ಕಾರಟಗಿ: ತಾಲೂಕಿನ ಸರ್ಕಾರಿ ನೌಕರರಲ್ಲಿ ಪ್ರತಿಭಾವಂತ ಕ್ರೀಡಾಪಟುಗಳಿದ್ದಾರೆ. ಈಗಾಗಲೇ ಜಿಲ್ಲಾ ಮಟ್ಟದ ಕ್ರೀಡಾಕೂಟದ ಖೋಖೋ ಸಹಿತ ವಿವಿಧ ಸ್ಪರ್ಧೆಗಳಲ್ಲಿ ಜಯ ಸಾಧಿಸಿ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ರಾಜ್ಯಮಟ್ಟದಲ್ಲೂ ವಿಜೇತರಾಗಿ ತಾಲೂಕಿನ ಕೀರ್ತಿ ಹೆಚ್ಚಿಸಬೇಕು ಎಂದು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಹನುಮಂತಪ್ಪ ತೊಂಡಿಹಾಳ ಕ್ರೀಡಾಪಟುಗಳಿಗೆ ಕರೆ ನೀಡಿದರು.
ಮೇ ೨೩,೨೪ ಮತ್ತು ೨೫ರಂದು ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ನೇತೃತ್ವದಲ್ಲಿ ರಾಜ್ಯ ಮಟದ ಕ್ರೀಡಾಕೂಟ ನಡೆಯಲಿವೆ. ನಮ್ಮ ತಾಲೂಕಿನ ನೌಕರರು ಮತ್ತಷ್ಟು ತರಬೇತಿ ಪಡೆದು ರಾಜ್ಯ ಮಟ್ಟದಲ್ಲಿಯೂ ಜಯ ಸಾಧಿಸಲಿ.ಅವರಿಗೆ ಬೇಕಾದ ಸಹಕಾರ ತಾಲೂಕು ಘಟಕ ನೀಡಲಿದೆ ಎಂದರು.
ಬಳಿಕ ಜೆರ್ಸಿ ಕೊಡುಗೆಯಾಗಿ ನೀಡಿದ ಯುವ ಮುಖಂಡ ಸಿ.ಎಚ್.ರವಿನಂದ ಮಾತನಾಡಿ, ಅಧಿಕ ಕಾರ್ಯದೊತ್ತಡದ ನಡುವೆಯೂ ಸರ್ಕಾರಿ ನೌಕರರು ಆಟೋಟಗಳಲ್ಲಿ ಭಾಗವಹಿಸಿರುವುದು ಸಂತಸದ ವಿಚಾರ. ಆರೋಗ್ಯದ ದೃಷ್ಠಿಯಿಂದ ಯಾವುದಾದರೂ ಕ್ರೀಡೆಯಲ್ಲಿ ತೊಡಗಿಸಿಕೊಳ್ಳುವುದು ಮುಖ್ಯವಾದ ಹವ್ಯಾಸವಾಗಿದ್ದು, ನಮ್ಮಲ್ಲಿನ ಪ್ರತಿಭೆ ರಾಜ್ಯಮಟ್ಟದ ಕ್ರೀಡಾಕೂಟದಲ್ಲಿ ಪ್ರಶಸ್ತಿ ವಿಜೇತರಾಗಿ ಕಾರಟಗಿಯ ಕೀರ್ತಿ ಹೆಚ್ಚಿಸಬೇಕು ಎಂದರು.ಬಳಿಕ ರಾಜ್ಯಮಟ್ಟದ ಕ್ರೀಡಾಕೂಟದಲ್ಲಿ ಭಾಗವಹಿಸಲಿರುವ ೫೦ ಕ್ರೀಡಾಪಟುಗಳಿಗೆ ಜೆರ್ಸಿ ಕೊಡುಗೆಯಾಗಿ ನೀಡಿ ಬೆಂಬಲ ನೀಡಿರುವ ಯುವ ಮುಖಂಡ ಸಿ.ಎಚ್.ರವಿನಂದ ಅವರನ್ನು ನೌಕರರ ಸಂಘದಿಂದ ಸನ್ಮಾನಿಸಿ ಗೌರವಿಸಲಾಯಿತು.