ಕನ್ನಡಪ್ರಭ ವಾರ್ತೆ ಪಾವಗಡ
ತೆಲುಗು ಪ್ರಭಾವವಿರುವ ತಾಲೂಕಿನ ಗಡಿ ಭಾಗದಲ್ಲಿ ಸಮ್ಮೇಳನ ರೂಪಿಸುವ ಮೂಲಕ ಕನ್ನಡದ ಕಂಪು ಹರಡುವಂತೆ ಮಾಜಿ ಸಚಿವ ವೆಂಕಟರಮಣಪ್ಪ ಕಸಾಪ ಪದಾಧಿಕಾರಿಗಳಿಗೆ ಕರೆ ನೀಡಿದರು.ಶನಿವಾರ ತಾಲೂಕಿನ ರಂಗಸಮುದ್ರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆಯಲ್ಲಿ ಆಯೋಜಿಸಿದ್ದ ವೈ.ಎನ್.ಹೊಸಕೋಟೆ ಹೋಬಳಿ ಮಟ್ಟದ ಕನ್ನಡ ಸಾಹಿತ್ಯ ಸಮ್ಮೇಳನದ ಉದ್ಘಾಟನೆ ನೆರೆವೇರಿಸಿ ಅವರು ಮಾತನಾಡಿದರು.ಕನ್ನಡ ಪರ ಸಂಘಸಂಸ್ಥೆಗಳ ಹೋರಾಟದ ಫಲವಾಗಿ ಇಂದು ತಾಲೂಕಿನಲ್ಲಿ ತಕ್ಕ ಮಟ್ಟಿಗೆ ಕನ್ನಡದ ವಾತವರಣ ಕಾಣಲು ಸಾಧ್ಯವಾಗಿದೆ.ನೀವು ಕನ್ನಡ ಭಾಷೆಯ ವಾತಾವರಣದ ಪ್ರದೇಶಗಳಲ್ಲಿ ಕಾರ್ಯಕ್ರಮ ಆಯೋಜನೆಯಿಂದ ಪ್ರಯೋಜನವಿಲ್ಲ. ಕಾರಣ, ಇಲ್ಲಿ ಮನೆಮನೆಯಲ್ಲೂ ಕನ್ನಡ ಮಾತನಾಡುತ್ತಾರೆ. ತೆಲುಗು ಪ್ರಭಾವವಿರುವ ಗಡಿ ಗ್ರಾಮಗಳಲ್ಲಿ ಸಮ್ಮೇಳನ ರೂಪಿಸುವ ಮೂಲಕ ಕನ್ನಡದ ಮಹತ್ವವನ್ನು ರೂಪಿಸಬೇಕಿದೆ ಎಂದರು.
ಕನ್ನಡಾಂಬೆಯು ತಾಯಿ ಇದ್ದಂತೆ, ಮೊದಲು ತಾಯಿಭಾಷೆಗೆ ಅದ್ಯತೆ ನೀಡಬೇಕು.ಬಳಿಕ ಇತರೆ ಭಾಷೆಗಳಿಗೆ ಪ್ರಾಮುಖ್ಯತೆ ನೀಡಬೇಕು. ಕನ್ನಡದ ಬಗ್ಗೆ ಜಾಗೃತಿ ಮೂಡಿಸುವ ಸಾಹಿತ್ಯ ಪರಿಷತ್ ನ ಅಧ್ಯಕ್ಷರೇ ತಮ್ಮ ಮಕ್ಕಳನ್ನು ಇಂಗ್ಲೀಷ್ ಕಲಿಕೆಯ ಕಾನ್ವೆಂಟ್‌ಗಳಿಗೆ ಸೇರಿಸಿ, ಇಲ್ಲಿ ಕನ್ನಡದ ಬಗ್ಗೆ ಮಾತನಾಡುತ್ತಾರೆ.ಇದು ಎಷ್ಟರ ಮಟ್ಟಿಗೆ ಸರಿ?. ಕನ್ನಡಕ್ಕೆ ಪ್ರಾಶಸ್ಯ ನೀಡುವುದಾದರೆ ಮೊದಲು ನಿಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗಳಿಗೆ ಸೇರಿಸಿ ಎಂದರು. ಸರ್ಕಾರಿ ಶಾಲೆಗಳಲ್ಲಿ ಆರ್ಹತೆಯ ಶಿಕ್ಷಕರಿರುತ್ತಾರೆ.ಆದರೆ ಕಾನ್ವೆಂಟ್‌ಗಳಲ್ಲಿ ಎಸ್‌ಎಸ್‌ಎಲ್‌ಸಿ ಹಾಗೂ ಪಿಯು ಪೇಲಾದ ಶಿಕ್ಷಕರಿರುತ್ತಾರೆ.ಅರ್ಹತೆಯ ಶಿಕ್ಷಕರಿರುವ ಶಾಲೆಗಳಿಗೆ ತಮ್ಮ ಮಕ್ಕಳನ್ನು ಕಳುಹಿಸದೇ, ಅನರ್ಹ ಶಿಕ್ಷಕರಿರುವ ಕಾನ್ವೆಂಟ್‌ಗಳಿಗೆ ಕಳುಹಿಸುವುದು ಸರಿಯೇ ಎಂದು ಅವರು ಪ್ರಶ್ನಿಸಿದರು.ಇತಿಹಾಸ ಸಂಶೋಧಕ ವಿ.ಆರ್.ಚಲುವರಾಜನ್ ಮಾತನಾಡಿ, ತೆಲುಗುಮಯವಾದ ತಾಲೂಕಿನಲ್ಲಿ 1963 ರಿಂದಲೂ ಆನೇಕ ಕಾರ್ಯಕ್ರಮಗಳ ಮೂಲಕ ಕನ್ನಡದ ಬಗ್ಗೆ ಜಾಗೃತಿ ಮೂಡಿಸಲಾಗಿದೆ. ಹೊರಗಿನವರಿಗೆ ಪಾವಗಡ ಎಂದರೆ ಭಯದ ಕಲ್ಪನೆ ಮೂಡುತ್ತಿದೆ. ಇದನ್ನು ಹೋಗಲಾಡಿಸಬೇಕು. ತಾಲೂಕಿನಲ್ಲಿ ಕನ್ನಡದ ವಾತವರಣದ ಕಾರ್ಯಕ್ರಮ ರೂಪಿಸಬೇಕಿದೆ ಎಂದು ತಿಳಿಸಿದರು.
ಹೋಬಳಿ ಘಟಕದ ಅಧ್ಯಕ್ಷ ಹೋ.ಮ.ನಾಗರಾಜ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಇದಕ್ಕೂ ಮುನ್ನ ಈಶ್ವರ ದೇವಸ್ಥಾನದಿಂದ ವೇದಿಕೆಗೆ ಸಮ್ಮೇಳನಾಧ್ಯಕ್ಷ ಅಂತರಗಂಗೆ ಶಂಕರಪ್ಪರನ್ನು ಮೆರವಣಿಗೆ ಮೂಲಕ ಕರೆತರಲಾಯಿತು. ಕಲಾವಿದರಾದ ಆರ್.ಎನ್.ಲಿಂಗಪ್ಪ,ವಿ.ಜಯರಾಮ್ ಹಾಗೂ ಬಲರಾಮ್ ನೇತೃತ್ವದ ಕಲಾತಂಡಗಳ ಪ್ರದರ್ಶನ ಜನಮನ ಸೆಳೆಯಿತು.ಸಾಹಿತಿ ಮೇ.ಘ.ಗಂಗಾಧರ್ ನಾಯ್ಕ್, ಕನ್ನಡ ಸೇವೆ ಇ.ವಿ.ಶ್ರೀಧರ್, ಗಡಿನಾಡು ಕನ್ನಡ ಎ.ಒ.ನಾಗರಾಜು,ಪಾರಂಪರಿಕ ವೈದ್ಯ ಓಬಳಾಪುರ ತಿಪ್ಪೇರುದ್ರಪ್ಪ,ಹಿರಿಯ ಕಲಾವಿದ ವೀರ್ಲಗೊಂದಿ ನಾಗರಾಜು, ಡಾ,ಡಿ.ಎಂ.ಅನಿಲ್‌ಕುಮಾರ್, ಜಾನಪದ ಕಲಾವಿದ ನಾಗರಾಜು, ಕ್ರೀಡಾ ವಿಭಾಗದಿಂದ ಹೊಸಕೋಟೆಯ ಬಿ.ಶ್ರೀನಿವಾಸ, ರಂಗಭೂಮಿ ಕಲಾವಿದ ರಂಗಸಮುದ್ರ ನಾರಾಯಣಪ್ಪ ಸೇರಿದಂತೆ ಸಾಧಕರನ್ನು ಸನ್ಮಾನಿಸಲಾಯಿತು.
7ನೇ ಸಾಹಿತ್ಯ ಸಮ್ಮೇಳನಾಧ್ಯಕ್ಷ ಹ.ರಾಮಚಂದ್ರಪ್ಪ ಹಾಗೂ ವಕೀಲ ಎಂ.ನಾಗೇಂದ್ರಪ್ಪ,ಮುಖಂಡರಾದ ಚಂದ್ರಶೇಖರರೆಡ್ಡಿ,ದೊಡ್ಡೇನಹಳ್ಳಿ ಮಾರಪ್ಪ,ರುದ್ರಮುನಿ, ಗ್ರಾಪಂ ಉಪಾಧ್ಯಕ್ಷೆ ಭವಾನಿ ಜಯರಾಮ್ ,ಸುರೇಶಾಚಾರ್, ಹನುಮಂತನಹಳ್ಳಿಯ ಶಿವಣ್ಣ ಸೇರಿ ಇತರೆ ಗೋಷ್ಠಿಗಳಲ್ಲಿ ಮಾಜಿ ಕಸಾಪ ಅಧ್ಯಕ್ಷ ಸಣ್ಣ ನಾಗಪ್ಪ, ಎಸ್.ಎನ್.ಪ್ರಸನ್ನಮೂರ್ತಿ,ಆರ್.ಟಿ.ಖಾನ್ ಕಾರನಾಗಪ್ಪ ಅಂಜಿನನಾಯಕ,ಪದ್ಮಾವತಮ್ಮ,ಬೆಂಗಳೂರು ಬಿಬಿಎಂಪಿ ಎಇಇ ಆರ್.ಟಿ.ಸೀತಾರಾಮ್,ಉಪನ್ಯಾಸಕ ಕುಮಾರ್ ಇಂದ್ರಬೆಟ್ಟ, ಲಿಂಗಮೂರ್ತಿ, ಪಿಡಿಒ ದಾದಲೂರಪ್ಪ ಹಾಗೂ ಇತರೆ ಗಣ್ಯರು ಉಪಸ್ಥಿತರಿದ್ದರು.