಲಿವೆ ಎಂದು ಪೊನ್ನಣ್ಣ ನುಡಿದರು.

ಒಟ್ಟಾರೆ ಸುಮಾರು 45 ಕೋಟಿ ರು. ವೆಚ್ಚದ ಯೋಜನಾ ಕಾಮಗಾರಿಯಾಗಿದ್ದು, ಸುಸಜ್ಜಿತ ಕ್ರೀಡಾ ತರಬೇತಿ ಕೇಂದ್ರ ಹಾಗೂ ವಸತಿ ನಿಲಯ ನಿರ್ಮಾಣವಾಗಲಿದೆ ಎಂದು ಶಾಸಕರು ಹೇಳಿದರು. ವಿ. ಬಾಡಗ ಗ್ರಾಮದ ಬಳಿ ಗುರುತಿಸಲಾಗಿರುವ ಜಾಗದ ಸುತ್ತ ಬೆಟ್ಟ ಗುಡ್ಡಗಳು ಹಚ್ಚಹಸಿರಿನಿಂದ ಕೂಡಿದ್ದು, ಸುಸಜ್ಜಿತ ಕ್ರೀಡಾ ತರಬೇತಿ ಕೇಂದ್ರ ನಿರ್ಮಾಣವಾಗುತ್ತಿರುವುದು ವಿಶೇಷವಾಗಿದೆ.

ಕಾಡಾನೆ ಹಾವಳಿ ನಿಯಂತ್ರಣ ಸಂಬಂಧ ಪತ್ರಕರ್ತರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಶಾಸಕ ಎ.ಎಸ್. ಪೊನ್ನಣ ಅವರು ಕಾಡಾನೆ ಹಾವಳಿ ಹಲವು ವರ್ಷಗಳಿಂದ ಸಮಸ್ಯೆಯಾಗಿ ಉಳಿದಿದ್ದು, ಕಾಡಾನೆಗಳ ಸಂಖ್ಯೆ ಹೆಚ್ಚಾಗಿದ್ದು, ಆ ನಿಟ್ಟಿನಲ್ಲಿ ಕಾಡಾನೆ ಹಾವಳಿ ನಿಯಂತ್ರಣಕ್ಕೆ ಪ್ರತಿಯೊಬ್ಬರ ಜವಾಬ್ದಾರಿ ಇದೆ ಎಂದರು.

ವರ್ಷದಿಂದ ವರ್ಷಕ್ಕೆ ಕಾಡಾನೆಗಳ ಸಂಖ್ಯೆ ಹೆಚ್ಚಾಗುತ್ತಿದೆ. ಈ ಕಾಡಾನೆಗಳ ನಿಯಂತ್ರಣ ಸಂಬಂಧ ಹಲವು ಯೋಜನೆ ರೂಪಿಸಲಾಗಿದೆ. ಆನೆಕಂದಕ, ತಂತಿಬೇಲಿ, ರೈಲ್ವೆ ಬ್ಯಾರಿಕೇಡ್ ನಿರ್ಮಾಣ ಹೀಗೆ ಹಲವು ಕ್ರಮ ಕೈಗೊಳ್ಳಲಾಗಿದೆ. ಇದಕ್ಕೆ ಶಾಶ್ವತ ಪರಿಹಾರ ಒದಗಿಸಬೇಕಿದ್ದು, ಪಕ್ಷಾತೀತವಾಗಿ ಎಲ್ಲರೂ ಜೊತೆಗೂಡಿ ಕಾರ್ಯಕ್ರಮ ರೂಪಿಸಬೇಕಿದೆ ಎಂದು ಹೇಳಿದರು.ಕಾಮಗಾರಿಗೆ ಟಾರು ಕೊರತೆ: ರಸ್ತೆ ಕಾಮಗಾರಿ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಶಾಸಕರು ಹಣ ನೀಡಿದರೂ ಸಹ ಟಾರು ಸಿಗುತ್ತಿಲ್ಲ. ಯುದ್ದದಿಂದಾಗಿ ಜನರು ತತ್ತರಿಸುವಂತಾಗಿದೆ. ಇಂಧನ ಸರಿಯಾಗಿ ಪೂರೈಕೆಯಾಗುತ್ತಿಲ್ಲ. ವ್ಯವಸಾಯ ಆಧರಿತ ಜಿಲ್ಲೆಯಾದ ಕೊಡಗು ಟ್ರ್ಯಾಕ್ಟರ್ ಮತ್ತು ಟಿಲ್ಲರ್‌ಗಳಿಗೆ ಇಂಧನ ಸಿಗದೆ ತೊಂದರೆ ಅನುಭವಿಸುವಂತಾಗಿದೆ ಎಂದರು.

ವಿರಾಜಪೇಟೆ ಕ್ಷೇತ್ರದಲ್ಲಿ ಅನೇಕ ರಸ್ತೆಗಳ ಅಭಿವೃದ್ಧಿಗೆ ಟೆಂಡರ್ ಆಗಿದೆ. ಆದರೆ ಟಾರಿನ ತೊಂದರೆಯಿಂದ ರಸ್ತೆ ಕಾಮಗಾರಿಗಳು ನಿಂತಿವೆ. ದೇಶದ ನಾಗರಿಕರ ರಕ್ಷಣೆ ಪ್ರತಿಯೊಬ್ಬರ ಆದ್ಯತೆ ಆಗಬೇಕು ಎಂದರು.

ಗ್ಯಾರಂಟಿ ಯೋಜನಾ ಅನುಷ್ಠಾನ ಸಮಿತಿ ತಾಲೂಕು ಘಟಕದ ಅಧ್ಯಕ್ಷ ಕಾಳೇಮಾಡ ಪ್ರಶಾಂತ್, ಸ್ಥಳೀಯರಾದ ಕಂಜಿತಂಡ ಗಣಿ ಮೊಣ್ಣಪ್ಪ, ಕಂಜಿತಂಡ ಪೂವಣ್ಣ, ಕೊಂಗಂಡ ಕಾಶಿ ಕಾವೇರಪ್ಪ, ಕೊಲ್ಲೀರ ಬೋಪಣ್ಣ, ಉಮೇಶ್ ಕೇಚಮಯ್ಯ, ಗಿರೀಶ್ ಸುಂದರ, ಕೋಲತಂಡ ರಘು ಮಾಚಯ್ಯ, ಸೂರಜ್ ಹೊಸೂರು, ಕೇಚಮಾಡ ಸಿದ್ದು ನಾಚಪ್ಪ, ಭಟ್ಟಕಾಳಂಡ ರಾಜ ಇತರರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಡಿಕೇರಿ: 3 ಲಕ್ಷ ರು. ಮೌಲ್ಯದ ಸವಲತ್ತು ವಿತರಣೆ
ಹವಾಮಾನ ವೈಪರೀತ್ಯ: ಜಿಲ್ಲೆಯಲ್ಲಿ ಭತ್ತ ಕೃಷಿ ಭಾರಿ ಕುಸಿತ