ವಾರ್ಷಿಕ ಸರ್ವ ಸದಸ್ಯರ ಮಹಾಸಭೆ । ಶೇರುದಾರರಿಗೆ ಶೇ.೧೫ ಲಾಭಾಂಶ
ಕನ್ನಡಪ್ರಭ ವಾರ್ತೆ ಸಂಡೂರುಸಂಡೂರು ಪಟ್ಟಣ ಸೌಹಾರ್ದ ಸಹಕಾರಿ ಬ್ಯಾಂಕ್ (ಎಸ್.ಪಿ.ಎಸ್ ಬ್ಯಾಂಕ್) ೨೦೨೪-೨೫ನೇ ಆರ್ಥಿಕ ವರ್ಷದಲ್ಲಿ ₹೨.೧೧ ಕೋಟಿ ನಿವ್ವಳ ಲಾಭ ಗಳಿಸಿದೆ. ಈ ಸಾಧನೆಗೆ ಆಡಳಿತ ಮಂಡಳಿ, ಬ್ಯಾಂಕಿನ ಸಿಬ್ಬಂದಿಯ ಪ್ರಾಮಾಣಿಕ ಸೇವೆ ಹಾಗೂ ಶೇರುದಾರರು ಮತ್ತು ಗ್ರಾಹಕರ ಸಹಕಾರ ಪ್ರಮುಖ ಕಾರಣವಾಗಿದೆ ಎಂದು ಬ್ಯಾಂಕಿನ ಸಂಸ್ಥಾಪಕ ಅಧ್ಯಕ್ಷ ಕೆ.ಎಸ್. ನಾಗರಾಜ ತಿಳಿಸಿದರು.
ಪಟ್ಟಣದ ರತ್ನದೀಪ ಸಭಾಂಗಣದಲ್ಲಿ ಶನಿವಾರ ನಡೆದ ಎಸ್.ಪಿ.ಎಸ್. ಬ್ಯಾಂಕಿನ ೨೮ನೇ ವಾರ್ಷಿಕ ಸರ್ವ ಸದಸ್ಯರ ಮಹಾಸಭೆಯನ್ನು ಉದ್ಘಾಟಿಸಿ ಮಾತನಾಡಿದರು.೨೦೨೫ರ ಆರ್ಥಿಕ ವರ್ಷದ ಅಂತ್ಯದಲ್ಲಿ ಬ್ಯಾಂಕಿನ ಠೇವಣಿ ₹೧೧೬.೧೦ ಕೋಟಿ ಇದ್ದು, ಸಾಲ ಮತ್ತು ಮುಂಗಡಗಳು ₹೩೫.೧೦ ಕೋಟಿ ಇರುತ್ತದೆ. ಬ್ಯಾಂಕಿನ ಸಾಲ ವಸೂಲಾತಿಯು ಉತ್ತಮವಾಗಿದ್ದು, ಬ್ಯಾಂಕಿನ ನಿವ್ವಳ ಎನ್‌ಪಿಎ ಶೇ. ೦ ಇದೆ ಎಂದರು.
ಮಾ.೩೧, ೨೦೨೫ಕ್ಕೆ ಕೊನೆಗೊಂಡ ಆರ್ಥಿಕ ವರ್ಷದಲ್ಲಿ ಬ್ಯಾಂಕ್ ಒಟ್ಟಾರೆ ₹೧೫೧.೨೧ ಕೋಟಿ ವಹಿವಾಟು ನಡೆಸಿದೆ. ಬ್ಯಾಂಕಿನ ಬಂಡವಾಳದ ನಿಧಿಯು ₹೧೩.೦೪ ಕೋಟಿಯಿಂದ ೧೪.೭೫ ಕೋಟಿಗೆ ಏರಿಕೆಯಾಗಿದೆ ಎಂದರು.ಪ್ರಾಸ್ತಾವಿಕವಾಗಿ ಮಾತನಾಡಿದ ಬ್ಯಾಂಕಿನ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಪ್ರಕಾಶ್ ಕೆ., ಬ್ಯಾಂಕಿನ ಸದಸ್ಯರ ಸಂಖೆ ೪೫೫೭ ಇದ್ದು, ಶೇರು ಬಂಡವಾಳ ₹೧೦೯.೪೫ ಲಕ್ಷ ಇದೆ. ಬ್ಯಾಂಕಿನ ವಿವಿಧ ಠೇವಣಿಗಳ ಮೊತ್ತ ₹೧೧೬.೧೦ ಕೋಟಿ ಇದೆ. ಠೇವಣಿ ಸಂಗ್ರಹದಲ್ಲಿ ಬ್ಯಾಂಕ್ ಪ್ರಸಕ್ತ ಸಾಲಿನಲ್ಲಿ ಶೇ. ೪.೪೫ ಪ್ರಗತಿ ಸಾಧಿಸಿದೆ. ಆರ್‌ಬಿಐ ನಿಯಮಾವಳಿಗಳ ಪ್ರಕಾರ ಬ್ಯಾಂಕ್ ೨೦೨೪-೨೫ನೇ ಸಾಲಿನಲ್ಲಿ ೩೫.೧೦ ಕೋಟಿಗಳಷ್ಟು ಸಾಲ ನೀಡಿದೆ. ಈ ವರ್ಷ ಪಟ್ಟಣದಲ್ಲಿ ಇನ್ನೆರಡು ಎಟಿಎಂ ಆರಂಭಿಸಲು ಚಿಂತನೆ ನಡೆಸಿದೆ. ಸಣ್ಣ ವ್ಯಾಪಾರಸ್ಥರಿಗೆ ಬ್ಯಾಂಕಿನಿಂದ ಕ್ಯೂಆರ್ ಕೋಡನ್ನು ನೀಡಲಾಗುತ್ತಿದೆ ಎಂದರು.
ಬ್ಯಾಂಕಿನ ಉಪಾಧ್ಯಕ್ಷ ಸಿ. ರವಿಶಂಕರ ಬ್ಯಾಂಕಿನ ಸರ್ವ ಸದಸ್ಯರಿಗೆ ಶೇ. ೧೫ರಷ್ಟು ಲಾಭಾಂಶ ನೀಡುವ ಪ್ರಸ್ತಾವವನ್ನು ಸಭೆಯಲ್ಲಿ ಮಂಡಿಸಿದರು. ಸದಸ್ಯರು ಒಪ್ಪಿಗೆ ಸೂಚಿಸಿದರು. ನಿರ್ದೇಶಕ ಮಯೂರ್ ಎ. ಲೆಕ್ಕ ಪರಿಶೋಧಕರ ವರದಿ, ಕೆ. ವೀರಪ್ಪನವರು ಲೆಕ್ಕ ಪರಿಶೋಧಕರ ವರದಿಯ ಪಾಲನಾ ವರದಿ, ಎಚ್. ವೀರೇಶ್ ನಿರ್ದೇಶಕ ಮಂಡಳಿ ರೂಪಿಸಿದ ವಾರ್ಷಿಕ ಕಾರ್ಯಾಚರಣೆ ವರದಿ, ಜೋತಿ ನಂಜುಂಡಪ್ಪನವರು ೨೦೨೫-೨೬ನೇ ಸಾಲಿನ ಬ್ಯಾಂಕಿನ ವಾರ್ಷಿಕ ಬಜೆಟ್ ಅನ್ನು ಹಾಗೂ ಬಿ.ಎಸ್. ಬೊಮ್ಮಯ್ಯನವರು ಸೇರಿಸಲ್ಪಟ್ಟ ಹಾಗೂ ಸಮಾಪನೆಗೊಂಡ ಸದಸ್ಯತ್ವದ ವರದಿ ಮಂಡಿಸಿದರು. ಸದಸ್ಯರು ಅನುಮೋದಿಸಿದರು.ಸನ್ಮಾನ:ಬ್ಯಾಂಕ್‌ನ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿ ೨೭ ವರ್ಷಗಳ ಕಾಲ ಸೇವೆ ಸಲ್ಲಿಸಿ ನಿವೃತ್ತರಾದ ಎಂ.ಎಸ್. ರೇಣುಕಾ ಅವರನ್ನು ಸನ್ಮಾನಿಸಲಾಯಿತು. ಎಂ.ಎಸ್. ರೇಣುಕಾ ಅವರು ತಮ್ಮ ಸೇವಾವಧಿಯಲ್ಲಿನ ಅನುಭವಗಳನ್ನು ಮೆಲುಕು ಹಾಕಿ, ಬ್ಯಾಂಕಿನ ಆಡಳಿತ ಮಂಡಳಿ, ಸಹೋದ್ಯೋಗಿಗಳು ಹಾಗೂ ಗ್ರಾಹಕರು ನೀಡಿದ ಸಹಕಾರ ಸ್ಮರಿಸಿದರು.
ವಿದ್ಯಾರ್ಥಿನಿಯರಾದ ನಿವೇದಿತಾ ಹಾಗೂ ಸಹನಾ ಪ್ರಾರ್ಥಿಸಿದರು. ಎಚ್. ವೀರೇಶ್ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಕೊಟ್ರಪ್ಪ ಎ. ವಂದಿಸಿದರು. ಬ್ಯಾಂಕಿನ ನಿರ್ದೇಶಕರಾದ ಸಿದ್ದಪ್ಪ ಅಂಕಮನಾಳ, ಕೆ.ಜೈ. ಭಾಸ್ಕರ, ಜಿ.ಎಂ. ಮಂಜುಳಾ, ಸದಸ್ಯರಾದ ಹಗರಿ ಬಸವರಾಜಪ್ಪ, ಸಿ.ಎಂ. ಶಿಗ್ಗಾವಿ, ಜೆ.ಎಂ. ಪ್ರಭಾಕರ್, ಟಿ.ಎಂ. ಶಿವಕುಮಾರ, ಸಿಬ್ಬಂದಿಗಳಾದ ಎ. ಕುಮಾರ್, ವಿಜಯಲಕ್ಷ್ಮೀ, ಎಂ. ರಾಮಚಂದ್ರ, ಎ. ಪೂಜಾ, ಮಹದೇವಪ್ಪ ಕರೂರ, ಜಿ. ವಿಶ್ವನಾಥ ಹಾಗೂ ಎಂ. ಜಗದೀಶ, ಸದಸ್ಯರು ಉಪಸ್ಥಿತರಿದ್ದರು.